ADVERTISEMENT

ಶಾಂತತೆಯತ್ತ ಪುಷ್ಯ ಮಳೆ; ಮೊರೆಗರಿಯುತ್ತಿರುವ ಗಾಳಿ

ಉರುಳುತ್ತಿರುವ ಮರಗಳು, ವಿದ್ಯುತ್ ಕಂಬಗಳು, ಸೋಮವಾರಪೇಟೆ ಭಾಗದಲ್ಲಿ ಹೆಚ್ಚಿನ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 11:15 IST
Last Updated 23 ಜುಲೈ 2024, 11:15 IST
ಸೋಮವಾರಪೇಟೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯ ಬೈಕ್ ಮೇಲೆ ರಸ್ತೆ ಬದಿಯ ಮರಬಿದ್ದು, ಅಗ್ನಿಶಾಮಕ ಠಾಣೆಯವರು ಮರವನ್ನು ತೆರವುಗೊಳಿಸಿದರು. 
ಸೋಮವಾರಪೇಟೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯ ಬೈಕ್ ಮೇಲೆ ರಸ್ತೆ ಬದಿಯ ಮರಬಿದ್ದು, ಅಗ್ನಿಶಾಮಕ ಠಾಣೆಯವರು ಮರವನ್ನು ತೆರವುಗೊಳಿಸಿದರು.    

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ಹೊರತುಪಡಿಸಿ ಉಳಿದ ಬಹುತೇಕ ಭಾಗಗಳಲ್ಲಿ ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಗಾಳಿಯ ಅಬ್ಬರ ಹೆಚ್ಚಾಗಿದ್ದು, ಜನಮಾನಸವನ್ನು ನಡುಗಿಸುತ್ತಿದೆ.

ನಗರದ ರಾಜಾಸೀಟ್ ಉದ್ಯಾನದ ಬೃಹತ್ ನಾಮಫಲಕ ಗಾಳಿಯಿಂದ ಹಾನಿಗೀಡಾಗಿದ್ದರೆ, ಸೋಮವಾರಪೇಟೆ ತಾಲ್ಲೂಕಿನ ಬೈಕ್‌ ಮೇಲೆ ಮರ ಉರುಳಿ ಸವಾರರೊಬ್ಬರು ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 46 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ 46 ವಿದ್ಯುತ್ ಕಂಬಗಳ ಪೈಕಿ ಅತಿ ಹೆಚ್ಚಿನ ವಿದ್ಯುತ್ ಕಂಬಗಳು (13) ಸೋಮವಾರಪೇಟೆ ತಾಲ್ಲೂಕಿನಲ್ಲೇ ಉರುಳಿವೆ.

‌ಬೀಸುತ್ತಿರುವ ಗಾಳಿಗೆ ಉರುಳುತ್ತಿರುವ ಮರಗಳು, ವಿದ್ಯುತ್ ಕಂಬಗಳಿಂದ ಜನಸಾಮಾನ್ಯರು ಭೀತರಾಗಿದ್ದಾರೆ. ಅದರಲ್ಲೂ ಮಡಿಕೇರಿ, ಸೋಮವಾರಪೇಟೆ ಭಾಗಗಳಲ್ಲಿ ಅತಿ ಹೆಚ್ಚಿನ ವೇಗದಲ್ಲಿ ಹಗಲಿರುಳೆನ್ನದೇ ಗಾಳಿ ಮೊರೆಗರಿಯುತ್ತಿದೆ.‌

ADVERTISEMENT

ಮಡಿಕೇರಿಯಲ್ಲಿ ಬಿರುಸಿನ ಮಳೆ ಸುರಿಯಲಿಲ್ಲ. ಆದರೆ ಆಗಾಗ್ಗೆ ಹಗುರವಾಗಿ ಮಳೆ ಸುರಿದು ವಾತಾವರಣದ ಉಷ್ಣಾಂಶವನ್ನು ಮತ್ತಷ್ಟು ಕುಗ್ಗಿಸಿತು.

ಹಾರಂಗಿಯ ಒಳ ಹರಿವು ಕುಸಿತ

ಮಳೆ ಕಡಿಮೆಯಾಗಿರುವುದರಿಂದ ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಸೋಮವಾರ ಬೆಳಿಗ್ಗೆ ಜಲಾಶಯಕ್ಕೆ 7,281 ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿತ್ತು. ಇದರ ಪ್ರಮಾಣ ಸಂಜೆ ಹೊತ್ತಿಗೆ 4,940ಕ್ಕೆ ಕಡಿಮೆಯಾಯಿತು.

ಮರ ಉರುಳಿ ಬಿದ್ದು ವ್ಯಕ್ತಿಗೆ ಗಾಯ

ಸೋಮವಾರಪೇಟೆ: ಇಲ್ಲಿಗೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿ ಶಶಿಕುಮಾರ್ ಎಂಬುವವರ ಬೈಕ್‌ ಮೇಲೆ ಮರ ಉರುಳಿದ್ದು, ಅವರು ಗಾಯಗೊಂಡಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಳಗುಂದ ಗ್ರಾಮದ ಶಶಿಕುಮಾರ್ ಭಾನುವಾರ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಸೋಮವಾರ ಬೆಳಿಗ್ಗೆ ತಮ್ಮ ಬೈಕ್‌ನಲ್ಲಿ ಮನೆಗೆ ತೆರುತ್ತಿದ್ದ ವೇಳೆ, ಕಾಫಿ ತೋಟದಲ್ಲಿದ್ದ ಸಿಲ್ವರ್ ಮರ ಭಾರೀ ಗಾಳಿಗೆ ಬೈಕ್ ಮೇಲೆ ಬಿದ್ದಿದೆ.

ಬೈಕ್ ಮುಂಭಾಗಕ್ಕೆ ಮರ ಬಿದ್ದಿದ್ದರಿಂದ ಶಶಿಕುಮಾರ್ ರಸ್ತೆಗೆ ಬಿದ್ದಿದ್ದು, ಎರಡೂ ಕಾಲಿಗೆ ಪೆಟ್ಟಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ತಲೆ ಭಾಗಕ್ಕೆ ಪೆಟ್ಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ ಸುರೇಶ್, ಸಿಬ್ಬಂದಿಯಾದ ಲಕ್ಷ್ಮೀಕುಮಾರ್, ಈಶ್ವರ್, ಚೇತನ್, ಮಂಜು ನಾಯಕ್, ಪ್ರವೀಣ್, ಪ್ರಶಾಂತ್ ಅವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಟ್ಟರು.

28ರಿಂದ ಹಾರಂಗಿಯಿಂದ ಕಾಲುವೆಗಳಿಗೆ ನೀರು ಜುಲೈ 28ರಿಂದ ಕಾಲುವೆಗಳಿಗೆ ನೀರು ಹರಿಸಲು ಬೆಂಗಳೂರಿನಲ್ಲಿ ಸೋಮವಾರ ನಡೆದ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯಿಸಿದೆ. ಸಚಿವ ಕೆ.ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ ಶಾಸಕ ಡಾ.ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜುಲೈ 28ರಿಂದ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಯಿತು ಎಂದು ಹಾರಂಗಿ ನೀರಾವರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಹುಣಸೂರು ಕೆ.ಆರ್.ನಗರ ಕ್ಷೇತ್ರದ ಶಾಸಕರು ಸಲಹಾ ಸಮಿತಿ ಸದಸ್ಯರು ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್‌ಗಳೂ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.