ADVERTISEMENT

ಕುಶಾಲನಗರ | 'ಹಾರಂಗಿ ಮುಖ್ಯನಾಲೆ ತೂಬು ಅಭಿವೃದ್ಧಿ'

ಕೂಡಿಗೆ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:46 IST
Last Updated 10 ಸೆಪ್ಟೆಂಬರ್ 2025, 7:46 IST
ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಿಂದ ಹೆಬ್ಬಾಲೆಯವರೆಗೆ ₹3.80 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು 
ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಿಂದ ಹೆಬ್ಬಾಲೆಯವರೆಗೆ ₹3.80 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಚಾಲನೆ ನೀಡಿದರು    

ಕುಶಾಲನಗರ: ತಾಲ್ಲೂಕಿನ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಬಾಕಿ ಉಳಿದ 7 ಕಿಲೋ ಮೀಟರ್ ಎಡದಂತೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದೆ. ₹50 ಕೋಟಿ ವೆಚ್ಚದಲ್ಲಿ ತೂಬುಗಳ ಅಭಿವೃದ್ಧಿ ಕಾರ್ಯ ಕೂಡ ನಡೆಯಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಸಮೀಪದ ಕೂಡಿಗೆ ಗ್ರಾಮದಿಂದ ಹೆಬ್ಬಾಲೆಯವರೆಗೆ ₹3.80 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‌ಮಡಿಕೇರಿ - ಹಾಸನ ಹೆದ್ದಾರಿ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನ‌ಗಳು ಓಡಾಡುತ್ತಿವೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.

ADVERTISEMENT

ಮಳೆ ಬರುವಾಗ ಡಾಂಬರು ಹಾಕಬೇಡಿ. ಇತರೆ ಕೆಲಸಗಳನ್ನು ಮುಗಿಸಿ, ಬಿಸಿಲಿನಲ್ಲಿ ಡಾಂಬರೀಕರಣ ಕಾರ್ಯ ಕೈಗೊಳ್ಳಬೇಕು. ಕೂಡಿಗೆಯಿಂದ ಕುಶಾಲನಗರದವರೆಗೆ ರಸ್ತೆ ಸಂಪೂರ್ಣ ಹಾನಿಯಾಗಿ, ಗುಂಡಿ ಬಿದ್ದಿದೆ. ಈ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಕೂಡ ನಡೆಯುತ್ತಿದೆ ಎಂದರು.

ತೀವ್ರ ಹದಗೆಟ್ಟಿದ್ದ ಕಣಿವೆಯಿಂದ ಯಲಕನೂರುವರೆಗಿನ ರಸ್ತೆ ಅಭಿವೃದ್ಧಿಗೆ ₹15 ಕೋಟಿ ಮಂಜೂರು ಆಗಿದೆ. ಸೇತುವೆ ನಿರ್ಮಾಣಕ್ಕೂ ₹3 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇನೆ. ಇನ್ನೂ ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ. ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಇವೆ. ಕಾಡಾನೆ ಹಾವಳಿ ಹಾಗೂ ತೀವ್ರ ಹದಗೆಟ್ಟ ರಸ್ತೆ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಕ್ರಮಕೈಗೊಂಡಿದ್ದಾರೆ. ಹಳೆಕೂಡಿಗೆ ಭಾಗದಲ್ಲಿ ಕಾಂಕ್ರಿಟ್ ರಸ್ತೆ ನನೆಗುದ್ದಿಗೆ ಬಿದ್ದಿದೆ. ಈ ಸಾಲಿನಲ್ಲಿ ಈ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನೀರಾವರಿ ಇಲಾಖೆಯಲ್ಲಿ ಮೂಲಕ ಕಾಲುವೆ, ಸೇತುವೆ ಹಾಗೂ ರಸ್ತೆಗಳ ಅಭಿವೃದ್ಧಿ ಮಾಡಲು ಅವಕಾಶ ಇತ್ತು. ಆದರೆ ಈಗ ನೀರಾವರಿ ಇಲಾಖೆಗೆ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡಿಲ್ಲ. ಇದರಿಂದ ನಾಲೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ಹಮೀದ್, ಅರುಣ್ ರಾವ್, ಅನಂತ್, ಎಚ್.ಎಸ್.ರವಿ, ಶಿವಕುಮಾರ್, ಮೋಹಿನಿ, ಮಾಜಿ ಅಧ್ಯಕ್ಷೆ ಶೋಭಾ ಪುಟ್ಟಪ್ಪ, ಲೋಕೋಪಯೋಗಿ ಇಲಾಖೆ ಸಹಾಯ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.


ಬಾಬು ಜಗಜೀವನ್ ರಾಮ್ ವೃತ್ತಕ್ಕೆ ಶಂಕುಸ್ಥಾಪನೆ

ಪಟ್ಟಣದ ಟೋಲ್ ಗೇಟ್‌ನ ಕಾಳಮ್ಮ ಕಾಲೋನಿ ಬಳಿ ಪುರಸಭೆ ವತಿಯಿಂದ ₹ 6.5 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರ ಸರ್ಕಲ್ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು.

ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯರಾದ ಖಲಿಮುಲ್ಲಾ, ಬಿ.ಜೈವರ್ಧನ್, ಸುರೇಯಾಬಾನು, ನಾಮನಿರ್ದೇಶಿತ ಸದಸ್ಯ ಶಿವಶಂಕರ್, ಎಂ.ವಿ.ಹರೀಶ್, ಎಂ.ಎಂ.ಪ್ರಕಾಶ್, ಜಗದೀಶ್, ನವೀನ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯಾಧಿಕಾರಿ ಗಿರೀಶ್, ಗುತ್ತಿಗೆದಾರ ಅಜೀಜ್ ಇತರರು ಪಾಲ್ಗೊಂಡಿದ್ದರು.

ಕಾಲೇಜು ಕಟ್ಟಡ ಉದ್ಘಾಟನೆ: ಇಲ್ಲಿನ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಮಂಗಳವಾರ ಕಮಾನು, ತಡೆಗೋಡೆ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ಸಿವಿಲ್ ವಿಭಾಗದ ಹೆಚ್ಚುವರಿ ಕಟ್ಟಡ, ಪ್ರಯೋಗಾಲಯದ ಕಟ್ಟಡವನ್ನು ಕೂಡ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.