
ಗೋಣಿಕೊಪ್ಪಲು: ಆಸಕ್ತಿ ಹಾಗೂ ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪ್ಯಾರ ಕಮಾಂಡರ್ ಎಚ್.ಆರ್.ಮನೋಜ್ ಹೇಳಿದರು.
ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ತಮಗೆ ಒದಗಿ ಬಂದಿರುವುದು ಸಂತಸ ತಂದಿದೆ. ಇದಕ್ಕೆ ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಮತ್ತು ಕೋಚಿಂಗ್ ಅಕಾಡೆಮಿ ಪರಿಶ್ರಮ ನೆನಪಿಸಿಕೊಳ್ಳಬೇಕಾಗಿದೆ. ಜ.15ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ಹೇಳಿದರು.
ಪೊನ್ನಂಪೇಟೆ ಜೈ ಜವಾನ್ ಡಿಫೆನ್ಸ್ ಮತ್ತು ಕೋಚಿಂಗ್ ಅಕಾಡೆಮಿ ಅಧ್ಯಕ್ಷ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಇನ್ ಸ್ಪೆಕ್ಟರ್ ಅಮ್ಮಣಿಚಂಡ ಲವನ್ ಮಾದಪ್ಪ ಮಾತನಾಡಿ, ಜಿಲ್ಲೆ ಭಾರತೀಯ ಸೈನ್ಯಕ್ಕೆ ಹೆಚ್ಚು ಸೈನಿಕರನ್ನು ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವಕರಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಕೊಡಗಿನ ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವ ಸಲುವಾಗಿ ಈ ಅಕಾಡೆಮಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ನಮ್ಮ ಅಕಾಡೆಮಿಯಲ್ಲಿ ಎನ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಜೊತೆಗೆ ಮಿಲಿಟರಿ ಏರ್ ಫೋರ್ಸ್ ಹಾಗೂ ನೇವಿಗೆ ಸೇರಲು ಬೇಕಾದ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಬಾಲಕ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯದ ಸೌಲಭ್ಯ ಇದ್ದು, ಜಿಲ್ಲೆ ಹಾಗೂ ಹೊರಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಯೋಧ ಎನ್.ಎಂ.ಬಷೀರ್, ಸಂಯೋಜಕ ಕೆ.ಪಿ.ನರೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.