ಕುಶಾಲನಗರ: ಸಮೀಪದ ಕೂಡಿಗೆ ರಾಮೇಶ್ವರ ಕೂಡು ಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಸಂಘದ ಸದಸ್ಯರು, ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ, ಸಾರ್ವಜನಿಕರಿಗೆ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ನಡೆಯಿತು.
ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಬಿರವನ್ನು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡು ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು’ ಎಂದರು.
‘ಸಂಘದ ವ್ಯಾಪ್ತಿಯ ಸಾವಿರಾರು ರೈತ ಸದಸ್ಯರು ಯಶಸ್ವಿನಿ ಯೋಜನೆಯಲ್ಲಿ ಪಾಲುದಾರರಾಗಿದ್ದಾರೆ. ರೈತ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಬಂದ ಸಂದರ್ಭಗಳಲ್ಲಿ ಇದರ ಪ್ರಯೋಜನವಾಗುತ್ತದೆ. ಈ ಸೌಲಭ್ಯವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹದೇವ ಮಾತನಾಡಿ, ‘ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸುರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ’ ಎಂದರು.
ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಪಿ. ರಾಜು, ಕೆ.ಜೆ. ಕುಮಾರ್, ಕೆ. ಬಿ. ರಾಮಚಂದ್ರ, ಆರ್. ಕೆ.ನಾಗ್ರೇಂದ್ರ ಬಾಬು, ಕೃಷ್ಣೆಗೌಡ, ಎಸ್, ಅರ್, ಅರುಣ್ ರಾವ್, ಎಸ್. ಎಸ್. ಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ, ಅಮ್ಮ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರೀತೂ ಪಾಲ್ಗೊಂಡಿದ್ದರು. ನೂರಕ್ಕೂ ಹೆಚ್ಚು ರೈತರು, ಸಾರ್ವಜನಿಕರು ತಪಾಸಣೆ ಶಿಬಿರದ ಪ್ರಯೋಜನ ಪಡೆದರು.
Highlights - ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೂ ಚಿಕಿತ್ಸೆ ಎಲ್ಲರೂ ಕಣ್ಣಿನ ತಪಾಸಣೆ ಮಾಡಿಸಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.