ADVERTISEMENT

ಕೊಡಗು: ಮೋಜು, ಮಸ್ತಿಯ ತಾಣವಾದ ಹಾರಂಗಿ ಹಿನ್ನೀರು

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು?

ರಘು ಹೆಬ್ಬಾಲೆ
Published 17 ನವೆಂಬರ್ 2025, 4:24 IST
Last Updated 17 ನವೆಂಬರ್ 2025, 4:24 IST
ಪುಟ್ಟಸ್ವಾಮಿ ಕಾರ್ಯಪಾಲಕ ಎಂಜಿನಿಯರ್. ಕಾವೇರಿ ನೀರಾವರಿ ನಿಗಮ
ಪುಟ್ಟಸ್ವಾಮಿ ಕಾರ್ಯಪಾಲಕ ಎಂಜಿನಿಯರ್. ಕಾವೇರಿ ನೀರಾವರಿ ನಿಗಮ   

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಹಿನ್ನೀರಿನ ಸುಂದರ ಪ್ರದೇಶ ಇದೀಗ ಯುವಕರ ಮೋಜಿನ ತಾಣವಾಗಿ ಮಾರ್ಪಟ್ಟಿದೆ.

ಹಾರಂಗಿ ಹಿನೀರಿನ ಪ್ರದೇಶ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಬಹುತೇಕ ಪ್ರದೇಶ ಕಾಫಿ ತೋಟಗಳಿಂದ ಅವೃತ್ತಗೊಂಡಿದೆ. ಜೊತೆಗೆ, ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಂತೆ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳೂ ಇವೆ.

ಇನ್ನುಳಿದ  ಹಿನ್ನೀರಿನ ಪ್ರದೇಶ ಮೋಜುಮಸ್ತಿಯ ತಾಣವಾಗಿ ರೂಪುಗೊಂಡಿದೆ. ಈ ಪ್ರದೇಶ ಅಸುರಕ್ಷಿತವಾಗಿದೆ. ಇಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣವೂ ಇಲ್ಲ. ದೂರದ ಊರುಗಳಿಂದ ತಂಡೋಪತಂಡವಾಗಿ ಬರುವ ಪ್ರವಾಸಿಗರು, ಯುವಕರು ಮದ್ಯಪಾನ ಹಾಗೂ ಗಾಂಜಾ ಸೇವನೆ ಮಾಡಿ ಹಿನ್ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ ಅನೇಕ ಪ್ರಕರಣಗಳು ಇಲ್ಲಿ ನಡೆದಿವೆ.

ADVERTISEMENT

ಕುಶಾಲನಗರ ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ದುಬಾರೆ, ಚಿಕ್ಲಿಹೊಳೆ, ಹಾರಂಗಿ, ಕಾವೇರಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರು ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಉಳಿದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಈ ಪ್ರದೇಶ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಇದು ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣ ಕುಶಾಲನಗರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಕಾರು ಮತ್ತು ಬೈಕ್‌ಗಳಲ್ಲಿ ಇಲ್ಲಿಗೆ ತಲುಪಬಹುದು. ಗಹಾಗಾಗಿ, ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಹೇಳಿ ಮಾಡಿಸಿದಂತೆ ಇರುವುದರಿಂದ ಸಹಜವಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಇಲ್ಲಿನ ವಿಶಾಲ ಹುಲ್ಲುಗಾವಲು, ಹಿನ್ನೀರಿನ ಅಲೆಗಳು, ಸಾಗರದಂತೆ ಕಾಣುವ ಜಲರಾಶಿ, ನೀರನ್ನು ತಡೆದು ನಿಲ್ಲಿಸಿರುವ ಮಹಾಗೋಡೆಯಂತ್ತಿರುವ ಅಣೆಕಟ್ಟೆ, ಸಂಜೆಯ ವೇಳೆಗೆ ಸೂರ್ಯಾಸ್ತ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಮನಸೂರೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ಪಿಕ್‌ನಿಕ್‌ ಸ್ಥಳವಾಗಿದೆ. ಇಲ್ಲಿಗೆ ಬರುವ ಯುವಕರ ತಂಡ ಮದ್ಯದ ಬಾಟಲಿಗಳನ್ನು ಹಾಗೂ ಹೋಟೆಲ್‌ಗಳಿಂದ ಮಾಂಸಾಹಾರ ತಂದು ಅಲ್ಲಿಯೇ ತಿಂದು, ಕುಡಿದು, ತ್ಯಾಜ್ಯಗಳನ್ನು ಅಲ್ಲಿಯೆ ಬಿಸಾಕಿ ಹೋಗುತ್ತಿದ್ದಾರೆ. ಜೊತೆಗೆ, ಈ ಸುಂದರ ತಾಣ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಕೆಲ ಯುವಕರ ಬೇಜವಾಬ್ದಾರಿ ವರ್ತನೆಗಳಿಂದ ಈಗ ಸಭ್ಯರು ,ಕುಟುಂಬಸ್ಥರು ಇಲ್ಲಿಗೆ ಹೋಗದಂತ ವಾತಾವರಣ ನಿರ್ಮಾಣ ಆಗಿದೆ.

