ADVERTISEMENT

ಸೌಹಾರ್ದದಲ್ಲಿ ದೇಶಕ್ಕೆ ಮಾದರಿ ಕೊಡಗು

ಹಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರು ಒಗ್ಗೂಡಿ ಗೌರಿ, ಗಣೇಶೋತ್ಸವ ಆಚರಣೆ

ಕೆ.ಎಸ್.ಗಿರೀಶ್
Published 26 ಆಗಸ್ಟ್ 2025, 4:19 IST
Last Updated 26 ಆಗಸ್ಟ್ 2025, 4:19 IST
ಕಳೆದ ವರ್ಷ ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಿಂದ ಮೆರವಣಿಗೆ ಹೊರಟ ಮುಸ್ಲಿಮರಿಗೆ ಹಿಂದೂಗಳು ತಂಪು ಪಾನೀಯ ನೀಡಿ ಶುಭಾಶಯ ಕೋರಿದ್ದರು
ಕಳೆದ ವರ್ಷ ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಿಂದ ಮೆರವಣಿಗೆ ಹೊರಟ ಮುಸ್ಲಿಮರಿಗೆ ಹಿಂದೂಗಳು ತಂಪು ಪಾನೀಯ ನೀಡಿ ಶುಭಾಶಯ ಕೋರಿದ್ದರು   

ಮಡಿಕೇರಿ: ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವಾ’ ಎಂಬ ಬಸವಣ್ಣನವರ ವಚನದಂತೆ ಕೊಡಗು ಜಿಲ್ಲೆಯಲ್ಲಿ ಗೌರಿ, ಗಣೇಶೋತ್ಸವವು ಅತ್ಯಂತ ಸೌಹಾರ್ದಯುತವಾಗಿ ಆಚರಣೆಯಾಗುತ್ತಿದೆ.

ಇಲ್ಲಿನ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಸಿದ್ಧಿ ವಿನಾಯಕ ಮಿತ್ರ ಮಂಡಲಿಯ ಅಧ್ಯಕ್ಷರು ಕ್ರೈಸ್ತ ಧರ್ಮಕ್ಕೆ ಸೇರಿದ ವಿಜೇಶ್ ಕ್ಸೇವಿಯರ್. 2 ವರ್ಷಗಳಿಂದಲೂ ಇವರೇ ಅಧ್ಯಕ್ಷರು. ನೌಫಲ್‌ ಎಂಬ ಮುಸ್ಲಿಮರೊಬ್ಬರೂ ಮಂಡಲಿಯ ಸದಸ್ಯರು. ಸಮಿತಿಯಲ್ಲಿ ಉನ್ನತ ವ್ಯಾಸಂಗ ಮಾಡಿದವರು, ಶ್ರೀಮಂತರು ತೀರಾ ಕಡಿಮೆ. ಬಹುತೇಕ ಸದಸ್ಯರು ಬಡವರು, ಕೂಲಿಕಾರರೇ ಆಗಿದ್ದಾರೆ. 13 ವರ್ಷಗಳಿಂದ ಇಲ್ಲಿ ಸೌಹಾರ್ದಯುತವಾಗಿ ಎಲ್ಲ ಧರ್ಮದವರೂ ಸೇರಿ ಗೌರಿ, ಗಣೇಶೋತ್ಸವ ಆಚರಿಸುತ್ತಿದ್ದಾರೆ.

‘ಮಂಡಲಿಯಲ್ಲಿ 40 ಸದಸ್ಯರಿದ್ದು, ಇಬ್ಬರು ಕ್ರೈಸ್ತರು, ಒಬ್ಬರು ಮುಸ್ಲಿಮರು. ಈ ವರ್ಷವೂ ಆ. 27ರಿಂದ 31ರವರೆಗೆ 5 ದಿನಗಳ ಕಾಲ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, 31ರಂದು ವಿಸರ್ಜನೋತ್ಸವ ನಡೆಯಲಿದೆ’ ಎಂದು ವಿಜೇಶ್ ಕ್ಸೇವಿಯರ್ ಹೇಳಿದರು.

ADVERTISEMENT

ನಲ್ವತ್ತೆಕ್ರೆ ಗ್ರಾಮದಲ್ಲಿ..

