ADVERTISEMENT

ಹದವಾದ ಮಳೆ: ಉತ್ತಮ ಬೆಳೆ

ಸರ್ಕಾರದ ಪ್ರೋತ್ಸಾಹಕ್ಕೆ ಪ್ರತಿಪಾದನೆ

ಜೆ.ಸೋಮಣ್ಣ
Published 22 ಆಗಸ್ಟ್ 2021, 16:49 IST
Last Updated 22 ಆಗಸ್ಟ್ 2021, 16:49 IST
ಉತ್ತಮ ಮಳೆಯಿಂದ ಸಮೃದ್ಧಗೊಂಡ ಅಡಿಕೆ ಬೆಳೆ
ಉತ್ತಮ ಮಳೆಯಿಂದ ಸಮೃದ್ಧಗೊಂಡ ಅಡಿಕೆ ಬೆಳೆ   

ಗೋಣಿಕೊಪ್ಪಲು: ಈ ಬಾರಿ ಉತ್ತಮ ಮಳೆ. ಎಲ್ಲ ಬೆಳೆಗೂ ಹೇಳಿ ಮಾಡಿಸಿದಂತಿದೆ. ಕಾಫಿ, ಭತ್ತ, ಮೆಣಸು, ಅಡಿಕೆ ಮತ್ತಿತರ ಬೆಳೆಗೆ ಅನುಕೂಲಕರವಾಗಿದೆ.

–ಇದು ಬಾಳೆಲೆ ಜಾಗಲೆಯ ಕಾಫಿ ಬೆಳೆಗಾರ ಅಳಮೇಂಗಡ ಬೋಸ್ ಮಂದಣ್ಣ ಅವರ ಮಳೆ ಬೆಳೆ ಕುರಿತ ಸಂತಸದ ನುಡಿ.

ಜಿಲ್ಲೆಯಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳೆಂದರೆ ಗಡಿಭಾಗದಲ್ಲಿರುವ ಬಾಳೆಲೆ, ತಿತಿಮತಿ, ಕೋಣನಕಟ್ಟೆ ಗ್ರಾಮಗಳು.

ADVERTISEMENT

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿದ್ದರೂ ಇಲ್ಲಿಗೆ ವಾರ್ಷಿಕವಾಗಿ ಸರಾಸರಿ 45ರಿಂದ 50 ಇಂಚು ಮಳೆ ಬೀಳುತ್ತದೆ. ಇದು ಕಾಲ ಕಾಲಕ್ಕೆ ಹದವಾಗಿ ಬಿದ್ದರೆ ಭತ್ತ, ಕಾಫಿ, ಮೆಣಸು ಮೊದಲಾದ ಬೆಳೆಗೆ ಅನುಕೂಲವಾಗುತ್ತದೆ.

ಹಲವು ವರ್ಷಗಳ ಬಳಿಕ ಇಂತಹ ಮಳೆ ಬಿದ್ದಿರುವುದರಿಂದ ಈ ಭಾಗದ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಉತ್ತಮ ಕಾಫಿ ಮತ್ತು ಭತ್ತದ ಇಳುವರಿಯ ಕನಸು ಕಂಡಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಇದೇ ರೀತಿಯ ಮಳೆ ಹಾಗೂ ಪೂರಕ ಹವಾಮಾನವಿದ್ದರೆ ಉತ್ತಮ ಬೆಳೆ ಕೈಗೂಡಲಿದೆ ಎಂಬುದು ಕೃಷಿಕರ ಆಶಯ.

ಶ್ರೀಮಂಗಲ, ಬಿರುನಾಣಿ, ಬೀರುಗ, ಟಿ.ಶೆಟ್ಟಿಗೇರಿ, ಹುದಿಕೇರಿ, ಕಾಕೋಟುಪರಂಬು, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಸಿದ್ದಾಪುರ,ಬಾಳೆಲೆ, ತಿತಿಮತಿ ಮೊದಲಾದವು ದಕ್ಷಿಣ ಕೊಡಗಿನ ಪ್ರಮುಖ ಕೃಷಿ ಪ್ರದೇಶಗಳು.

