ADVERTISEMENT

ಸುಂಟಿಕೊಪ್ಪ, ಸಿದ್ದಾಪುರದಲ್ಲಿ ಮೆರವಣಿಗೆ ವೇಳೆ ಸೌಹಾರ್ದತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 7:31 IST
Last Updated 18 ಸೆಪ್ಟೆಂಬರ್ 2024, 7:31 IST
ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಿಂದ ಮೆರವಣಿಗೆ ಹೊರಟ ಮುಸ್ಲಿಮರಿಗೆ ಹಿಂದುಗಳು ಶುಭಾಶಯ ಕೋರಿದರು
ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಿಂದ ಮೆರವಣಿಗೆ ಹೊರಟ ಮುಸ್ಲಿಮರಿಗೆ ಹಿಂದುಗಳು ಶುಭಾಶಯ ಕೋರಿದರು   

ಸುಂಟಿಕೊಪ್ಪ: ಇಲ್ಲಿನ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯು ಮುಖ್ಯ ಬೀದಿಯಲ್ಲಿ ಸಾಗಿ ಕೆಇಬಿ ಬಳಿಯ ಮಸೀದಿಯ ಮುಂಭಾಗ ಬರುತ್ತಿದ್ದಂತೆ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಹಿಂದೂಗಳಿಗೆ ತಂಪು ಪಾನೀಯಗಳನ್ನು ವಿತರಿಸಿ ಸೋದರತೆಯ ಬಾಂಧವ್ಯ ಮೆರೆದರು.

ಇದೇ ವೇಳೆ, ಆಸೀಫ್, ಅಣ್ಣಾ ಶರೀಫ್, ಉಸ್ಮಾನ್ ಹಾಗೂ ಕೆಇಬಿಯ ಭಾಗದ ಮುಸ್ಲಿಂ ಯುವಕರು ಭಾಗವಹಿಸಿದ್ದರು.

ಹಾಗೆಯೇ ಸುಂಟಿಕೊಪ್ಪದ ವಿವಿಧ ಮಸೀದಿಗಳಿಂದ ಹೊರಟ ಈದ್ ಮಿಲಾದ್ ಘೋಷಯಾತ್ರೆಯ ಸಂದರ್ಭದಲ್ಲಿ ಭಾಗವಹಿಸಿದ್ದ ದಫ್ ಮಕ್ಕಳು ಸೇರಿದಂತೆ ಎಲ್ಲ ಮುಸ್ಲಿಮರಿಗೆ ಇಲ್ಲಿನ ಹಿಂದೂಗಳು ರಾಮ ಮಂದಿರದ ಮುಂಭಾಗದಲ್ಕಿ ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆ ಸಾರಿದರು.

ADVERTISEMENT

ಇದೇ ವೇಳೆ ಮುಖಂಡರಾದ ಶಾಂತರಾಮ ಕಾಮತ್, ದಿನು ದೇವಯ್ಯ, ಎಂ.ಮಂಜುನಾಥ್, ಧನುಕಾವೇರಪ್ಪ, ಸುರೇಶ್ ಗೋಪಿ, ಬಿ.ಎಂ.ಸುರೇಶ್, ಪೃಥ್ವಿ, ಭುವಿತ್, ಪಿ.ಎಂ.ಲತೀಫ್, ಎಂ.ಎ.ಉಸ್ಮಾನ್, ಕೆ‌.ಇ.ಕರೀಂ, ಕೆ‌‌.ಎಚ್.ಶರೀಫ್, ಸಿ.ಎಂ.ಹಮೀದ್, ಲತೀಫ್ ಭಾಗವಹಿಸಿದ್ದರು.

