ADVERTISEMENT

ಜನಪದ ಕಲಾವಿದೆ, ನಾಟಿ ವೈದ್ಯೆ, ಸೂಲಗಿತ್ತಿಗೆ ಒಲಿದ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾದ ಅಮ್ಮಣಿ

ಕೆ.ಎಸ್.ಗಿರೀಶ್
Published 24 ಡಿಸೆಂಬರ್ 2025, 6:30 IST
Last Updated 24 ಡಿಸೆಂಬರ್ 2025, 6:30 IST
ಅಮ್ಮಣಿ
ಅಮ್ಮಣಿ   

ಮಡಿಕೇರಿ: ‘ಆ ಮಲೆ ಈ ಮಲೆ ಬೋಟ್ಟತ್ ಮಲೆ ಬೋಟ್ಟತ್ ಮಲೇಲ್ ಬಟ್ಟಿ ಪನೆಯೋ...’ ಎಂಬ ಹಾಡಿಗೆ ಅಮ್ಮಣಿ ಹೆಜ್ಜೆ ಹಾಕುತ್ತಿದ್ದರೆ ಸುತ್ತಲೂ ಸೇರಿದ್ದವರ ಗಮನ ಇವರನ್ನು ಬಿಟ್ಟು ಅತ್ತಿತ್ತ ಸುಳಿಯದು. 60 ವರ್ಷ ವಯಸ್ಸಿನಲ್ಲೂ ಅವರು ಹದಿಹರೆಯದವರನ್ನು ನಾಚಿಸುವ ತೆರದಿ ಕುಣಿಯುತ್ತಾರೆ. ಅಪ್ಪಟ ಜನಪದ ಕಲೆ ಉರುಟ್ಟಿಕೋಟ್‌ ಆಟ್‌ ಅನ್ನು ಕರಗತ ಮಾಡಿಕೊಂಡಿರುವ ಇವರಿಗೆ ಮಂಗಳವಾರ ಕರ್ನಾಟಕ ಜಾನಪದ ಅಕಾಡೆಮಿ ತನ್ನ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟಿಸಿದೆ.

ಚೇಲಾವರ ಗ್ರಾಮದಲ್ಲಿ ಜನಿಸಿದ ಇವರಿಗೆ ಈ ಜನಪದ ಕುಣಿತದ ಕಲೆ ತಮ್ಮ ಅಜ್ಜಿ, ತಾಯಿಯಿಂದಲೇ ಬಳುವಳಿಯಾಗಿ ಬಂದಿತ್ತು. ವಿವಾಹವಾದ ನಂತರ ಇವರು ವಿರಾಜಪೇಟೆಯ ತಾಲ್ಲೂಕಿನ ಹೆಗ್ಗಳ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನೆಲೆಸಿದರು. ಆಗ ಇವರ ಅತ್ತೆ ಸಹ ಜನಪದ ಕಲಾವಿದರೇ ಆಗಿದ್ದರು. ಹೀಗಾಗಿಯೇ ಅಮ್ಮಣಿ ಅವರು ಜನಪದ ಕಲಾವಿದರ ಮಧ್ಯೆಯೇ ಅರಳಿದ ಅನನ್ಯ ಪ್ರತಿಭೆ.

ಇವರು ಸುಮಾರು 100ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿರುವುದು ವಿಶೇಷ. ಕೇವಲ ಕೊಡಗು ಮಾತ್ರವಲ್ಲ, ದೂರದ ದಾಂಡೇಲಿಯಂತಹ ಊರುಗಳು, ಪಕ್ಕದ ಕೇರಳದಂತಹ ಹೊರರಾಜ್ಯಗಳಲ್ಲೂ ಇವರು ತಮ್ಮ ಪ್ರತಿಭೆ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಪ್ರಸಾರ ಭಾರತಿಯು 2014ರಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿರುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ  ಆಯೋಜಿಸಿದ್ದ ಭಾರತೀಯ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ ಹಬ್ಬದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಮಡಿಕೇರಿಯ ದಸರಾ ಸಾಂಸ್ಕೃತಿಕ ಜನೋತ್ಸವದಲ್ಲಿ 2013ರಲ್ಲಿ ತಮ್ಮ ನೃತ್ಯ ಪ್ರದರ್ಶಿಸಿ ಪ್ರಶಂಸನಾ ಪತ್ರ ಪಡೆದಿದ್ದಾರೆ. ಆರ್ಜಿ–ಬೇಟೋಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿರಾಜಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಇವರು ತಮ್ಮ ಜನಪ‍ದ ಕಲೆ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ. 2019ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲೂ ಇವರು ತಮ್ಮ ಜನಪದ ಕಲೆ ಪ್ರದರ್ಶಿಸಿ ಸೂಜಿಗಲ್ಲಿನಂತೆ ಸೆಳೆದಿದ್ದರು.

