ADVERTISEMENT

ಸುಂಟಿಕೊಪ್ಪ: ಗಣೇಶ ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 3:12 IST
Last Updated 16 ಸೆಪ್ಟೆಂಬರ್ 2024, 3:12 IST
ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಮೆರವಣಿಗೆ ಭಾನುವಾರ ಸಂಜೆ ನಡೆಯಿತು
ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಮೆರವಣಿಗೆ ಭಾನುವಾರ ಸಂಜೆ ನಡೆಯಿತು   

ಸುಂಟಿಕೊಪ್ಪ: ಇಲ್ಲಿನ‌ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯಿಂದ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ 60ನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆ ಭಾನುವಾರ ಸಂಜೆ ನಡೆಯಿತು.

ಬೆಳಿಗ್ಗೆಯಿಂದ ಗಣಹೋಮ, ಹೂವಿನ ಪೂಜೆ ನಡೆಯಿತು. ಸುತ್ತಮುತ್ತಲಿನ ನೂರಾರು ಭಕ್ತರು ದೇವಾಲಯಕ್ಕೆ‌ ಬಂದು ಕೊನೆಯ ಪೂಜೆ ಸಲ್ಲಿಸಿದರು.

ಮಧ್ಯಾಹ್ನ ಸೇರಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದಲ್ಲಿ ಪ್ರಧಾನ ಅರ್ಚಕ ದರ್ಶನ್ ಭಟ್, ಮನೋಜ್ ಭಟ್, ಜಯಂತ್ ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾಪೂಜೆ ನೆರವೇರಿತು. ಗೌರಿ, ಗಣೇಶ ಮೂರ್ತಿಗೆ ಕೊನೆಯ ಮಹಾ ಆರತಿ ಮಾಡಿ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಕೂರಿಸಿ ಶೋಭಾಯಾತ್ರೆ ನಡೆಸಲಾಯಿತು. ಡಿಜೆ ಸಂಗೀತ ಹಾಗೂ ಮಂಗಳೂರಿನ ನಾಸಿಕ್ ಬ್ಯಾಂಡಿಗೆ ಯುವಕ- ಯುವತಿಯರು ಹೆಜ್ಜೆ ಹಾಕಿದರು. 

ADVERTISEMENT

ಸಮಿತಿಯ ಪದಾಧಿಕಾರಿಗಳು 9 ದಿನಗಳ ಕಾಲ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪೂಜೆ, ಹವನವನ್ನು ಮಾಡಿದರು.

ರಾಮ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಮಾದಾಪುರ ರಸ್ತೆಯಲ್ಲಿಯಲ್ಲಿರುವ‌ ವೃಕ್ಷೋದ್ಭವ ಮಹಾಗಣಪತಿ ದೇವಾಲಯದತ್ತ ತೆರಳಿ ಅಲ್ಲಿ‌ಪೂಜೆ ಸಲ್ಲಿಸಿ ನಂತರ ಅದೇ ಮಾರ್ಗವಾಗಿ ವಾಪಸ್ಸಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿತು. ರಾತ್ರಿ ಗದ್ದೆಹಳ್ಳದ ಯಂಕನ‌ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸಮಿತಿ ಅಧ್ಯಕ್ಷ ವಿಘ್ನೇಶ್, ಉಪಾಧ್ಯಕ್ಷ ಬಿ‌.ಕೆ.ಪ್ರಶಾಂತ್, ಎಂ.ಗಣೇಶ್, ಸಿ.ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಚ್.ನಿಖಿಲ್, ಹಿರಿಯರಾದ ಶಾಂತರಾಮ ಕಾಮತ್, ಧನು ಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ಪಟ್ಟೆಮನೆ ಉದಯಕುಮಾರ್, ಸುರೇಶ್ ಗೋಪಿ, ಶ್ರೀಧರ್ ಕುಮಾರ್, ರವಿ, ಪದಾಧಿಕಾರಿಗಳಾದ ಪಾಂಡ್ಯನ್, ಪದ್ಮನಾಭ, ಹೃತಿಕ್, ನವೀನ್, ರಾಜೇಶ್, ಮಹೇಂದ್ರ, ಪೃಥ್ವಿ, ಲೋಕೇಶ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.