ಅಪಾಯಕಾರಿ ಪ್ರದೇಶದಲ್ಲಿ ಈಜಲು ತೆರಳಿ ಹಾಗೂ ಕುಡಿದು ಮೋಜು ಮಾಡಲು ಹೋದ ಕೆಲವರು ಮೃತಪಟ್ಟಿದ್ದಾರೆ. ಇಂತಹ ಸುಂದರ ತಾಣ ಈಗ ಮೋಜುಮಾಸ್ತಿಗಳ ತಾಣವಾಗಿ ರೂಪುಗೊಂಡಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಉದ್ಭವಿಸಿದೆ.

ಚಂದ್ರಶೇಖರ್ ಹೇರೂರು ನಿವಾಸಿ
ಭಾಸ್ಕರ್ ನಾಯಕ್ಹಾರಂಗಿ ನಿವಾಸಿ.

ಪ್ರತಿಕ್ರಿಯೆಗಳು ರಾತ್ರಿ ವೇಳೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಪ್ರವಾಸಿಗರು ಆಗಮಿಸದಂತೆ ನಿರ್ಬಂಧ ಹಾಕಬೇಕು. ಜೊತೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಿಂದಾಗ್ಗೆ ಬೀಟ್ ನಡೆಸಬೇಕು. ಮದ್ಯಪಾನ ಮುಕ್ತ ಪ್ರದೇಶವಾಗಿ ಘೋಷಣೆ ಮಾಡಬೇಕು.

-ಭಾಸ್ಕರ್ ನಾಯಕ್ ಹಾರಂಗಿ ನಿವಾಸಿ.

ಪೊಲೀಸರ ಗಸ್ತು ಹೆಚ್ಚಿಸಿ ಹಾರಂಗಿ ಹಿನ್ನೀರಿಗೆ ಬರುವ ಯುವಕರು ಮದ್ಯಪಾನ ಗಾಂಜಾ ಸೇವನೆ ಮಾಡಿ ತ್ಯಾಜ್ಯವನ್ನು ಅಲ್ಲಿಯೆ ಹಾಕಿ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ. ಪೊಲೀಸರು ಗಸ್ತು ಹೆಚ್ಚಿಸುವ ಮೂಲಕ ಪ್ರವಾಸಿಗರು ಹಾಗೂ ಯುವಕರ ಮೇಲೆ ನಿಗವಹಿಸಬೇಕು. ಜೊತೆಗೆ ಸ್ಥಳೀಯ ಸಂಸ್ಥೆಗಳ ಹಾಗೂ ನೀರಾವತಿ ಇಲಾಖೆ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

-ಚಂದ್ರಶೇಖರ್ ಹೇರೂರು ಗ್ರಾಮದ ನಿವಾಸಿ.

