ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ನಿಲ್ಲುವ ಹಾಗೂ ಬಿಸಿಲು ಬರುವ ಲಕ್ಷಣಗಳು ಕಾಣುತ್ತಿಲ್ಲ. ದೊಡ್ಡ ಗಾತ್ರದ ಕಾರ್ಮೋಡಗಳು ದಟ್ಟವಾಗಿ ಕವಿಯುತ್ತಲೇ ಇವೆ. ನಿರಂತರ ಮಳೆ, ಶೀತಗಾಳಿ ಇದೆ. ಮಳೆ ನಿಂತು ಬಿಸಿಲು ಮೂಡಲಿ ಎಂದು ಜನರು ತವಕಿಸುವಂತಹ ವಾತಾವರಣ ಸೃಷ್ಟಿಯಾಗಿದೆ.
ಮಡಿಕೇರಿ ನಗರದಲ್ಲಿ ವರುಣ ನೆಲ ಒಣಗಲು ಬಿಡುತ್ತಿಲ್ಲ. ಕೆಲವೊಮ್ಮೆ ಬಿರುಸಾಗಿ ಮತ್ತೆ ಹಲವು ಸಮಯ ಸಾಧಾರಣವಾಗಿ ಮಳೆ ಸುರಿಯುತ್ತಲೇ ಇದೆ. ಮಡಿಕೇರಿ ತಾಲ್ಲೂಕಿನ ಸಂಪಾಜೆ, ನಾಪೋಕ್ಲು ಭಾಗಗಳಲ್ಲೂ ಮಳೆ ಬಿರುಸಾಗಿಯೇ ಮುಂದುವರಿದಿದೆ. ಶನಿವಾರವೂ ವಿದ್ಯಾರ್ಥಿಗಳು ನೆನೆಯುತ್ತಲೇ ಶಾಲೆ, ಕಾಲೇಜುಗಳಿಗೆ ತೆರಳಿ, ವರ್ಷಧಾರೆಯಲ್ಲೇ ವಾಪಸಾದರು.
ಮಡಿಕೇರಿಯಲ್ಲಿ ದಿನವಿಡೀ ದಟ್ಟ ಮೋಡಗಳು ಹಾಗೂ ದಟ್ಟ ಮಂಜು ಕವಿದಿತ್ತು. ಶೀತಗಾಳಿ ಬಲವಾಗಿಯೇ ಬೀಸುತ್ತಿತ್ತು. ಆರಿದ್ರ ಮಳೆ ಶನಿವಾರಕ್ಕೆ ಕೊನೆಯಾಗಲಿದ್ದು, ಪುನರ್ವಸು ಭಾನುವಾರದಿಂದ ಆರಂಭವಾಗಲಿದೆ. ನಂತರವಾದರೂ ಮಳೆ ಕಡಿಮೆಯಾಗಬಹುದೇ ಎಂಬುದು ಜನರ ನಿರೀಕ್ಷೆಯಾಗಿದೆ.
ವಿರಾಜಪೇಟೆಯಲ್ಲಿ ಮಳೆಯ ಬಿರುಸು ಕೊಂಚ ತಗ್ಗಿದೆ. ಸೋಮವಾರಪೇಟೆ, ಶನಿವಾರಸಂತೆ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಗೋಣಿಕೊಪ್ಪಲು ಭಾಗದಲ್ಲಿ ಬಿಟ್ಟು ಬಿಟ್ಟು ರಭಸವಾಗಿ ಮಳೆ ಸುರಿಯುತ್ತಿದೆ.
ತಾಲ್ಲೂಕುವಾರು ಗಮನಿಸಿದರೆ ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 7 ಸೆಂ.ಮೀನಷ್ಟು ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 2, ಪೊನ್ನಂಪೇಟೆ ತಾಲ್ಲೂಕಿನಲ್ಲಿ 2.8, ಸೋಮವಾರಪೇಟೆ ತಾಲ್ಲೂಕಿನಲ್ಲಿ 3.9, ಕುಶಾಲನಗರ ತಾಲ್ಲೂಕಿನಲ್ಲಿ 1.4 ಸೆಂ.ಮೀನಷ್ಟು ಸರಾಸರಿ ಮಳೆಯಾಗಿದೆ.
ಹೋಬಳಿವಾರು ಗಮನಿಸಿದರೆ, ಮಡಿಕೇರಿಯ ಕಸಬಾ ಹೋಬಳಿಯಲ್ಲಿ 5.3 ಸೆಂ.ಮೀ., ನಾಪೋಕ್ಲು 5.0, ಸಂಪಾಜೆ 4.9, ಭಾಗಮಂಡಲ 13, ವಿರಾಜಪೇಟೆ 2.3, ಅಮ್ಮತ್ತಿ 2.2, ಹುದಿಕೇರಿ 3.3, ಶ್ರೀಮಂಗಲ 2.8, ಪೊನ್ನಂಪೇಟೆ 3.5, ಬಾಳೆಲೆ 1.7, ಸೋಮವಾರಪೇಟೆ 3, ಶನಿವಾರಸಂತೆ 1.8, ಶಾಂತಳ್ಳಿ 8.7, ಕೊಡ್ಲಿಪೇಟೆ 2.2, ಸುಂಟಿಕೊಪ್ಪ 2.1 ಸೆಂ.ಮೀ. ಮಳೆ ಸುರಿದಿದೆ.
ಭಾರಿ ವಾಹನಗಳ ಸಂಚಾರ ನಿಷೇಧ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸ್ಥಳೀಯರ ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಜುಲೈ 6ರಿಂದ ಆಗಸ್ಟ್ 5ರವರೆಗೆ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ನಿರ್ಬಂಧಿತ ವಾಹನಗಳು: ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು ವಾಹನದ ನೋಂದಣಿ ತೂಕ 18500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣಿಕೆ ಮಾಡುವ ಸರಕು ಸಾಗಾಣಿಕೆ ವಾಹನಗಳು ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್ ಶಿಪ್ ಕಾರ್ಗೋ ಕಂಟೈನರ್ಸ್ ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು ಆರ್ಟಿಕ್ಯೂಲೇಟೆಡ್ ವಾಹನಗಳು ನಿರ್ಬಂಧದಿಂದ ವಿನಾಯಿತಿ ನೀಡಿದ ವಾಹನಗಳು: ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು ಹಾಲು ಪೂರೈಕೆ ವಾಹನಗಳು ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲಾಗುವ ವಾಹನಗಳು ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು ಮಲ್ಟಿ ಆಕ್ಸಲ್ ಬಸ್‍ಗಳು. ಚೆಕ್‌ಪೋಸ್ಟ್ ನಿರ್ಮಿಸಲು ಸೂಚನೆ ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸಿ ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲು ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಜಿಲ್ಲಾಧಿಕಾರಿ ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.