ಗೋಣಿಕೊಪ್ಪಲು: ಕಳೆದ 3 ದಿನಗಳಿಂದ ಮತ್ತೆ ಬಿರುಸಾಗಿರುವ ಬಿರುಗಾಳಿ ಮಳೆಗೆ ದಕ್ಷಿಣ ಕೊಡಗಿನ ಮರ ಗಿಡ, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಜತೆಗೆ ರಸ್ತೆ ಕುಸಿತ ಹಾಗೂ ಪ್ರವಾಹದಿಂದಾಗಿ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ.
ಶ್ರೀಮಂಗಲ ಕುಟ್ಟ ನಡುವಿನ ಕೇರಳ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ಹೆದ್ದಾರಿ ಕುಸಿದು ಈ ಮಾರ್ಗದ ಸಂಚಾರ ಕಡಿತಗೊಂಡಿದೆ. 3 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಮಡಿಕೇರಿ ಕೇರಳ ನಡುವಿನ ರಾಜ್ಯ ಹೆದ್ದಾರಿಯ ಒಂದು ಬದಿ ಕುಟ್ಟ ಬಳಿಯಲ್ಲಿ ಕುಸಿದಿತ್ತು. ಇದರಿಂದ ಕುಸಿತವಾಗಿದ್ದ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಒಂದು ರಸ್ತೆಯ ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇದೀಗ ಈ ಭಾಗವೂ ಕುಸಿತವಾಗಿದೆ. ಶುಕ್ರವಾರ ಈ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದು ರಸ್ತೆ ಬದಿಯಲ್ಲಿ ಹೂತು ಹೋಗಿ ನಿಂತಲ್ಲೇ ನಿಂತಿದೆ. ಇದರಿಂದ ಈ ಭಾಗದ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ಗೋಣಿಕೊಪ್ಪಲು ಪೊನ್ನಂಪೇಟೆ ಮಾರ್ಗದಿಂದ ಕೇರಳಕ್ಕೆ ತೆರಳಬೇಕಾಗಿದ್ದ ಬಸ್ ಮತ್ತಿತರ ವಾಹನಗಳು ಈಗ ಕಾನೂರು ಮಾರ್ಗವಾಗಿ ಕುಟ್ಟ ತಲುಪಿ ಅಲ್ಲಿಂದ ಕೇರಳ ಪ್ರವೇಶ ಮಾಡಬೇಕಾಗಿದೆ.
ಶ್ರೀಮಂಗಲ ಬಳಿಯ ಮನೆಯೊಂದರ ಮುಂದೆ ಇದ್ದ ವಿದ್ಯುತ್ ಕಂಬ ತುಂಡಾಗಿ ಮನೆ ಮುಂದೆಯೇ ಬಿದ್ದಿದೆ. ಇದರಿಂದ ಮನೆ ಆವರಣದಲ್ಲಿ ಹೂ ತೋಟದಲ್ಲಿದ್ದ ಹೂ ಚೆಟ್ಟಿ ಮತ್ತಿತರ ವಸ್ತುಗಳಿಗೆ ಹಾನಿಯಾಗಿದೆ. ಈ ವೇಳೆಯಲ್ಲಿ ಕಂಬದ ಬಳಿ ಯಾರೂ ಇಲ್ಲದ್ದರಿಂದ ಜೀವ ಹಾನಿ ತಪ್ಪಿದಂತಾಗಿದೆ.
ಶ್ರೀಮಂಗಲ ಭಾಗದಲ್ಲಿ ಈ ಮುಂಗಾರಿನಲ್ಲಿ ಅಂದಾಜು 777 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಸೆಸ್ಕ್ ಜೆಇ ತಿಳಿಸಿದ್ದಾರೆ. ಇವುಗಳನ್ನೆಲ್ಲ ಬದಲಾಯಿಸಿ ಗ್ರಾಮೀಣ ಭಾಗಗಳಿಗೆ ವಿದ್ಯುತ್ ಪೂರೈಸುವುದಕ್ಕೆ ಬಹಳಷ್ಟು ದಿನಗಳು ಬೇಕಾಗಬಹುದು ಎಂದು ಅವರು ಹೇಳಿದ್ದಾರೆ. ಅದರೂ ಸುರಿಯುತ್ತಿರುವ ಮಳೆಯ ನಡುವೆಯೇ ಸೆಸ್ಕ್‌ನವರು ವಿದ್ಯುತ್ ಸಂಪರ್ಕ ಒದಗಿಸಲು ಶ್ರಮಿಸುತ್ತಿದ್ದಾರೆ.
ಪಾಲಿಬೆಟ್ಟ ಅಮ್ಮತ್ತಿ ನಡುವಿನ ರಸ್ತೆಯಲ್ಲಿ ಕಾಫಿ ತೋಟದ ಬದಿಯಲ್ಲಿದ್ದ ಭಾರಿ ಗಾತ್ರದ ಮರ ಉರುಳಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಬ್ರಹ್ಮಗಿರಿ ಪರ್ವತದಲ್ಲಿ ಸುರಿಯುತ್ತಿರುವ ಮಳೆಗೆ ಇರ್ಪು ಜಲಪಾತ ಭೋರ್ಗರೆಯುತ್ತಿದೆ. ಇದಕ್ಕೆ ಸೇರುವ ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಲಕ್ಷ್ಮಣತೀರ್ಥ ನದಿ ಮತ್ತೊಮ್ಮೆ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಗದ್ದೆಗಳು ಜಲಾವೃತಗೊಂಡಿದ್ದು ಹರಿಹರ, ಕಾನೂರು, ಬಲ್ಯಮಂಡೂರು, ಬೆಕ್ಕೆಸೊಡ್ಲೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು, ಮಲ್ಲೂರು ಭಾಗದಲ್ಲಿ ಗದೆಗಳು ಸಮುದ್ರದಂತೆ ಕಂಡು ಬರುತ್ತಿವೆ. ಹರಿಹರ ಬಲ್ಯಮಂಡೂರು ನಡುವಿನ ಲಕ್ಷ್ಮಣತೀರ್ಥ ನದಿ ಪ್ರವಾಹ ಅತಿಯಾಗಿದ್ದು ಈ ಭಾಗದ ರಸ್ತೆ ಸಂಚಾರ ಕಡಿತಗೊಂಡಿದೆ.
ಪೊನ್ನಂಪೇಟೆ, ಹುದಿಕೇರಿ ನಡುವಿನ ಬೇಗೂರುಕೊಲ್ಲಿ ಮಳೆನೀರಿನಿಂದ ಜಲಾವೃತಗೊಂಡು ಸಾಗರದಂತೆ ಕಂಡು ಬರುತ್ತಿದೆ. ಅಮ್ಮತ್ತಿ ಭಾಗದಲ್ಲಿ ಮಳೆ ಪ್ರಮಾಣ ತುಸು ತಗ್ಗಿರುವುದರಿಂದ ಗೋಣಿಕೊಪ್ಪಲಿ ಭಾಗದ ಕೀರೆಹೊಳೆ ನೀರಿನಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.