ADVERTISEMENT

ಸೈಬರ್ ಪೊಲೀಸ್‌ ಸೋಗಿನಲ್ಲಿ ₹ 7 ಲಕ್ಷ ಕಿತ್ತ ವಂಚಕರು!

ನೇರವಾಗಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಳ್ಳದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:47 IST
Last Updated 25 ಜೂನ್ 2025, 15:47 IST

ಮಡಿಕೇರಿ: ತಮ್ಮನ್ನು ಪಿರಿಯಾಪ‍ಟ್ಟಣದ ಸೈಬರ್‌ ಪೊಲೀಸರು ಎಂದು ಪರಿಚಯಿಸಿಕೊಂಡು ಪರಶಿವಮೂರ್ತಿ ಎಂಬುವವರಿಂದ ₹ 7 ಲಕ್ಷ ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ ತಾಲ್ಲೂಕಿನ ಹಾಲೇರಿ ಗ್ರಾಮದ ಇಬ್ರಾಹಿಂ ಬಾದ್‌ಷಾ (25), ಈತನ ಪತ್ನಿ ಬೆಂಗಳೂರಿನ ಬನಶಂಕರಿಯ ಸಂಗೀತಾ (30), ಪಾಂಡವಪುರ ತಾಲ್ಲೂಕಿನ ಬಳಿಘಟ್ಟ ಗ್ರಾಮದ ಬಿ.ಎಂ.ರಾಘವೇಂದ್ರ (19) ಹಾಗೂ ಕುಶಾಲನಗರದ ಆದರ್ಶ ದ್ರಾವಿಡ ಕಾಲೊನಿಯ ಸಿ.ಕೆ.ಚರಣ್ (19) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಶಿವಮೂರ್ತಿ ಅವರು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಹಾಕಿದ್ದರು. ಇದನ್ನು ನೆಪಮಾಡಿಕೊಂಡು ಕರೆ ಮಾಡಿದ ಆರೋಪಿಗಳು ತಾವು ಪಿರಿಯಾಪ‍ಟ್ಟಣದ ಸೈಬರ್ ಪೊಲೀಸರಾಗಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಹಣ ನೀಡದಿದ್ದರೆ ಮನೆ ಬಳಿ ಬಂದು ಬಂಧಿಸಿ ಕರೆದೊಯ್ಯಲಾಗುವುದು ಎಂದು ಹೆದರಿಸಿದರು. ನಂತರ ಹಂತಹಂತವಾಗಿ ₹ 7 ಲಕ್ಷವನ್ನು ಪಡೆದುಕೊಂಡರು. ಈ ಹಣವನ್ನು ತಾವು ಖರೀದಿ ಮಾಡುವ ಅಂಗಡಿ, ಹೋಟೆಲ್, ರೆಸ್ಟೋರೆಂಟ್ ಹೀಗೆ ನಾನಾ ಕಡೆಯ ಸ್ಕ್ಯಾನರ್‌ಗಳಿಗೆ ಹಣ ಹಾಕಿಸಿಕೊಂಡರು. ಇವರ ಕಿರುಕುಳ ಮುಂದುವರಿದಾಗ ಪರಶಿವಮೂರ್ತಿ ಜನವರಿಯಲ್ಲಿ ದೂರು ನೀಡಿದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಇವರ ಪತ್ತೆಗಾಗಿ ಡಿವೈಎಸ್‌ಪಿ ಪಿ.ಚಂದ್ರಶೇಖರ್, ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಸಬ್‌ಇನ್‌ಸ್ಪೆಕ್ಟರ್ ಗೀತಾ, ನೇತೃತ್ವದಲ್ಲಿ ವಿಶೇಷ ತಂಡವೊಂದರನ್ನು ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.