ಪೊಲೀಸರಿಗೆ ಪತ್ರ ಬರೆಯಲಾಗಿದೆ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಇಲಾಖೆ ವತಿಯಿಂದ ಕೆಲವು ಸೂಚನ ಫಲಕಗಳನ್ನು ಅಳವಡಿಸಿದ್ದೇವೆ. ಆದರೂ ಕೆಲವು ಯುವಕರು ಅಲ್ಲಿಗೆ ಬಂದು ಮದ್ಯ ಸೇವನೆ ಮಾಡಿ ಅಪಾಯಕಾರಿ ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಪತ್ರ ಬರೆದು ಅನೈತಿಕ ಚಟುವಟಿಕೆಗಳ ನಿಗಾ ವಹಿಸುವಂತೆ ತಿಳಿಸಲಾಗಿದೆ.

-ಪುಟ್ಟಸ್ವಾಮಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್

ಅರಣ್ಯ ಇಲಾಖೆ ಕ್ರಮ ವಹಿಸಬೇಕು ಹಿನ್ನೀರು ಪ್ರದೇಶದಲ್ಲಿ ಪ್ರತಿವರ್ಷ ಅಪಾಯವನ್ನು ಅರಿಯದೆ ಹಲವು ಮಂದಿ  ಸಾವನ್ನಪ್ಪಿರುವುದು ಬೇಸರ ತಂದಿದೆ‌. ವಾಹನ ತಪಾಸಣೆ ನಡೆಸದೇ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ವಿದ್ಯಾರ್ಥಿಗಳಂತು ಶಾಲಾ-ಕಾಲೇಜುನ್ನು ಬಿಟ್ಟು ಈ ಪ್ರದೇಶಕ್ಕೆ ಬಂದು ತನ್ನ ಪ್ರಾಣವನ್ನು ಕಳೆದುಕೊಳ್ಳುವುದು ಕಂಡುಬರುತ್ತಿದೆ. ಅಲ್ಲದೆ ಗ್ರಾಮ ಪಂಚಾಯಿತಿ ವತಿಯಿಂದ ಈ ಅಪಾಯವನ್ನು ತಡೆಗಟ್ಟಲು ಕಂದಕವನ್ನು ನಿರ್ಮಿಸುವ ನಿರ್ಧಾರ ಕೈಗೊಂಡಿದೆ. ಆದರೂ ಕೂಡ ಅರಣ್ಯ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ವಹಿಸಿ  ಸಿಬ್ಬಂದಿಗಳನ್ನು ನೇಮಕ ಮಾಡುವ ಮೂಲಕ ಇಂತಹ ಪ್ರಾಣವನ್ನು ಉಳಿಸುವಂತೆ ಕ್ರಮ ಕೈಗೊಳ್ಳಬೇಕು

- ಮಂಡೋಡಿ ಜಗನ್ನಾಥ್ ನಾಕೂರು ಶಿರಂಗಾಲ ಗ್ರಾಮ ಪಂಚಾಯತಿಯ ಅಧ್ಯಕ್ಷ.

ಎಚ್ಚರಿಕೆ ವಹಿಸಿ ಹಿನ್ನೀರು ಪ್ರದೇಶ ಸ್ಥಳೀಯರಿಗೆ ಮಾತ್ರ ತಿಳಿದಿದೆ. ಪ್ರವಾಸಿಗರು ಮತ್ತು ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರಿಗೆ ಅಪಾಯದ ಸ್ಥಳದ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಈ ರೀತಿಯ ಅನಾಹುತ ಸಂಭವಿಸುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು

- ಸತೀಶ್ ಸ್ಥಳೀಯ ನಿವಾಸಿ

ಜನರ ಪ್ರಾಣ ಸುರಕ್ಷತೆಗೆ ಬೇಕಿದೆ ಭದ್ರತೆ:

