ಗೋಣಿಕೊಪ್ಪಲು: ಸಮವಸ್ತ್ರ, ಬೂಟು ತೊಟ್ಟು, ಕೈಯಲ್ಲಿ ಲಾಟಿ ಹಿಡಿದು ಕಾನೂನು ಸುವ್ಯವಸ್ಥೆಯಲ್ಲಿ ಸದಾ ಗಂಭೀರ ವದನದಲ್ಲಿರುತ್ತಿದ್ದ ಪೊಲೀಸರು ಭಾನುವಾರ ಗೋಣಿಕೊಪ್ಪಲಿನ ಕೆಸರು ಗದ್ದೆಯಲ್ಲಿ ಹೊರಳಾಡಿ, ಕುಣಿದು ಕುಪ್ಪಳಿಸಿದರು.
ಇದು ನಡೆದದ್ದು ಗೋಣಿಕೊಪ್ಪಲಿನ ಜೀಪ್ ಕಾಳಪ್ಪ ಅವರ ಕೆಸರು ಗದ್ದೆಯಲ್ಲಿ. ಇದೇ ಮೊದಲ ಬಾರಿಗೆ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಪೊಲೀಸರ ಕೆಸರು ಗದ್ದೆ ಕ್ರೀಡಾಕೂಟವನ್ನು ಭಾನುವಾರ ಆಯೋಜಿಸಲಾಗಿತ್ತು. ಇದರಲ್ಲಿ ವಾಲಿಬಾಲ್, ಹಗ್ಗ ಜಗ್ಗಾಟ, ಕಬಡ್ಡಿ, ಓಟ, ಮಡಿಕೆ ಒಡೆಯುವುದು ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಹಜವಾಗಿಯೇ ಉತ್ತಮ ದೇಹದಾರ್ಢ್ಯ ಹೊಂದಿರುವ ಪೊಲೀಸರು ತೀವ್ರ ಸ್ಪರ್ಧೆ ಒಡ್ಡಿದರು.
ತುಂಬಿ ತುಳುಕುತಿದ್ದ ಮಂಡಿವರೆಗಿನ ಕೆಸರಿನ ನೀರಿನಲ್ಲಿ ವಾಲಿಬಾಲ್ ಆಡಿದ ಪೊಲೀಸರು ಎದ್ದು ಬಿದ್ದು ಹೊರಳಾಡಿ ಗೆಲುವು ಸಾಧಿಸಲು ಸೆಣೆಸಾಡಿದರು. ತಳಮಟ್ಟಕ್ಕೆ ಬಂದ ಬಾಲ್ ಅನ್ನು ಮೇಲೆಕೆತ್ತುವ ಭರದಲ್ಲಿ ಚೆಂಡಿನೊಂದಿಗೆ ಕೆಸರಿನ ನೀರೂ ಮೇಲಕ್ಕೆ ಹಾರುತ್ತಿತ್ತು. ಎದುರಾಳಿಗಳು ಹೊಡೆದ ಸರ್ವಿಸ್ ಬಾಲ್ ಗಳನ್ನು ಎದುರಿಸುವಾಗ ನೀರನಲ್ಲಿ ಬಿದ್ದು ಹೊರಾಳುತಿದ್ದ ದೃಶ್ಯ ರೋಚಕವಾಗಿತ್ತು.
ನೀರಿನೊಳಗಿನ ಪೊಲೀಸರ ವಾಲಿಬಾಲ್ ಆಟ ನೋಡಲು ಬಂದ ಕ್ರೀಡಾಭಿಮಾನಿಗಳು ಹಾಗೂ ಇತರ ಪೊಲೀಸ್ ಸಿಬ್ಬಂದಿ ಕ್ರೀಡಾಪಟುಗಳನ್ನು ಚಪ್ಪಾಳೆ ತಟ್ಟಿ, ಸಿಳ್ಳು ಹೊಡೆದು ಕೂಗುತ್ತಾ ಹುರಿದುಂಬಿಸುತ್ತಿದ್ದರು. ಮತ್ತೊಂದೆಡೆ ಮಹಿಳೆಯ ಹಗ್ಗ ಜಗ್ಗಾಟ ರಣರೋಚಕವಾಗಿತ್ತು. ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸರು ಕೆಸರು ಗದ್ದೆಯಲ್ಲಿ ವರ್ಣರಂಜಿತ ಸಾಮಾನ್ಯ ಉಡುಗೆಯಲ್ಲಿ ಕಂಗೊಳಿಸಿದರು. ಹಗ್ಗ ಎಳೆಯುವಾಗ ತೀವ್ರ ಪೈಪೋಟಿ ಇದ್ದಿತು. ಉಭಯ ತಂಡದ ಮಹಿಳೆಯರು ಗೆಲ್ಲಲೇಬೇಕು ಎಂಬ ಛಲದಿಂದ ಹೋರಾಡಿದರು.
ಓಟದ ಸ್ಪರ್ಧೆಯಲ್ಲಿಯೂ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು. ಮಹಿಳಾ ಪೊಲೀಸರು, ಪುರುಷ ಪೊಲೀಸರು ಹಾಗೂ ಅವರ ಕುಟುಂಬದ ಮಕ್ಕಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೆಸರಿನ ಓಕುಳಿಯಲ್ಲಿ ಮಿಂದೆದ್ದರು. ಪುರುಷರ ನಡುವಿನ ಕಬಡ್ಡಿ ಪಂದ್ಯವು ಕೂಡ ಹಣಾಹಣಿಯಿಂದ ಕೂಡಿತ್ತು, ಎದುರಾಳಿ ಆಟಗಾರನನ್ನು ಹಿಡಿಯುವಾಗ ಕೆಸರು ನೀರಿನಲ್ಲಿ ಬಿದ್ದು ಹೊರಳಾಡುತ್ತಿದ್ದುದು ರೋಮಾಂಚಕಾರಿಯಾಗಿತ್ತು.
ಮುಂದಿನ ವರ್ಷದಿಂದ ಮಡಿಕೇರಿ
ಸೋಮವಾರಪೇಟೆ ತಾಲ್ಲೂಕಿನ ಪೊಲೀಸರಿಗೂ ಅವಕಾಶ ಬೆಳಿಗ್ಗೆ ಕ್ರೀಡಾಕೂಟ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮಾತನಾಡಿ ‘ಸದಾ ಕರ್ತವ್ಯ ನಿರತರಾಗುವ ಪೊಲೀಸರಿಗೆ ಒಂದು ದಿನದ ಮನರಂಜನೆ ಹಾಗೂ ಕ್ರೀಡಾ ಕೌಶಲದ ವೃದ್ಧಿಗಾಗಿ ಮೊದಲ ಬಾರಿಗೆ ವಿರಾಜಪೇಟೆ ವಿಭಾಗದ ಪೊಲೀಸರಿಗೆ ಕೆಸರು ಗದ್ದೆ ಕ್ರೀಡಾ ಕೂಟ ಆಯೋಜಿಸಲಾಗಿದೆ. ಇದನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ವರ್ಷದಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ವಿಭಾಗದ ಪೊಲೀಸರಿಗೂ ಇಂಥದ್ದೆ ಕ್ರೀಡಾ ಕೂಟ ಆಯೋಜಿಸಲಾಗುವುದು’ ಎಂದು ಹೇಳಿದರು. ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.