ADVERTISEMENT

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಇಂದು

ಆಗಳಿ ಗ್ರಾಮದಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಮರುದಿನ ನಡೆಯುವ ಜಾತ್ರೆ

ಶ.ಗ.ನಯನತಾರಾ
Published 12 ಮಾರ್ಚ್ 2021, 2:29 IST
Last Updated 12 ಮಾರ್ಚ್ 2021, 2:29 IST
ಶನಿವಾರಸಂತೆ ಸಮೀಪದ ಆಗಳಿ ಗ್ರಾಮದ ಗವಿಸಿದ್ಧೇಶ್ವರ ಸ್ವಾಮಿಯ ಗವಿ
ಶನಿವಾರಸಂತೆ ಸಮೀಪದ ಆಗಳಿ ಗ್ರಾಮದ ಗವಿಸಿದ್ಧೇಶ್ವರ ಸ್ವಾಮಿಯ ಗವಿ   

ಶನಿವಾರಸಂತೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಸ್ವಾಮಿಯ ಜಾತ್ರೆ ಮಾರ್ಚ್‌ 12ರಂದು ನಡೆಯಲಿದೆ. ಪ್ರತಿವರ್ಷ ಮಹಾಶಿವರಾತ್ರಿಯ ಮರುದಿನ ನಡೆಯುವ ಈ ಜಾತ್ರೆಗೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಬರುತ್ತಾರೆ.

ಸುಮಾರು 500 ವರ್ಷಗಳ ಹಿಂದೆ ಕೊಡಗಿನ ರಾಜ ವೀರರಾಜ ಆಳ್ವಿಕೆ ಕಾಲದಲ್ಲಿ ಈ ಸ್ಥಳಕ್ಕೆ ಮುಳ್ಳೂರು ಎಂಬ ಹೆಸರಿತ್ತು. ಈ ಗ್ರಾಮವು ಬ್ರಿಟಿಷ್ ಅಧಿಕಾರಿಗಳ ಬಳುವಳಿ. ಅಂದು ಮುಳ್ಳೂರಿನಲ್ಲಿ ಇದ್ದದ್ದು ಕೇವಲ ಐವರು ಶಿವಶರಣರ ಮನೆಗಳು. ಗೊಂಡಾರಣ್ಯದಂತಿದ್ದ ಗ್ರಾಮದಲ್ಲಿ ಹುಲಿ, ಚಿರತೆ, ಕಾಡಾನೆಗಳೇ ಹೆಚ್ಚಾಗಿದ್ದವು.

ಗ್ರಾಮದ ಗವಿಸಿದ್ಧೇಶ್ವರ ಎಂಬ ಶರಣ ಸಾಧು ಬೃಹದಾಕಾರದ ಗವಿಯೊಳಗೆ ವಾಸವಿದ್ದು ತಪಸ್ಸು, ಭಿಕ್ಷಾಟನೆ ಮಾಡುತ್ತಲೇ ಮೃತಪಟ್ಟಿದ್ದರು. ಮುಕ್ತಿ ಕರುಣಿಸಲು ಶಿವ ಕೈಲಾಸದಿಂದ ಬರುವ ಮೊದಲೇ ಸಾಧುವಿನ ಕೊರಳ ಕರಡಿಗೆಯ ಮುಚ್ಚಳ ಕಳಚಿ ಲಿಂಗ ಭೂಸ್ಪರ್ಶವಾಯಿತು. ಭಕ್ತಿಗೆ ಮಾರುಹೋದ ಶಿವ ಅಲ್ಲಿಯೇ ನಿಂತ. ಬ್ರಹ್ಮಾಂಡವಾದ ಎನ್ನುತ್ತಾರೆ ಗ್ರಾಮದ ಹಿರಿಯರು.

ADVERTISEMENT

ರಾಜ ವೀರರಾಜ ತನ್ನ ಆಳ್ವಿಕೆಗೆ ಒಳಪಟ್ಟ ನೆಲದ ವಿಸ್ತೀರ್ಣ ಗುರುತಿಸಿ ಗಡಿಕಲ್ಲನ್ನು ಪ್ರತಿಷ್ಠಾಪಿಸಲು ತನ್ನ ಅಶ್ವದಳ ಹಾಗೂ ಕಾಲುದಳಗಳನ್ನು ಕಳುಹಿಸಿದ್ದ. ಈ ಸೇನೆ ಮುಳ್ಳೂರು ಗಡಿಭಾಗಕ್ಕೆ ಬಂದು ಕೊಡಗು– ಹಾಸನ ಜಿಲ್ಲೆಯ ಅಂಚು ಗುರುತಿಸಲು ಒಂದು ದೊಡ್ಡ ಗಡಿಕಲ್ಲನ್ನು ನಿಲ್ಲಿಸಿ, ಅದರಲ್ಲಿ ‘ವಿ’ ಎಂಬ ಅಕ್ಷರ ಕೆತ್ತಿಸಿದ್ದಾರೆ. ಈ ಕಲ್ಲು ಈಗಲೂ ನೋಡಲು ಸಿಗುತ್ತದೆ.

