ಮಡಿಕೇರಿ: ಕೊಡಗಿನಲ್ಲಿರುವ ಕಾರ್ಮಿಕರ ಕೊರತೆ ಸಮಸ್ಯೆ ನೀಗಿಸಲು ಪ್ಯಾರಿಸ್‌ನಲ್ಲಿರುವ ‘ಗೆಸ್ಟ್ ವರ್ಕರ್’ (ಅತಿಥಿ ಕಾರ್ಮಿಕರು) ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲುವಿನಲ್ಲಿ ಸೋಮವಾರ ಸಿಎನ್‌ಸಿ ನಡೆಸಿದ 12ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ‘ಗೆಸ್ಟ್ ವರ್ಕರ್’ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಕೊಡಗಿಗೆ ಹೊರರಾಜ್ಯದಿಂದ ಬರುವ ಕಾರ್ಮಿಕರನ್ನು ಈ ಪರಿಕಲ್ಪನೆಯಡಿ ನಿಯಮಬದ್ಧಗೊಳಿಸಬೇಕು. ಆಗ ಮಾತ್ರ ಈ ವಲಸೆ ಕಾರ್ಮಿಕರ ವಿಷಯದಲ್ಲಿ ಕ್ರಮಬದ್ಧತೆ ರೂಪಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ವಲಸೆ ಕಾರ್ಮಿಕರ ನೆವದಲ್ಲಿ ಹೊರರಾಜ್ಯದವರೂ ಕೊಡಗಿನಲ್ಲಿ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ವಲಸೆ ಕಾರ್ಮಿಕರ ಬಳಿ ಇರುವ ಆಧಾರ್ ಕಾರ್ಡ್ ಮತ್ತಿತ್ತರ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಪೊಲೀಸರೂ ಹೇಳುತ್ತಿದ್ದಾರೆ. ಇದಕ್ಕೆ ಬದಲಾಗಿ ಹೊರಗಿನಿಂದ ಇಲ್ಲಿಗೆ ಬರುವ ಕಾರ್ಮಿಕರಿಗೆ ‘ಗೆಸ್ಟ್ ವರ್ಕರ್’ ಎಂದು ಪರಿಗಣಿಸಿ ನಿಯಮಬದ್ಧವಾಗಿ ಅನುಮತಿ ನೀಡಬೇಕು. ಅವರು ಕೆಲಸ ಮುಗಿದ ಬಳಿಕ ವಾಪಸ್ ತೆರಳಬೇಕು. ಮತ್ತೆ ಬರಬೇಕಾದರೆ ನವೀಕರಣಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗ ಎಗ್ಗಿಲ್ಲದೇ ಹೊರರಾಜ್ಯಗಳಿಂದ ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಅವರದ್ದೇಯಾದ ಒಂದು ಮಾರುಕಟ್ಟೆಯೂ ಈಗ ಸೃಷ್ಟಿಯಾಗಿದೆ. ಗೋವು ಕಳವು, ಹಲ್ಲೆ, ಸುಲಿಗೆ, ಕಳ್ಳತನ, ಅಕ್ರಮವಾಗಿ ಮೀನು ಹಿಡಿಯುವುದು ಹೀಗೆ ನಾನಾ ವಿಧದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೆಲವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ದಾರಿಯನ್ನು ಹುಡುಕಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ವಲಸೆ ಕಾರ್ಮಿಕರಿಗೆ ‘ಗೆಸ್ಟ್ ವರ್ಕರ್’ ಎಂದು ಹೆಸರಿನಡಿ ಅಧಿಕೃತವಾಗಿ ಜಿಲ್ಲೆಗೆ ಕಳುಹಿಸಿಕೊಟ್ಟು, ಕೆಲಸ ಮುಗಿದ ಬಳಿಕ ವಾಪಸ್ ಕರೆಸಿಕೊಳ್ಳುವಂತಹ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಜನಗಣತಿ ವೇಳೆ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು ಹಾಗೂ ಸಿಕ್ಕಿಂನ ‘ಸಂಘ ಮತಕ್ಷೇತ್ರದ’ ಮಾದರಿಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯವನ್ನು ಸಂಸತ್ತು ಮತ್ತು ವಿಧಾನಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.
ಈಗ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡಲಾಗುತ್ತಿದ್ದು, ಹೊರಗಿನ ಬಂಡವಾಳಶಾಹಿಗಳು ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್‌ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.
ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರ, ವಿರಾಜಪೇಟೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸೆ.18ರಂದು ಬೆಳಿಗ್ಗೆ 10.30ಕ್ಕೆ ಮೂರ್ನಾಡಿನಲ್ಲಿ 13ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕೊಲ್ಲಿರ ಗಯಾ, ಕಾಡ್ಯಮಾಡ ಗೌತಮ್, ಡಾ. ಕಾಳಿಮಾಡ ಶಿವಪ್ಪ, ಕಂಬೀರಂಡ ಬೋಪಣ್ಣ, ಕೊದೇಂಗಡ ನಟೇಶ್, ಕೇಚಮಾಡ ಶರತ್, ಪಾಲೆಂಗಡ ಮನು ನಂಜಪ, ಚೊಟ್ಟೆಯಂಡಮಾಡ ಉದಯ, ಮಾಣಿರ ಪ್ರವೀಣ್, ಮಾಣಿರ ಸಂಪತ್, ಚಿರಿಯಪಂಡ ಶ್ಯಾಮ್, ಮಾಣಿಪಂಡ ನಿರತ್, ಬೊಳ್ಳಿಮಾಡ ವಸಂತ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಬೊಟ್ಟಂಗಡ ಗಿರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.