ಸುಂಟಿಕೊಪ್ಪ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಬಣ್ಣ ಹಾಕುತ್ತಿರುವುದು
ಸುಂಟಿಕೊಪ್ಪ: ತಾವು ವಿದ್ಯೆ ಕಲಿತ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಮತ್ತು ಅಭಿವೃದ್ಧಿ ಕಾರ್ಯದತ್ತ ಹಳೆಯ ವಿದ್ಯಾರ್ಥಿಗಳು ಚಿತ್ತ ಹರಸಿದ್ದು, ಮಾದರಿ ಶಾಲೆಯಾಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದಾರೆ.
ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯು ಪ್ರಾರಂಭಗೊಂಡು 108 ವರ್ಷ ಕಳೆದಿದ್ದು ಹಾಗೆ ಸರ್ಕಾರಿ ಪ್ರೌಢಶಾಲೆಯು ಪ್ರಾರಂಭಗೊಂಡು 44 ವರ್ಷಗಳು ತುಂಬಿದ್ದರೂ, ಹಲವು ಕೊರತೆಗಳಿದ್ದವು. ಇದನ್ನು ಮನಗಂಡ ಹಳೆಯ ವಿದ್ಯಾರ್ಥಿಗಳು ತಾವು ಓದಿದಂತಹ ಶಾಲೆಯನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಸಂಕಲ್ಪದಿಂದ ಸುಮಾರು ₹ 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಿರುವುದು ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಅಂದಾಜು ಸುಮಾರು ₹ 10 ಲಕ್ಷ ವೆಚ್ಚದಲ್ಲಿ ಪೇಂಟಿಂಗ್, ಮರ ಕೆಲಸಗಳು, ಗಾರೆ ಕೆಲಸಗಳು ಸೇರಿದಂತೆ ನಶಿಸಿ ಹೋಗುತ್ತಿರುವ ಕಟ್ಟಡದ ಪುನಶ್ಚೇತನಕ್ಕೂ ಮುಂದಾಗಿ ಶೇ 60ರಷ್ಟು ಕಾರ್ಯಗಳು ಈಗಾಗಲೇ ಮುಗಿದಿದೆ.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕೆ.ಎಚ್.ಶರೀಫ್, ಹರೀಶ್, ಅನಿಲ್ ಕುಮಾರ್, ಸಿ.ಮಹೇಂದ್ರ, ರಜಾಕ್, ಅಬ್ಧುಲ್ ಅಜೀಜ್, ಅರುಣ್ ಕುಮಾರ್, ಧನುಕಾವೇರಪ್ಪ, ವಿನ್ಸೆಂಟ್, ಶಶಿಕುಮಾರ್, ಕಮಲಾಹಸನ್ ಮೊದಲಾದವರ ಪರಿಶ್ರಮದ ಮೂಲಕ ಸುಂಟಿಕೊಪ್ಪ ಮತ್ತು ಸುತ್ತಮುತ್ತಲಿನ ಹಲವು ದಾನಿಗಳ ಸಹಾಯವನ್ನು ಪಡೆದು ಮತ್ತು ತಾವೇ ಸ್ವತಃ ಕೆಲವು ಖರ್ಚು ವೆಚ್ಚಗಳನ್ನು ಹಾಕುತ್ತಾ ಶಾಲೆಯನ್ನು ಖಾಸಗಿ ಶಾಲೆಗಿಂತಲೂ ಸುಂದರಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಜನವರಿ 19ರಂದು ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಎಲ್ಲಾ ಗುರುಗಳನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಸಹ ಈ ತಂಡ ಮಾಡಿತ್ತು. ಎಲ್ಲ ಹಿರಿಯ ಗುರುಗಳನ್ನು ಆಹ್ವಾನಿಸಿ ಅದ್ದೂರಿಯಾದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದ ಮೂಲಕ ಮನೆಮಾತಾದ ಈ ವಿದ್ಯಾರ್ಥಿ ವೃಂದ ಅಭಿವೃದ್ಧಿ ಕಾರ್ಯದತ್ತ ಮುನ್ನುಗ್ಗುವ ಶಪಥ ಕೈಗೊಂಡಿದ್ದಾರೆ.
