ಗೋಣಿಕೊಪ್ಪಲು: ಇಲ್ಲಿನ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲಸ ಆರಂಭಗೊಂಡು 2 ವರ್ಷ ಕಳೆದರೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕವಾದ ತಂಗುದಾಣ ನಿರ್ಮಿಸದೇ ಇರುವುದು ಪ್ರಯಾಣಿಕರ ತೊಂದರೆಗೆ ಕಾರಣವಾಗಿದೆ.
ಮೈಸೂರು, ವಿರಾಜಪೇಟೆ, ಕಣ್ಣೂರು, ತಲಚೇರಿ ಹೆದ್ದಾರಿಯಲ್ಲಿರುವ ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ನಿತ್ಯ ನೂರಾರು ಬಸ್‌ಗಳು ಬಂದು ಹೋಗುತ್ತವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಬದಿಯಲ್ಲಿಯೇ ನಿಂತು ಹೊರಟರೆ ಖಾಸಗಿ ಬಸ್‌ಗಳು ನಿಲ್ದಾಣದಲ್ಲಿ ನಿಂತು ಬಳಿಕ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡುತ್ತವೆ.
ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಹಾಗೂ ಪ್ರಯಾಣಿಕರು ನಿಲ್ಲುವುದಕ್ಕೆ ಸ್ಥಳವೇ ಇಲ್ಲದಾಗಿದೆ. ಪ್ರಯಾಣಿಕರು ಸಿಕ್ಕಿದ ಅಂಗಡಿ ಮುಂಗಟ್ಟುಗಳ ಮುಂದೆ ನಿಂತುಕೊಂಡಿದ್ದು, ತಾವು ಪ್ರಯಾಣಿಸುವ ಬಸ್ ಬಂದ ಕೂಡಲೆ ಓಡಿ ಹೋಗಿ ಹತ್ತಿಕೊಳ್ಳುತ್ತಾರೆ. ಹೀಗೆ ಹೋಗುವಾಗ ಕಿರಿದಾದ ರಸ್ತೆಯಲ್ಲಿ ಹಿಂದೆ ಮುಂದೆ ಹಾರನ್ ಮಾಡಿಕೊಂಡು ವಾಹನಗಳೂ ನುಗ್ಗುತ್ತವೆ.
ಹೆದ್ದಾರಿಯಲ್ಲಿಯೇ ನುಗ್ಗುವ ವಾಹನಗಳ ನಡುವೆ ಹೇಗೋ ನುಸುಳಿಕೊಂಡು ಬಸ್ ಹತ್ತಬೇಕಾದ ಸ್ಥಿತಿ ಪ್ರಯಾಣಿಕರದ್ದಾಗಿದೆ. ಮತ್ತೊಂದು ಕಡೆ ಪ್ರಯಾಣಿಕರು ಶೌಚಕ್ಕಾಗಿ ಹೋಗುವ ಜಾಗ ತಿಳಿಯುತ್ತಿಲ್ಲ. ಯಾವುದೋ ಒಂದು ಮೂಲೆಯಲ್ಲಿ ಶೌಚಾಲಯವಿದ್ದು ಅದನ್ನು ಹುಡುಕುವ ವೇಳೆಗೆ ಬಸ್‌ಗಳು ತಪ್ಪಿಹೋಗುವ ಸಂಕಷ್ಟ ಪ್ರಯಾಣಕರಿಗೆ ಸಾಮಾನ್ಯವಾಗಿ ಬಿಟ್ಟಿದೆ.
ಈಗ ಮಳೆಗಾಲ ಆರಂಭವಾಗುತ್ತಿದೆ. ದಕ್ಷಿಣ ಕೊಡಗಿನ ವಿವಿಧ ಮೂಲೆಗಳಿಂದ ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಶಾಲಾ, ಕಾಲೇಜುಗಳಿಗೆ ಬಂದು ಹೋಗುತ್ತಾರೆ. ಇವರು ಮರಳಿ ಮನೆಗೆ ತೆರಳುವ ವೇಳೆಯಲ್ಲಿ ಸ್ವಲ್ಪಹೊತ್ತು ನಿಂತುಕೊಳ್ಳುವುದಕ್ಕೂ ಜಾಗವಿಲ್ಲದಾಗಿದೆ. ಇಕ್ಕಟ್ಟಾದ ಅಂಗಡಿಗಳ ಮುಂದೆ ಮಾಲೀಕರ ಕಿರಿಕಿರಿ ನಡುವೆ ನಿಲ್ಲುವುದು ನಿತ್ಯದ ಗೋಳಾಗಿದೆ. ಬಸ್ ನಿಲ್ದಾಣದ ಕಾಮಗಾರಿ ಮುಗಿಯುವವರೆಗೆ ತಾತ್ಕಾಲಿಕಗಾಗಿ ಪುಟ್ಟದೊಂದು ಶೆಡ್ ಅನ್ನಾದರೂ ನಿರ್ಮಿಸಿದ್ದರೆ ಒಳ್ಳೆಯದಿತ್ತು ಎಂಬುದು ಸಾರ್ವಜನಿಕರ ನಿತ್ಯದ ಮಾತಾಗಿದೆ.
