ADVERTISEMENT

ಶನಿವಾರಸಂತೆ: ತಾಯಿ ಬಾಣಂತಮ್ಮ, ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:58 IST
Last Updated 17 ಜನವರಿ 2026, 6:58 IST
ಶನಿವಾರಸಂತೆ ಸಮೀಪದ ಬೆಂಬಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಬಾಣಂತಮ್ಮ ಹಾಗೂ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು
ಶನಿವಾರಸಂತೆ ಸಮೀಪದ ಬೆಂಬಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಬಾಣಂತಮ್ಮ ಹಾಗೂ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು   

ಶನಿವಾರಸಂತೆ: ಸಂಕ್ರಾಂತಿ ಹಬ್ಬದ ಮರುದಿನ ನಡೆಯುವ ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೆಂಬಳೂರು ಗ್ರಾಮದ ಜಾನಪದ ಪ್ರಸಿದ್ದ ತಾಯಿ ಬಾಣಂತಮ್ಮ ಮತ್ತು ಪುತ್ರ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಂಬಳೂರು, ಶಿವರಳ್ಳಿ ಮತ್ತು ಊರುಗುತ್ತಿ ಗ್ರಾಮಸ್ಥರ ವತಿಯಿಂದ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾದರು.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಮದ ಬಾಣಂತಮ್ಮ ಜಾತ್ರಾ ಮೈದಾನದಲ್ಲಿ ತಾಯಿ ಬಾಣಂತಮ್ಮಳ ಜಾತ್ರೆಯನ್ನು ನಡೆಸಲಾಯಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮೈದಾನದಲ್ಲಿ ಪುತ್ರ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು ನಡೆಸಲಾಯಿತು.

ADVERTISEMENT

ಇದಕ್ಕೂ ಮುನ್ನ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ದೇವಸ್ಥಾನದಲ್ಲಿ ಬಾಣಂತಮ್ಮ ತಾಯಿಗೆ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಶ್ರೀ ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಸ್ವಾಮಿ ದೇವರನ್ನು ಅಡ್ಡಪಲ್ಲಕಿಯಲ್ಲಿ ಕೂರಿಸಿ ಗ್ರಾಮದ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

ಬಾಣಂತಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಹರಕೆ ಮಾಡಿಕೊಂಡಿದ್ದ ಮಹಿಳೆಯರು ಗ್ರಾಮದ ಬಾಣಂತಮ್ಮ ಕೆರೆಯಲ್ಲಿ ಬಾಗಿನ ಅರ್ಪಿಸಿದರು. ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ನೆರೆಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಪಾಲ್ಗೊಂಡಿದ್ದರು.

ಶನಿವಾರಸಂತೆ ಸಮೀಪದ ಬೆಂಬಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಬಾಣಂತಮ್ಮ ಹಾಗೂ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗಾಗಿ ವಿವಿಧ ಕ್ರೀಡೆಗಳು ನಡೆದವು

ಸಂಸದ ಯದುವೀರ್ ಭಾಗಿ

ಜಾತ್ರೋತ್ಸವಕ್ಕೆ ಭೇಟಿ ನೀಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ‘ಕೇಂದ್ರ ಸರ್ಕಾರ ಗ್ರಾಮೀಣ ಸಂಸ್ಕೃತಿ ವಾತಾವರಣವನ್ನು ಉಳಿಸುವ ಜೊತೆಯಲ್ಲಿ ಆಧುನಿಕ ಕಾಲದ ಸೌಲಭ್ಯವನ್ನು ಅಭಿವೃದ್ದಿ ಮಾಡುವ ಗುರಿಯನ್ನು ಇಟ್ಟುಕೊಂಡಿದೆ’ ಎಂದರು. ಭಾರತದ ಸಮಗ್ರ ಸಂಪೂರ್ಣ ಆರ್ಥಿಕ ಅಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅಕಾಂಕ್ಷೆಯನ್ನಾಗಿ ಇಟ್ಟುಕೊಂಡಿದ್ದು ಈ ದಿಸೆಯಲ್ಲಿ ಪ್ರತ್ಯೇಕ ಕಾಯ್ದೆಯನ್ನು ರೂಪಿಸಿದೆ ಎಂದರು. ಗ್ರಾಮೀಣ ಭಾಗದಲ್ಲಿ ಜಾತ್ರೋತ್ಸವ ಸಂಸ್ಕೃತಿಯನ್ನು ಉಳಿಸಲು ಗ್ರಾಮೀಣ ಭಾಗದ ಜನರು ಪ್ರಯತ್ನಿಸುತ್ತಿರುವುದು ಸಂತಸಕರವಾಗಿದೆ ಮತ್ತು ಇದೆ ರೀತಿಯಲ್ಲಿ ಗ್ರಾಮೀಣ ಜನರು ಗ್ರಾಮೀಣ ಸಂಸ್ಕೃತಿ ಜಾತ್ರೋತ್ಸವಗಳನ್ನು ನಡೆಸುವ ಮೂಲಕ ಭಾರತದ ಸಮಗ್ರ ಸಂಪೂರ್ಣ ಆರ್ಥಿಕ ಅಭಿವೃದ್ದಿ ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಾತ್ರೋತ್ಸವ ನಿರಂತರ ನಡೆಯಲಿ: ಸ್ವಾಮೀಜಿ

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ ‘ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ನಾವು ದೇಶಿಯ ಸಂಸ್ಕೃತಿ ಧರ್ಮವನ್ನು ಜಾತ್ರೋತ್ಸವದ ಮೂಲಕ ಉಳಿಸಿ ಬೆಳೆಸಬೇಕಿದೆ ಮತ್ತು ಜಾತ್ರೋತ್ಸವಗಳು ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿದರು. ಜಾತ್ರೋತ್ಸವ ಪ್ರಯುಕ್ತ ಮಹಿಳೆಯರಿಗೆ ಮತ್ತು ಪುರುಷರಿಗೆ ವಾಲಿಬಾಲ್ ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.