ಕಾಳು ಮೆಣಸಿನ ಬಳ್ಳಿಗಳಿಗೆ ವರದಾನ ಎನಿಸಿದ ಮಳೆ
ಮಳೆಯಿಂದ ಅರಳಿದ ಅಣಬೆಗಳು
ಮಳೆಯಿಂದ ಹಸಿರುಕ್ಕಿದ ಇಳೆ
ನಾಪೋಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೇಸಿಗೆ ಮಳೆ ಸುರಿಯುತ್ತಿದ್ದು, ಜನಮಾನಸವನ್ನು ಉಲ್ಲಾಸಗೊಳಿಸಿದೆ. ಭರಣಿ ಮಳೆಯ ಗುಡುಗಿನ ಅಬ್ಬರ, ಮಳೆಯ ಬಿರುಸಿಗೆ ಕೆರೆತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಸತತ ಮಳೆಯಾಗುತ್ತಿರುವುದರಿಂದ ವಾತಾವರಣ ತಂಪಾಗಿದೆ.
ಪ್ರತಿದಿನ ಮಧ್ಯಾಹ್ನದ ವೇಳೆಗೆ ದಟ್ಟನೆಯ ಮೋಡ ಕವಿದು ಸತತವಾಗಿ ಇಲ್ಲಿ ಮಳೆ ಸುರಿಯುತ್ತಿದ್ದು, ರೈತರಲ್ಲಿ ಉಲ್ಲಾಸ ಮೂಡಿಸಿದೆ. ಕಳೆದ ವರ್ಷದ ಮಳೆಯ ಕೊರತೆಯನ್ನು ನೀಗಿಸುವಂತೆ ಈ ಬಾರಿ ನಿರಂತರ ಮಳೆ ಸುರಿಯುತ್ತಿದೆ. ನಾಲ್ಕುನಾಡು ವ್ಯಾಪ್ತಿಯ ಕೈಕಾಡು, ಪಾರಾಣೆ, ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ ಮುಂತಾದ ಹಲವು ಗ್ರಾಮಗಳಲ್ಲಿ ಸತತ ಮಳೆಯಾಗುತ್ತಿದ್ದು ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.
‘ಈ ಅವಧಿಯಲ್ಲಿ ಸುರಿಯುವ ಮಳೆಯಿಂದ ಕಾಳು ಮೆಣಸಿನ ಬಳ್ಳಿಗಳಿಗೆ ಅನುಕೂಲಕರವಾಗಿದ್ದು, ಉತ್ತಮ ಇಳುವರಿ ದೊರೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬೆಳೆಗಾರರು. ಕಳೆದ ವರ್ಷ ಬೇಸಿಗೆ ಅವಧಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ, ಇಳುವರಿ ಕುಂಠಿತಗೊಂಡಿತ್ತು. ಏಪ್ರಿಲ್ ತಿಂಗಳಲ್ಲಿ ಬಹುತೇಕ ದಿನಗಳಲ್ಲಿ ಈ ಭಾಗದಲ್ಲಿ ಮಳೆಯಾಗಿದ್ದು, ಕಾಳು ಮೆಣಸಿನ ಬಳ್ಳಿಗಳು ಚಿಗುರೊಡೆಯುತ್ತಿವೆ. ಕಾಫಿಯ ತೋಟಗಳಲ್ಲಿ ಬೆಳೆಗಾರರು ಬಿರುಸಿನ ಕೆಲಸದಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬರುತ್ತಿವೆ. ಕಾಫಿಗಿಡಗಳನ್ನು ಸ್ವಚ್ಛಗೊಳಿಸುವುದು, ಮರಗಸಿ ಮಾಡುವುದು, ರಾಸಾಯನಿಕ ಗೊಬ್ಬರ ಹಾಕಲು ಗಿಡಗಳ ಬುಡ ಶುಚಿಗೊಳಿಸುವುದು ಮುಂತಾದ ಕೆಲಸಗಳಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.
‘ಕಾಫಿ ಗಿಡದ ಬುಡವನ್ನು ಸ್ವಚ್ಛಗೊಳಿಸಿ ರಾಸಾಯನಿಕ ಗೊಬ್ಬರ ಹಾಕಲು ಇದು ಸಕಾಲ. ಗಿಡಗಳು ಚಿಗುರಲು, ಕಾಫಿ ಮಿಡಿಕಚ್ಚಲು ಸಹಕಾರಿ’ ಎಂದು ನೆಲಜಿ ಗ್ರಾಮದ ಬೆಳೆಗಾರ ಅಪ್ಪಚ್ಚು ಹೇಳುತ್ತಾರೆ. ದಿನನಿತ್ಯ ಮಳೆ ಸುರಿಯುತ್ತಿರುವುದರಿಂದ ಕೆಲವು ಬೆಳೆಗಾರರು ಈಗಾಗಲೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಹಾಕುತ್ತಿದ್ದಾರೆ. ಫೆಬ್ರುವರಿ -ಮಾರ್ಚ್ ತಿಂಗಳಲ್ಲಿ ಕಾಫಿ ತೋಟಕ್ಕೆ ಹೂವು ಬೆಳೆ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕೆರೆ, ತೋಡುಗಳಿಂದ, ಕಾವೇರಿ ನದಿಯಿಂದ ಸ್ಪ್ರಿಂಕ್ಲರ್ ಮೂಲಕ ತೋಟಕ್ಕೆ ನೀರು ಹಾಯಿಸಿ ಹೂವರಳಿಸುವ ಪ್ರಯತ್ನ ಮಾಡಿದ್ದರು. ತೋಟಗಳಿಗೆ ತುಂತುರು ನೀರಾವರಿ ಮೂಲಕ ಸತತವಾಗಿ ನೀರು ಹಾಯಿಸಿದ್ದರಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಮಳೆ ಸುರಿದಿದ್ದು ತುಂತುರು ನೀರಾವರಿ ಕಾರ್ಯವನ್ನು ನಾಲ್ಕುನಾಡು ವ್ಯಾಪ್ತಿಯ ಬೆಳೆಗಾರರು ಸ್ಥಗಿತಗೊಳಿಸಿದ್ದರು. ಇದೀಗ ಕೆರೆಗಳು ತುಂಬಿವೆ. ತೋಡುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ನಿರಂತರ ಮಳೆ ಬೇಸಿಗೆ ಬೆಡಗಿಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಸಿರುಕ್ಕಿದ್ದು ನೆಲದೊಳಗಿನಿಂದ, ಮರದ ಕಾಂಡಗಳಿಂದ ಮೂಡುವ ಅಣಬೆಗಳು ನಿಸರ್ಗಕ್ಕೆ ಚಿತ್ತಾರ ಬರೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.