
ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಡಿ. 21ರಿಂದ ಜ. 2ರವರೆಗೆ ಮೈಸೂರು ಮತ್ತು ಕೊಡಗು ಜಿಲ್ಲೆಯ 29 ಹಾಡಿಗಳಲ್ಲಿ ಪಾದಯಾತ್ರೆ ನಡೆಸಲು ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ, ಗ್ರಾಮ ಸಭೆಗಳ ಒಕ್ಕೂಟವು ನಿರ್ಧರಿಸಿದೆ.
21ರಂದು ಬೆಳಿಗ್ಗೆ 10 ಗಂಟೆಗೆ ತಿತಿಮತಿಯ ಆಯಿರಸುಳಿ ಹಾಡಿಯಿಂದ ಪೂರ್ವಿಕರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭವಾಗಲಿದೆ. ನಂತರ, ಚೇನಿಹಡ್ಲು, ಜಂಗಲ್ ಹಾಡಿ, ಬೊಂಬುಕಾಡು ಹಾಡಿ, ಕಾರೆಕಂಡಿ ಹಾಡಿ, ಮಜ್ಜಿಗೆಹಳ್ಳ ಫಾರಂ ಹಾಡಿ, ಮಜ್ಜಿಗೆಹಳ್ಳ ಆನೆಕ್ಯಾಂಪ್ ಹಾಡಿ, ಪಿರಿಯಾಪಟ್ಟಣ ತಾಲ್ಲೂಕಿನ 10 ಹಾಡಿಗಳು ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ 11 ಹಾಡಿಗಳಿಗೆ ಪಾದಯಾತ್ರೆ ಸಂಚರಿಸಲಿದೆ ಎಂದು ಸಮಿತಿ ಅಧ್ಯಕ್ಷ ಜೆ.ಕೆ.ತಿಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಜ. 2ರಂದು ಎಚ್.ಡಿ.ಕೋಟೆ ತಾಲ್ಲೂಕಿನ ಕೆರೆಹಾಡಿಯಲ್ಲಿ ಈ ಎಲ್ಲ ಹಾಡಿಗಳ ಸುಮಾರು ಎರಡರಿಂದ ಎರಡೂವರೆ ಸಾವಿರ ಮಂದಿ ಸಮಾವೇಶಗೊಳ್ಳುವ ನಿರೀಕ್ಷೆ ಇದೆ. ಆ ದಿನ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಲಾಗುವುದು. ಈಗಾಗಲೇ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಒಂದು ವೇಳೆ ಸ್ಥಳಕ್ಕೆ ಬಾರದಿದ್ದರೆ ಮುಂದಿನ ಪ್ರತಿಭಟನೆಯ ರೂಪುರೇಷೆಯನ್ನು ಅಲ್ಲಿಯೇ ತಯಾರಿಸಲಾಗುವುದು ಎಂದು ಹೇಳಿದರು.
‘ನಾಗರಹೊಳೆ ಅರಣ್ಯವು ಜೇನುಕುರುಬ, ಬೆಟ್ಟಕುರುಬ, ಫಣಿಯ ಮತ್ತು ಯರವ ಸಮುದಾಯಗಳ ಪಾರಂಪರಿಕೆ ನೆಲೆಗಳಾಗಿವೆ. ಆದಿವಾಸಿ ಸಮುದಾಯಗಳು ಪೀಳಿಗೆಯಿಂದ ಪೀಳಿಗೆಗೆ ಪೂರ್ವಜರಿಂದ ಬಂದ ಮೌಲ್ಯಗಳು ಮತ್ತು ಜಾನಪದ ಪದ್ಧತಿಗಳೊಂದಿಗೆ ಅರಣ್ಯಗಳು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ’ ಎಂದು ಅವರು ಪ್ರತಿಪಾದಿಸಿದರು.
ಜನರು, ಅರಣ್ಯಗಳು ಮತ್ತು ಪ್ರಾಣಿಗಳು ಸಮಾನರು. ಸಹ ಅಸ್ತಿತ್ವವೇ ಆದಿವಾಸಿ ಜೀವನದ ಮೂಲತತ್ವ. ಆದರೆ, ಅರಣ್ಯ ಹಕ್ಕುಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸುವುದು, ಸ್ಥಳಾಂತರ ಪ್ಯಾಕೇಜ್‌ಗಳನ್ನು ಒಪ್ಪಿಕೊಳ್ಳಲು ಬಲವಂತಪಡಿಸುವುದು, ಸಫಾರಿ ಮತ್ತು ವನ್ಯಜೀವಿ ಪ‍್ರವಾಸೋದ್ಯಮಕ್ಕಾಗಿ ಅರಣ್ಯ ಬಳಸುವುದು ಅನ್ಯಾಯದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲದರ ಬಗ್ಗೆ ಜನಜಾಗೃತಿ ಮೂಡಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.