ಸಿದ್ದಾಪುರ: ಈದ್‌ಮಿಲಾದ್ ಪ್ರಯುಕ್ತ ನಡೆದ ನೆಲ್ಯಹುದಿಕೇರಿಯ ನಲ್ವತ್ತೇಕರೆ ಹಾಗೂ ಗುಹ್ಯ ಗ್ರಾಮದ ಮಿಲಾದ್ ರಾಲಿಯಲ್ಲಿ ಹಿಂದೂ ಯುವಕರು ತಂಪು ಪಾನಿಯ ಹಾಗೂ ಸಿಹಿಯನ್ನು ಹಂಚಿ ಸೌಹಾರ್ದತೆ ಮೆರೆದರು. ನಲ್ವತ್ತೇಕರೆಯ ಫಲಾಹುಲ್ ಇಸ್ಲಾಂ ಮದರಸದಲ್ಲಿ ಶಾಹೇ ಮದೀನ ಈದ್ ಮಿಲಾದ್ ಸಮೀತಿ ನೇತೃತ್ವದಲ್ಲಿ ನಡೆದ ಮಿಲಾದ್ ರ‍್ಯಾಲಿಯು ಗ್ರಾಮದ ವಿನಾಯಕ ಮಿತ್ರ ಮಂಡಳಿಯ ಮುಂಭಾಗಕ್ಕೆ ಆಗಮಿಸುವ ವೇಳೆ ಮಿತ್ರ ಮಂಡಳಿಯ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಸದಸ್ಯರು ತಂಪು ಪಾನೀಯ ಹಾಗೂ ಸಿಹಿಯನ್ನು ಹಂಚಿದರು. ಈ ವೇಳೆ ಧರ್ಮ ಗುರುಗಳಾದ ಹುಸೈನ್ ಹಜಾರೀ ಉಸ್ತಾದ್ ಮಾತನಾಡಿ ‘ಎಲ್ಲಾ ಧರ್ಮಗಳು ಶಾಂತಿ ಸೌಹಾರ್ದತೆಯನ್ನು ಸಾರುತ್ತವೆ. ಎಲ್ಲಾ ಧರ್ಮದವರು ಕೂಡ ಸೌಹಾರ್ದತೆಯಿಂದ ಇದ್ದು ಮುಂದಿನ ಪೀಳಿಗೆಗಾಗಿ ಸೌರ್ಹಾರ್ದ ಭಾರತವನ್ನು ಕಟ್ಟಬೇಕು’ ಎಂದರು. ದೇವಾಲಯದ ಅರ್ಚಕ ರಾಘವೇಂದ್ರ ಭಟ್ ಮಾತನಾಡಿ ‘ಸಮಾಜದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಕೂಡಿ ಬಾಳುವ ಮೂಲಕ ಭಾಂದವ್ಯ ವೃದ್ದಿಯಾಗಲಿ ಎಂದರು. ಈ ವೇಳೆ ಜಮಾಅತ್ ಅಧ್ಯಕ್ಷ ಬೀರಾನ್ ಕುಟ್ಟಿ ವಿನಾಯಕ ಮಿತ್ರ ಮಂಡಳಿಯ ಮನೋಜ್ ಮಣಿ ಮಂಜು ರದೀಶ್ ರಂಜಿತ್ ವಿನಿತ ಶಾಂತ ಶೈಲಾ ಮಿಲಾದ್ ಆಚರಣಾ ಸಮಿತಿ ಅಧ್ಯಕ್ಷ ಅಯ್ಯೂಬ್ ಜಾಫರ್ ಯೂನಿಸ್ ಭಾಗವಹಿಸಿದ್ದರು. ಗುಹ್ಯ ಗ್ರಾಮದಲ್ಲಿ ಮಿಲಾದ್ ರ‍್ಯಾಲಿ ಗುಹ್ಯ ಗ್ರಾಮದ ತರ್ ಬಿಯತ್‌ ಉಲ್‌ ಇಸ್ಲಾಂ ಮದರಸ ವತಿಯಿಂದ ಮಿಲಾದ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಕೂಡುಗದ್ದೆಯ ಕಾರ್ಗಿಲ್ ಬಾಯ್ಸ್ ಯುವಕ ಸಂಘದ ಸಮೀಪ ಆಗಮಿಸುವ ವೇಳೆ ಸಂಘದ ಸದಸ್ಯರು ತಂಪು ಪಾನಿಯ ಹಾಗೂ ಸಿಹಿಯನ್ನು ವಿತರಿಸಿ ಸೌಹಾರ್ದತೆ ಮೆರೆದರು. ಈ ವೇಳೆ ಕಾರ್ಗಿಲ್ ಬಾಯ್ಸ್‌ನ ಸುದೀಶ್ ಶಹಿನ್ ಮನು ಮದರಸ ಅಧ್ಯಕ್ಷ ಮುಸ್ತಫ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.