‘ಎಲ್’ ಆಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಮಹಿಳೆಯರ ಮತ್ತು ಪುರುಷರ ವಿಶ್ರಾಂತಿ ಕೊಠಡಿ, ಸುಸಜ್ಜಿತ ಶೌಚಾಲಯ, ನಿಯಂತ್ರಣಾಧಿಕಾರಿಗಳ ಕೊಠಡಿ, ಲಗೇಜ್ ಕೋಣೆ, ವೃತ್ತ ಪತ್ರಿಕೆ ಕೊಠಡಿ, ಹಾಗೂ 13 ಅಂಗಡಿ ಮಳಿಗೆಗಳಿವೆ. ಈ ಅಂಗಡಿ ಮಳಿಗೆಗಳನ್ನು ಬಾಡಿಗೆಗಾಗಿ ನಿರ್ಮಿಸಲಾಗಿದೆ.
₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬಸ್ ನಿಲ್ದಾಣದಲ್ಲಿ ಏಕ ಕಾಲದಲ್ಲಿ ಬಸ್‌ಗಳು ನಿಲ್ಲಬಹುದಾಗಿದೆ. ಬಸ್‌ಗಳ ಸಂಖ್ಯೆ ಹೆಚ್ಚಾದರೆ ಹಿಂದೆ ಮತ್ತು ಮುಂದೆ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ.
ಜನಾಭಿಪ್ರಾಯ
ಕೆಲಸ ಪೂರ್ಣಗೊಳಿಸಲು ಸೂಚನೆ
ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಕೆಲಸ ಬಾಕಿ ಇದೆ. ಶಾಸಕ ಎ.ಎಸ್.ಪೊನ್ನಣ್ಣ ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಸೂಚಿಸಿದ್ದಾರೆ.
- ಮಂಜುಳಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ಗೋಣಿಕೊಪ್ಪಲು
ಶೀಘ್ರದಲ್ಲೇ ಮುಗಿಯುವ ನಿರೀಕ್ಷೆ
ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ ಹಾಗೂ ಅಂತರಾಜ್ಯ ಹೆದ್ದಾರಿ ಇರುವ ಗೋಣಿಕೊಪ್ಪಲು ಪಟ್ಟಣದಲ್ಲಿ 20 ವರ್ಷಗಳಿಂದ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪ್ರಯಾಸಪಡುತ್ತಿದ್ದರು. ಕನಿಷ್ಠ ಈಗಲಾದರೂ ಬಸ್‌ನಿಲ್ದಾಣ ನಿರ್ಮಾಣವಾಗುತ್ತಿದೆ. ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಪ್ರಯಾಣಿಕರ ಬಳಕೆಗೆ ಶೀಘ್ರದಲ್ಲಿಯೇ ಲಭ್ಯವಾಗುವ ನಿರೀಕ್ಷೆ ಇದೆ
- ಪಿ.ಕೆ.ಪ್ರವೀಣ್, ವ್ಯಾಪಾರಿ, ಗೋಣಿಕೊಪ್ಪಲು
ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ
ಬಸ್ ನಿಲ್ದಾಣದಲ್ಲಿ ತಂಗುದಾಣವಿಲ್ಲದ್ದರಿಂದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಹೆದ್ದಾರಿ ದಾಟುವಾಗ ವಾಹನಗಳ ದಟ್ಟಣೆ ಕಂಡು ಆತಂಕ ಉಂಟಾಗುತ್ತದೆ. ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾಡಳಿತ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಕಡೆಗೆ ಗಮನಹರಿಸಲಿ.
- ಟಿ.ಆರ್. ವಿನೋದ್, ಆಟೊಚಾಲಕರು, ಪೊನ್ನಂಪೇಟೆ
ಕಾಮಗಾರಿ ಮುಗಿಸಲು ಒತ್ತಡ
ಈ ಹಿಂದೆ ನಿಗದಿಯಾದಂತೆ ಈ ವೇಳೆಗಾಗಲೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ತಡವಾಗಿದೆ. ₹ 2.40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಮಳೆಗಾಲ ಆರಂಭವಾದ್ದರಿಂದ ಪ್ರಯಾಣಿಕರಿಗೆ ಸೌಲಭ್ಯ ನೀಡಲು ನಾವೂ ಕೂಡ ಕಾಮಗಾರಿ ಮುಗಿಸಲು ಒತ್ತಡ ಹೇರುತ್ತಿದ್ದೇವೆ.
- ಕುಲ್ಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷರು ಗ್ರಾ.ಪಂ, ಗೋಣಿಕೊಪ್ಪಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.