ಇಲ್ಲಿಗೆ ಸಮೀಪದ ನಲ್ವತ್ತೆಕ್ರೆ ಗ್ರಾಮದಲ್ಲೂ 32 ವರ್ಷಗಳಿಂದ ಎಲ್ಲ ಧರ್ಮದವರೂ ಒಗ್ಗಟ್ಟಿನಿಂದ ಸೌಹಾರ್ದಯುತವಾಗಿ ಗೌರಿ,ಗಣೇಶೋತ್ಸವ ಆಚರಿಸುತ್ತಾರೆ.

‘ಮಂಡಲಿಯಲ್ಲಿ ಒಬ್ಬರು ಕ್ರೈಸ್ತರಿದ್ದಾರೆ. 15ಕ್ಕೂ ಅಧಿಕ ಮಂದಿ ಮುಸ್ಲಿಮರು ಕೈಜೋಡಿಸುತ್ತಾರೆ. ನಾವೂ ಈದ್‌ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗುತ್ತೇವೆ. ದೇವಸ್ಥಾನದ ಮುಂದೆ ಮೆರವಣಿಗೆ ಬಂದಾಗ ಕಾಫಿ, ಬಾದಾಮಿ ಹಾಲು, ಬಿಸ್ಕತ್ತು ನೀಡುತ್ತೇವೆ. ಗಣೇಶೋತ್ಸವದ ಮೆರವಣಿಗೆಗೆ ಮುಸ್ಲಿಮರೂ ತಂಪು ಪಾನೀಯ ವಿತರಿಸುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ’ ಎಂದು ಶ್ರೀ ವಿನಾಯಕ ಮಿತ್ರ ಮಂಡಲಿಯ ಅಧ್ಯಕ್ಷ ಸತೀಶ್‌ ಹೇಳುತ್ತಾರೆ.

ತಂಪು ಪಾನೀಯ ವಿತರಣೆ

ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ, ಕಂಬಿಬಾಣೆ ಹಾಗೂ ಹೊಸಕೋಟೆಯಲ್ಲೂ ಕಳೆದ ವರ್ಷದಿಂದ ಗೌರಿ ಗಣೇಶ ವಿಸರ್ಜನೋತ್ಸವ ಮೆರವಣಿಗೆಯಲ್ಲಿ ಭಕ್ತರಿಗೆ ‌ಮದರಸಗಳು, ಜಮಾಹತ್‌ಗಳು ತಂಪು ಪಾನೀಯ ವಿತರಿಸುತ್ತಿವೆ.

ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಳೆದ ವರ್ಷದಿಂದ ವಿವಿಧ ಗಣೇಶೋತ್ಸವ ಸಮಿತಿಗಳು ಹಾಗೂ ವಿವಿಧ ಸಂಘಟನೆಗಳು ತಂಪು ಪಾನೀಯವನ್ನು ಮುಸ್ಲಿಮರಿಗೆ ವಿತರಿಸುತ್ತಿವೆ. ಸುಂಟಿಕೊಪ್ಪದಲ್ಲಿ ಮುಸ್ಲಿಮರು ಗಣೇಶೋತ್ಸವ ಸಮಿತಿಗಳಿಗೆ ಸ್ವಯಂಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ.

ಕಳೆದ ವರ್ಷ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಮೆರವಣಿಗೆ ತೆರಳುತ್ತಿದ್ದ ಮುಸ್ಲಿಮರಿಗೆ ಹಿಂದೂಗಳು ಪಾನೀಯ ಸಿಹಿತಿಂಡಿಗಳನ್ನು ಹಂಚಿ ಶುಭಾಶಯ ಕೋರಿದರು.
ಕಳೆದ ವರ್ಷ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಸೋಮವಾರ ನಡೆದ ವಿಸರ್ಜನೋತ್ಸವದ ಮೆರವಣಿಗೆ ವೇಳೆ ಮುಸಲ್ಮಾನರು ಹಿಂದೂಗಳಿಗೆ ಸಿಹಿ ತಿಂಡಿ ಮತ್ತು ಪಾನೀಯ ನೀಡಿ ಸೌಹಾರ್ದ ಮೆರೆದಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.