ಈ ಸರ್ಕಾರಿ ಪ್ರಾಥಮಿಕ ಶಾಲೆ 1916ರಲ್ಲಿ ಪ್ರಾರಂಭಗೊಂಡಿದ್ದರೂ ಯಾರೂ ಕೂಡ ಶತಮಾನೋತ್ಸವ ಕಾರ್ಯಕ್ರಮವನ್ನು ಮಾಡುವುದಕ್ಕೆ ಮುಂದಾಗಿರಲಿಲ್ಲ. ಈ ಶಾಲೆಗಳಿಗೆ ಬಣ್ಣ ಕಾಣದೆ ಹಲವು ವರ್ಷಗಳೇ ಕಳೆದಿತ್ತು. ಇವೆಲ್ಲವನ್ನೂ ಕಂಡ ಹಳೆ ವಿದ್ಯಾರ್ಥಿಗಳ ಘಟಕ ಅಭಿವೃದ್ಧಿ ಕಾರ್ಯದ ಜೊತೆಗೆ ಶಾಲೆಯ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಕ್ಕೆ ಮುಂದಾಗಿದೆ.
ನುರಿತ ಶಿಕ್ಷಕ ವೃಂದ ಇದ್ದರೂ ಖಾಸಗಿ ಶಾಲೆಗಳ ಪೈಪೋಟಿಯಿಂದ ಕಳೆದ ಕೆಲವು ವರ್ಷಗಳಿಂದ ಎರಡು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕೊರತೆ ಹೆಚ್ಚಾಗಿತ್ತು. ಶಾಲೆಯ ದಾಖಲಾತಿ ಹೆಚ್ಚಿಸಲು ಹಳೆ ವಿದ್ಯಾರ್ಥಿಗಳು ಜೂನ್ ತಿಂಗಳ ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡುವ ನಿರ್ಧಾರಕ್ಕೂ
ಬಂದಿದ್ದಾರೆ.
ನಮಗೆ ವಿದ್ಯೆ ನೀಡಿ ಒಂದು ಬದುಕನ್ನು ಕಟ್ಟಿಸಿಕೊಟ್ಟ ಈ ವಿದ್ಯಾ ಸಂಸ್ಥೆಗೆ ನಮ್ಮಿಂದ ಒಂದು ಸಣ್ಣ ಕಾಣಿಕೆ ಅಷ್ಟೇ. ಈ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿಗಳು ಇದೀಗ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದು, ಇದು ಅವರ ಕನಸು ಕೂಡ ಹೌದು. ಅವರ ಹಾಗೂ ಹಳೆಯ ವಿದ್ಯಾರ್ಥಿಗಳಾದ ಶಿವದಾಸ್, ಕೆ.ಎಲ್.ನವೀನ್ ಹಾಗೂ ಇತರರ ಮಾರ್ಗದರ್ಶನ ಮತ್ತು ಸಲಹೆಯಂತೆ ನಾವು ಈ ಒಂದು ಕಾರ್ಯಕ್ಕೆ ಕೈ ಹಾಕಿದ್ದೇವೆ. ನಶಿಸಿ ಹೋಗುತ್ತಿರುವ ಈ ಕಟ್ಟಡದ ಪುನಶ್ಚೇತನ ಮಾಡಿ ಮಕ್ಕಳ ಶಿಕ್ಷಣಕ್ಕೆ ಎಲ್ಲೂ ಕೂಡ ತೊಂದರೆ ಆಗದ ರೀತಿಯಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿ ಮಾಡಲು ಮುಂದಾಗಿದ್ದೇವೆ. ಜೂನ್ ಮೊದಲ ವಾರದಲ್ಲಿ ದ್ಯಾಸಂಸ್ಥೆಯ ಅಭಿವೃದ್ಧಿಗೆ ಕಾರಣರಾದ ದಾನಿಗಳಿಗೂ, ಹಳೆಯ ವಿದ್ಯಾರ್ಥಿಗಳಿಗೂ ಸನ್ಮಾನ ಕಾರ್ಯಕ್ರಮ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಆಯೋಜಿಸಿದ್ದೇವೆ. ಮಕ್ಕಳಲ್ಲಿ ಯಾವುದೇ ಕುಂದು ಕೊರತೆಗಳು ಬರದ ರೀತಿಯಲ್ಲಿ ಈ ವಿದ್ಯಾರ್ಥಿ ಸಂಘ ಸದಾ ಶಾಲೆಯ ಜೊತೆಗಿದೆ.
ಆರ್.ಎಚ್.ಶರೀಫ್, ಉಪಾಧ್ಯಕ್ಷರು ಹಳೆಯ ವಿದ್ಯಾರ್ಥಿ ಸಂಘ.
ಬಹಳ ವರ್ಷಗಳ ನಂತರ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಈ ಶಾಲೆಗೆ ಕಳೆ ತುಂಬಿದ್ದಾರೆ. ಸಂತೋಷವಾಗಿದೆ.ಗೀತಾ, ಮುಖ್ಯ ಶಿಕ್ಷಕಿ. ಜಿಯಂಪಿ ಶಾಲೆ ಸುಂಟಿಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.