ಇವರು ಕೇವಲ ಹಾಡುಗಾರರಾಗಿ, ಉರುಟ್ಟಿಕೋಟ್ ಆಟ್‌ ಕಲಾವಿದರಾಗಿ ಮಾತ್ರವೇ ಗುರುತಿಸಿಕೊಂಡಿಲ್ಲ. ಇದರೊಂದಿಗೆ ಇವರು ಆ ಭಾಗದ ಜನಪ್ರಿಯ ನಾಟಿ ವೈದ್ಯರೂ ಹೌದು. ಇವರೇ ಹೇಳುವಂತೆ, ‘ನಾನು ತೋಟದಲ್ಲಿ ಹಾವು ಕಚ್ಚಿದವರಿಗೆ, ಸುಟ್ಟ ಗಾಯಗಳಿಗೆ, ಜ್ವರ ಹಾಗೂ ಇತರ ಬೇನೆಗಳಿಗೆ ಔಷಧ ಕೊಡುವೆ’ ಎಂದು ತಮ್ಮ ನಾಟಿ ವೈದ್ಯ ಕುರಿತು ಹೇಳುತ್ತಾರೆ.

ಯಶಸ್ವಿ ಸೂಲಗಿತ್ತಿಯೂ ಆಗಿರುವ ಇವರು ಇದುವರೆಗೂ ಹಲವು ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಮಾತ್ರವಲ್ಲ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಜನಜಾಗೃತಿ ಕಾರ್ಯಕ್ರಮಗಳಲ್ಲೂ ಇವರು ಭಾಗಿಯಾಗಿದ್ದಾರೆ. ತಮ್ಮ ಕಲೆಯ ಮೂಲಕ, ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ಇವರು ಅನಕ್ಷರಸ್ಥರು. ವಯಸ್ಕರ ಶಿಕ್ಷಣ ಇಲಾಖೆ ನೀಡುವ ತರಬೇತಿ ಪಡೆದು ಸದ್ಯ ಸಹಿ ಮಾಡುವುದನ್ನು ಕಲಿತಿದ್ದಾರೆ.

ಇವರು ಬಿಟ್ಟಂಗಲ, ಕೂಡಿಗೆ ಸೇರಿದಂತೆ ಜಿಲ್ಲೆಯ ಹಲವೆಡೆ ಸನ್ಮಾನ, ಗೌರವಗಳಿಗೂ ಪಾತ್ರರಾಗಿದ್ದಾರೆ.

ಪತಿ ಭೀಮಯ್ಯ, ಮಕ್ಕಳಾದ ಲಲಿತಾ, ನಾಣಯ್ಯ, ಪ್ರಮೀಳಾ  ಮತ್ತು 9 ಮೊಮ್ಮಕ್ಕಳು ಇರುವ ತುಂಬು ಸಂಸಾರ ಇವರದು.

ಜನಜಾಗೃತಿ ಶಿಬಿರದಲ್ಲಿ ಅಮ್ಮಣಿ ಅವರು ಭಾಗಿಯಾಗಿರುವುದು
ಬೀದಿನಾಟಕವೊಂದರಲ್ಲಿ ಅಭಿನಯಿಸುತ್ತಿರುವ ಅಮ್ಮಣ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.