ADVERTISEMENT

ಆಲಂಕಾರಿಕ ಮೀನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆದಿದೆ: ಶಶಿಧರ್

ಕುಶಾಲನಗರ: ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:11 IST
Last Updated 11 ಜುಲೈ 2025, 6:11 IST
ಕುಶಾಲನಗರ ಕೇರಳ ಸಮಾಜದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಉದ್ಘಾಟಿಸಿದರು
ಕುಶಾಲನಗರ ಕೇರಳ ಸಮಾಜದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಉದ್ಘಾಟಿಸಿದರು   

ಕುಶಾಲನಗರ: ಬಹು ಬೇಡಿಕೆಯನ್ನು ಹೊಂದಿರುವ ಆಲಂಕಾರಿಕ ಮೀನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆದಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಕೊಡಗು ಜಿಲ್ಲಾ ಪಂಚಾಯತಿ, ಜಿಲ್ಲಾ ಮೀನುಗಾರಿಕೆ ಇಲಾಖೆ ಹಾಗೂ ತಾಲ್ಲೂಕು ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಗುರುವಾರ ಇಲ್ಲಿನ ಕೇರಳ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೀನುಗಾರಿಕೆ ಲಾಭದಾಯಕ ಉದ್ಯಮವಾಗಿದೆ.ಕೃಷಿ ಮಾನವ ಮೊದಲ ಉದ್ಯಮವಾಗಿದ್ದರೂ ಕೂಡ ನಾಗರಿಕತೆಯ ಜೊತೆಯಲ್ಲಿ ಮೀನುಗಾರಿಕೆ ಬೆಳೆದು ಬಂದಿದೆ.ಇದು ಮೀನು ಕೃಷಿಕರ ಬದುಕನ್ನು ಹಸನುಗೊಳಿಸುವುದರೊಂದಿಗೆ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ‌ ಕೂಡ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ADVERTISEMENT

ಅಣೆಕಟ್ಟೆ, ಕೃಷಿ ಹೊಂಡ, ಕೆರೆ, ಕೃಷಿ ಭೂಮಿಯಲ್ಲಿ ಮೀನು ಉತ್ಪಾದನೆ ಉದ್ದಿಮೆ ಸಾಹಸದೊಂದಿಗೆ ಲಾಭದಾಯಕ ಕೂಡ ಎಂದ ಅವರು, ಮೀನು ಕೃಷಿಯಲ್ಲಿ ತೊಡಗುವವರೊಂದಿಗೆ ಇಲಾಖೆ ಹಾಗೂ ಸರ್ಕಾರ ಒತ್ತಾಸೆಯಾಗಿ ಸದಾ ಇರಬೇಕು ಎಂದರು.


ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಕಾರ್ಯಕ್ರಮ ಉದ್ಘಾಟಿಸಿದರು. ಮೀನು ವಿಜ್ಞಾನಿ ಹೀರಾಲಾಲ್ ಚೌಧರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ನಮಿಸಿದರು. ಮೀನು ತೊಟ್ಟಿಗೆ ಆಲಂಕಾರಿಕ ಮೀನುಗಳನ್ನು ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಂಪನ್ಮೂಲ ವ್ಯಕ್ತಿ, ಪ್ರಗತಿಪರ ಮೀನು ಕೃಷಿಕ ತೇಜಸ್ ನಾಣಯ್ಯ, ಮೀನು ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ಪ್ರಗತಿಪರ ಮೀನು ಕೃಷಿಕರಾದ ಸೋಮವಾರಪೇಟೆಯ ವಿಜಯಕುಮಾರ್ ಮಳ್ಳೂರು, ಪೊನ್ನಂಪೇಟೆಯ ಡೈಸಿ ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್, ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕೆ ಮಿಲನ್ ಕೆ.ಭರತ್, ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ನಾಮನಿರ್ದೇಶಿತ ಸದಸ್ಯ ನವೀನ್ ಕುಮಾರ್, ಪ್ರಗತಿಪರ ಕೃಷಿಕರಾದ ವಿಜೇಂದ್ರ, ಶ್ಯಾಮ್ ಅಯ್ಯಪ್ಪ, ಬೇಬಿ, ಸಂಘದ ನಿರ್ದೇಶಕರು, ಸದಸ್ಯರು ಸೇರಿ ಕುಶಾಲನಗರ, ಸೋಮವಾರಪೇಟೆ ತಾಲೂಕಿನ ಮೀನು ಕೃಷಿಕರು ಪಾಲ್ಗೊಂಡಿದ್ದರು.

‘75 ರಾಷ್ಟ್ರಗಳಿಗೆ ಮೀನು ರಫ್ತು’

ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಚಿನ್ ಮಾತನಾಡಿ ರೈತರು ಮೀನುಗಾರಿಕೆಯನ್ನು ಉಪ ಕಸುಬಾಗಿ ಕೈಗೊಂಡರೆ ಲಾಭವಾಗುತ್ತದೆ. ಮೀನುಗಾರಿಕೆ ಹೈನುಗಾರಿಕೆ ಡೈರಿ ಸಮಗ್ರ ಕೃಷಿ ಕೈಗೊಂಡರೆ ರೈತರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬಹುದು ಎಂದರು. ಭಾರತದಲ್ಲಿ 18.6 ಮಿಲಿಯನ್ ಟನ್ ಮೀನು ಉತ್ಪಾದನೆ ಮಾಡುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದ್ದೇವೆ. ಜೊತೆಗೆ 75 ರಾಷ್ಟ್ರಗಳಿಗೆ ಮೀನುಗಳನ್ನು ರಫ್ತು ಮಾಡುತ್ತಿದ್ದೇವೆ ಎಂದರು. ಮೀನುಗಳಿಂದ ನಮಗೆ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತದೆ. ಪ್ರೋಟೀನ್ ಯುಕ್ತ ಆಹಾರ ಹಾಗೂ ಕಡಿಮೆ ಹಣದಲ್ಲಿ ಮೀನು ಸಿಗುತ್ತಿವೆ ಎಂದರು. ಕೃತಕ ಪ್ರಚೋದನೆ ಕೃತಕ ಗರ್ಭಧಾರಣೆ ಮೂಲಕ ಮೀನು ಕೃಷಿ ಕಂಡುಕೊಂಡು ಮೀನು‌ಮರಿಗಳ ಉತ್ಪತ್ತಿ ಮಾಡಲು ಆರಂಭಿಸಿದ ದಿನವನ್ನು ಮೀನು ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.