ವೀರರಾಜ ತನ್ನ ಕನಸಿನಲ್ಲಿ ಕಂಡಂತೆ ಈ ದೇವಸ್ಥಾನದ ಪಕ್ಕದಲ್ಲೇ ಒಂದೇ ರಾತ್ರಿಯಲ್ಲಿ ಕೊಳ ಹಾಗೂ 4 ತೂಬು ನಿರ್ಮಿಸಿದ್ದು, ಅದಕ್ಕೆ ‘ದಂಡಿನ ಬಾವಿ ದಳವಾಯಿ ಕೆರೆ’ ಎಂದು ಕರೆಯಲಾಗುತ್ತದೆ. ಇದರಲ್ಲಿ 2 ತೂಬು ಹಾಳಾಗಿದೆ. ಹಿಂದೆ ಪ್ರತಿ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಮಧ್ಯರಾತ್ರಿ ವೇಳೆ ಈ ಗವಿಯಿಂದ ಶಂಖನಾದ
ಮತ್ತು ಜಾಗಟೆ ಶಬ್ದ ಕೇಳಿ ಬರುತ್ತಿತ್ತು. 1984ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೇಗದ ಕಾಡನ್ನು ನಿರ್ಮಿಸಲು ಕೊಳದ ನೀರನ್ನು ಪೂರ್ಣವಾಗಿ ಖಾಲಿ ಮಾಡಿದ್ದರು. ಅಂದಿನಿಂದ ಈ ಶಬ್ದ ನಿಂತು ಹೋಯಿತು ಎಂದು ಹಿರಿಯರು ಹೇಳುತ್ತಾರೆ.

ಕಾಲ ಕ್ರಮೇಣ ಈ ಗ್ರಾಮಕ್ಕೆ ಮುಳ್ಳೂರು ಹೆಸರು ಬದಲಾಗಿ ಆಗಳಿ ಎಂಬ ಹೆಸರು ಬಂದಿದೆ. ಗ್ರಾಮದ ಪಟೇಲ ಜಮೀನ್ದಾರ್ ಸಿದ್ದಯ್ಯ ಅವರು ಬಂಡೆಗಲ್ಲಿನ ಗವಿಯನ್ನು ಅಲ್ಪಸ್ವಲ್ಪ ಕೆತ್ತಿಸಿ ಬಾಗಿಲು– ಕಿಟಕಿ ನಿರ್ಮಿಸಿದ್ದಾರೆ.

ಗವಿಸಿದ್ಧೇಶ್ವರ ಗವಿಯೊಳಗೆ ಸಭಾಂಗಣಕ್ಕೆ ಗ್ರಾನೈಟ್ ಹಾಕಿಸಲಾಗಿದೆ. ಸುಂದರ ಮೆಟ್ಟಿಲು ನಿರ್ಮಾಣವಾಗಿದೆ. ಸ್ವಾಮಿಗೆ ನಿತ್ಯ ಪೂಜೆ ನಡೆಯಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಿ, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಈ ಸ್ಥಳ ಮತ್ತಷ್ಟು ಅಭಿವೃದ್ಧಿ ಕಾಣಬೇಕು ಎಂಬುದು ಗವಿಸಿದ್ಧೇಶ್ವರ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ಮನವಿ.

ದೇವರಿಗೆ ವಿಶೇಷ ಪೂಜೆ, ಜಾತ್ರೆ

1987ರಿಂದ ಗ್ರಾಮ ಪಂಚಾಯಿತಿ, ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಪ್ರತಿ ಶಿವರಾತ್ರಿ ಹಬ್ಬದ ಮಾರನೇ ದಿನ ಗವಿಸಿದ್ಧೇಶ್ವರ ಸ್ವಾಮಿಗೆ ಅಭಿಷೇಕ, ಪೂಜೆ ನೆರವೇರಿಸುವ ಜತೆಗೆ ಜಾತ್ರೆ ಮಾಡುತ್ತಾರೆ. ಮಾರ್ಚ್‌ 12ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಸ್ವಾಮಿಗೆ ಅಭಿಷೇಕ, ಷೋಡಶೋಪಚಾರ, ವಿಶೇಷ ಪೂಜೆ, ಮಂಗಳಾರತಿ ಜತೆಗೆ ಜಾತ್ರೆ ನಡೆಯುತ್ತದೆ.

ಜಾತ್ರೆ ಪ್ರಯುಕ್ತ ಸೇವಾ ಸಮಿತಿ ಸಹಭಾಗಿತ್ವದಲ್ಲಿ ಸರಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾನಪದ ಗಾಯಕ ಬೆಸೂರು ಶಾಂತೇಶ್ ಹಾಗೂ ಇತರ ಕಲಾ ತಂಡಗಳಿಂದ ಜಾನಪದ ಗೋಷ್ಠಿ, ದೇವಾಲಯ ಹಿನ್ನೆಲೆ ಸ್ವರಚಿತ ಸಾಹಿತ್ಯ ವಾಚನ, ಗಾಯನ, ನೃತ್ಯ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.