ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದ ನಿವಾಸಿಗಳಾದ ಸಚಿನ್ ಮತ್ತು ರೋಷನ್ ಎಂಬುವವರ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ಬಾಳೇರ ಟಿಮ್ಸನ್ (36) ಮತ್ತು ಆತನ ತಾಯಿ ಬಾಳೇರ ಜ್ಯೋತಿ (63) ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಗಳು ಮಂಗಳವಾರ ಕಾರಿನಲ್ಲಿ ಸಚಿನ್ ಅವರ ಮನೆ ಬಳಿ ಬಂದಿದ್ದು, ಸಚಿನ್ ಜೊತೆ ಜಗಳ ಆರಂಭಿಸಿದ್ದರು. ಇವರ ಜಗಳ ನೋಡಿ ಸಚಿನ್ ಅವರ ಚಿಕ್ಕಪ್ಪನ ಮಗ ರೋಷನ್‌ಕುಮಾರ್ ಸಹ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಟಿಮ್ಸನ್ ಕಾರಿನಲ್ಲಿದ್ದ ರಿವಾಲ್ವರ್‌ನಿಂದ ಸಚಿನ್ ಅವರ ಬಲಗಾಲಿಗೆ ಹಾಗೂ ರೋಷನ್ ಅವರ ಎಡ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆಸ್ತಿ ವಿಚಾರಕ್ಕಾಗಿ ಈ ಜಗಳ ನಡೆದಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಟಿಮ್ಸನ್ ಬಳಿ ಇರುವ ರಿವಾಲ್ವರ್‌ನ ಜಮ್ಮಾ ವಿನಾಯಿತಿಯನ್ನು ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.
ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.