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಹಾರಂಗಿ ಹಿನ್ನೀರು ಪ್ರದೇಶವಾದ ಹಾದ್ರೆ ಹೇರೂರು ಪ್ರದೇಶದಲ್ಲಿ ಪ್ರತಿ ವರ್ಷ ಜನ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಈ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಲಾರಂಭಿಸಿದೆ. ವಾರಾಂತ್ಯದಲ್ಲಿ ಮತ್ತು ರಜಾ ದಿನಗಳಲ್ಲಿ ಈ ಪ್ರದೇಶಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಆಗಮಿಸುತ್ತಾರೆ. ಇದರ ಬೆನ್ನಲ್ಲೇ ಶಾಲಾ ವಿದ್ಯಾರ್ಥಿಗಳು ಕೂಡ ತರಗತಿಗೆ ತೆರಳದೆ ಈ ಹಿನ್ನೀರು ಪ್ರದೇಶಕ್ಕೆ ಹೋಗಿ ಸ್ನಾನ ಮಾಡುವುದು ಮತ್ತು ಈಜಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಹೇರೂರು ಈ ಹಿನ್ನೀರು ಪ್ರದೇಶ ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ಮತ್ತು ಕಿಡಿಗೇಡಿಗಳಿಗೆ ಮೋಜು ಮಸ್ತಿಯ ತಾಣವಾಗಿ ಪರಿಣಮಿಸುತ್ತಿರುವುದು ಜನವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗೆ ಬರುವಂತಹ ಪ್ರವಾಸಿಗರು ಮತ್ತು ಸಾರ್ವಜನಿಕರು ಈ ಹಿನ್ನೀರು ಪ್ರದೇಶದ ಅಪಾಯದ ಸ್ಥಳ ಅರಿಯದೇ ಈಜಿ ಸ್ನಾನ ಮಾಡಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹಸುಂಟಿಕೊಪ್ಪದಿಂದ ಕಾನ್ ಬೈಲ್  ಮಾರ್ಗವಾಗಿ ಮತ್ತು ಬಸವನಹಳ್ಳಿಯಿಂದ ಹೇರೂರು ಕಡೆಗೆ ತೆರಳುವ ಮಧ್ಯಭಾಗದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್  ಇದ್ದರೂ ಕೂಡ ಆ ಪ್ರದೇಶದಲ್ಲಿ ಸಿಬ್ಬಂದಿಗಳು ಇಲ್ಲದೇ ಇರುವುದರಿಂದ ಈ ಚೆಕ್ ಪೋಸ್ಸ್ ನಾಮಾಕವಸ್ಥೆಗೆ ಇರುವಂತಾಗಿದೆ. ಒಂದು ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದರೆ ಇಂತಹ ಸಾವು ನೋವುಗಳನ್ನು ತಪ್ಪಿಸುವ ಅವಕಾಶ ಹೆಚ್ಚಾಗಿದೆ ಎನ್ನುವ ಕೂಗು ಜನವಲಯದಲ್ಲಿ ಕೇಳಿ ಬರುತ್ತಿಗಹದೆ. ಇಲ್ಲಿಗೆ ಬರುವ ಪ್ರವಾಸಿಗರ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಅವರಲ್ಲಿ ಎಚ್ಚರಿಕೆ ನೀಡುವ ಕೆಲಸ ಆಗಬೇಕಾಗಿದೆ. ಕೆಲವು ಕಡೆಗಳಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ‘ನಿಧಾನವಾಗಿ ಚಲಿಸಿರಿ’ ‘ನಿರ್ಬಂಧಿತ ಸ್ಥಳಗಳಿಗೆ ಪ್ರವೇಶವಿಲ್ಲ’ ತಪ್ಪಿದ್ದಲ್ಲಿ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುವುದು ಎನ್ನುವ ನಾಮಫಲಕಗಳು ಇದ್ದರೂ ಕೂಡ ಅದು ಕೇವಲ ನಾಮಪಲಕಗಳಿಗೆ ಮಾತ್ರ ಸೀಮಿತವಾಗಿ ಜನಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.