ಇಲ್ಲಿನ ಒಂದೊಂದು ಗ್ರಾಮಗಳಿಗೂ ಮಳೆ ಪ್ರಮಾಣದಲ್ಲಿ ವ್ಯತ್ಯಾಸ ಕಾಣುತ್ತೇವೆ. ಬಿರುನಾಣಿ ಭಾಗಕ್ಕೆ ವಾರ್ಷಿಕವಾಗಿ 200 ಇಂಚು ಮಳೆ ಬಿದ್ದರೆ, 40 ಕಿ.ಮೀ. ದೂರದಲ್ಲಿರುವ ಪೊನ್ನಂಪೇಟೆಗೆ 60 ಇಂಚು ಮಳೆ ಬೀಳುತ್ತದೆ.

ಶ್ರೀಮಂಗಲ, ಹುದಿಕೇರಿ ಭಾಗಗಕ್ಕೆ 80ರಿಂದ 100 ಇಂಚಿನವರೆಗೂ ಮಳೆ ಸುರಿಯುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕಾಫಿ, ಅಡಿಕೆಗೆ ಶೀತ ಹೆಚ್ಚಾಗಿ ಕೊಳೆ ರೋಗದ ಬಾಧೆ ಕಾಡುತ್ತದೆ. ಈ ಬಾರಿ ಅಂತಹ ಸಂಕಷ್ಟ ಕಡಿಮೆಯಾಗಿದೆ. ಆದರೂ ಶ್ರೀಮಂಗಲ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಫಿಗೆ ಕೊಳೆ ರೋಗ ಬಾಧಿಸಿದೆ ಎಂಬುದು ಅಲ್ಲಿನ ರೈತರ ಅಭಿಪ್ರಾಯ.

ಹದವಾಗಿ ಮಳೆ ಬೀಳುತ್ತಿರುವುದರಿಂದ ಭತ್ತದ ಗದ್ದೆಗಳಿಗೂ ಉತ್ತಮವಾಗಿ ನೀರಾಗಿದೆ. ಮಳೆ ಆಶ್ರಯಕ್ಕೆ ಕೃಷಿ ಮಾಡುವ ಕೃಷಿಕರು ಭತ್ತವನ್ನು ಬಿತ್ತಿ ನಾಟಿ ಮಾಡಿದ್ದಾರೆ. ಮುಂದೆ ಆಗಾಗ್ಗೆ ಮಳೆ ಬಿದ್ದರೆ ಬೆಳೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಕೃಷಿಕರಾದ ನಲ್ಲೂರಿನ ತಿಮ್ಮಯ್ಯ.

ಹದವಾದ ಮಳೆ: ಬಾಳೆಲೆಯ ಪ್ರಗತಿಪರ ಕೃಷಿಕ ಪೋಡಮಾಡ ಮೋಹನ್ ತಮ್ಮ ಗದ್ದೆಯಲ್ಲಿ ನಾಟಿ ಮಾಡಿ ಉತ್ತಮ ಇಳುವರಿಯ ಕನಸು ಹೊತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಜೂನ್ 20ರಿಂದ ಆರಂಭವಾದ ಮಳೆ ಆಗಸ್ಟ್ 15ರವರೆಗೂ ನಿಧಾನವಾಗಿ ಬಿದ್ದಿತು. ಇದರಿಂದ ಹೊಳೆಯ ದಡದ ಕೃಷಿಕರು ಈ ಬಾರಿ ಪ್ರವಾಹದ ಆತಂಕದಿಂದ ದೂರವಾಗಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಾಟಿ ಕಾರ್ಯ ಸುಗಮ: ಲಕ್ಷ್ಮಣತೀರ್ಥ ನದಿ ಪ್ರವಾಹ ಈಚಿನ ವರ್ಷಗಳಲ್ಲಿ ಗದ್ದೆಗಳಿಗೆ ಭಾರಿ ಹಾನಿ ಉಂಟು ಮಾಡುತ್ತಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ಸಮಸ್ಯೆ ಆಗಲಿಲ್ಲ. ತಮ್ಮ ಗದ್ದೆಯಲ್ಲಿ ಸಂತೋಷವಾಗಿ ನಾಟಿ ಕಾರ್ಯ ಆರಂಭಿಸಲಾಗುವುದು ಎಂದು ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.