ADVERTISEMENT

ಕೊಡಗು: ಜಿಲ್ಲೆಯಲ್ಲಿ ನಿಯಂತ್ರಣದತ್ತ ಎಚ್‌ಐವಿ

ಕಳೆದರಡು ವರ್ಷಗಳಿಂದ ಸ್ಥಿರತೆಯಲ್ಲಿರುವ ಸೋಂಕಿತರ ಸಂಖ್ಯೆ, ಜಿಲ್ಲೆಯಲ್ಲಿದ್ದಾರೆ 1,112 ಎಚ್‌ಐವಿ ಸೋಂಕಿತರು

ಕೆ.ಎಸ್.ಗಿರೀಶ್
Published 1 ಡಿಸೆಂಬರ್ 2025, 6:49 IST
Last Updated 1 ಡಿಸೆಂಬರ್ 2025, 6:49 IST
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಇರುವ ಸೋಂಕಿತರ ಪೈಕಿ ಹೆಚ್ಚಿನವರು ಹೊರ ರಾಜ್ಯ ಮತ್ತು ಹೊರ ಜಿಲ್ಲೆಯವರೇ ಆಗಿದ್ದಾರೆ.

2022–23ರ ನಂತರ ಪ್ರತಿ ವರ್ಷವೂ ಸೋಂಕಿತರ ಪ್ರಮಾಣ ಇಳಿಕೆಯ ಹಾದಿಯಲ್ಲಿದ್ದು, ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಆದರೆ, ಕಳೆದರಡು ವರ್ಷಗಳಲ್ಲಿ ಪ್ರತಿ ವರ್ಷವೂ ಸೋಂಕಿತ ಗರ್ಭಿಣಿಯರ ಸಂಖ್ಯೆ ಎರಡು ಇದ್ದದ್ದು, ಈ ವರ್ಷ 7 ತಿಂಗಳಿನಲ್ಲಿ ಮೂವರು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ. ಆದಾಗ್ಯೂ ಪತ್ತೆಯಾದವರು ಹೊರಜಿಲ್ಲೆಗೆ ಸೇರಿದವರಾಗಿರುವುದರಿಂದ ಹಾಗೂ ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 1,112 ಮಂದಿ ಎಚ್‌ಐವಿ ಸೋಂಕಿತರ ಪೈಕಿ ಹೆಚ್ಚಿನವರು ಹೊರರಾಜ್ಯ ಮತ್ತು ಹೊರಜಿಲ್ಲೆಗೆ ಸೇರಿದವರಾಗಿರುವುದರಿಂದ ಜಿಲ್ಲೆಯಲ್ಲಿ ಎಚ್‌ಐವಿ ಪ್ರಸಾರ ನಿಯಂತ್ರಣದಲ್ಲಿದೆ ಎಂದೇ ಹೇಳಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯ ಎಲ್ಲ ಪದವಿ, ಎಂಜಿನಿಯರಿಂಗ್ ಸೇರಿದಂತೆ ಇತರೆ ಕಾಲೇಜುಗಳಲ್ಲಿ 20 ‘ರೆಡ್‌ರಿಬ್ಬನ್ ಕ್ಲಬ್‌’ಗಳಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರೌಢಶಾಲೆ ಮತ್ತು ಪಿಯು ಹಂತದಲ್ಲೇ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ, ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ADVERTISEMENT

ಈ ವರ್ಷ ‘ಕೆಎಆರ್‌ಎಸ್‌ಎಪಿಎಸ್’ ಎಂಬ ಹೆಸರಿನ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಎಚ್‌ಐವಿ ಕುರಿತ ಅರಿವು ಮೂಡಿಸುವ ಕಿರುಚಿತ್ರಗಳು ಹಾಗೂ ಮಾಹಿತಿಗಳನ್ನು ನಿರಂತರವಾಗಿ ಪ್ರಸಾರ ಮಾಡಲಾಗುತ್ತಿದೆ.

ಧ್ಯೇಯ 959595!: ಎಚ್‌ಐವಿ ವಿರುದ್ಧ ಆಂದೋಲನದ ಪ್ರಮುಖ ಗುರಿಯನ್ನು 959595 ಎಂದು ನಿಗದಿಪಡಿಸಲಾಗಿದೆ. ಎಚ್‌ಐವಿ ಸೋಂಕಿತರಲ್ಲಿ ಶೇ 95ರಷ್ಟು ಮಂದಿ ತಮ್ಮ ಸೋಂಕಿನ ಬಗ್ಗೆ ಗೊತ್ತಿರಬೇಕು, ಪತ್ತೆಯಾದ ಸೋಂಕಿತರಲ್ಲಿ ಶೇ 95ರಷ್ಟು ಎಎಆರ್‌ಟಿ ಚಿಕಿತ್ಸೆ ಪಡೆದುಕೊಳ್ಳಬೇಕು, ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ 95ರಷ್ಟು ವೈರಲ್ ಲೋಡ್ ಕಡಿಮೆಯಾಗಬೇಕು ಎಂಬುದು ಧ್ಯೇಯ ವಾಕ್ಯವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನೀತಾ ಮುತ್ತಣ್ಣ ಹೇಳುತ್ತಾರೆ.

ಡಾ.ಸನತ್‌ಕುಮಾರ್ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ.
ಸುನೀತಾ ಮುತ್ತಣ್ಣ

1097 ಉಚಿತ ಸಹಾಯವಾಣಿ ಜಿಲ್ಲೆಯಲ್ಲಿರುವ ಚಿಕಿತ್ಸೆ ಪಡೆಯುತ್ತಿರುವವರು 1,112 ಮಕ್ಕಳ ಸಂಖ್ಯೆ 65

ಎಚ್‌ಐವಿ ಸೋಂಕಿತರಿಗೆ ಕೊಡಗು ಜಿಲ್ಲೆಯಲ್ಲಿ ಉಚಿತ ಪರೀಕ್ಷೆ ಹಾಗೂ ಉಚಿತ ಚಿಕಿತ್ಸೆಯೂ ಲಭ್ಯವಿದೆ. ಇದರ ಸದುಪಯೋಗ ಪಡೆಯಿರಿ.
ಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ.
ಐಎಚ್‌ವಿ ಹೊಂದಿದವರಿಗೆ ನೀಡುವ ಚಿಕಿತ್ಸೆಯೂ ಸುಧಾರಿಸಿದೆ. ಇದರಿಂದ ಉತ್ತಮ ಜೀವನ ಸಾಗಿಸಲು ಸಾಧ್ಯವಿದೆ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕು
ಡಾ.ಜಿ.ಕೆ.ಸನತ್‌ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ.
ಐಎಚ್‌ವಿ ಹೊಂದಿದವರಿಗೆ ನೀಡುವ ಚಿಕಿತ್ಸೆಯೂ ಸುಧಾರಿಸಿದೆ. ಇದರಿಂದ ಉತ್ತಮ ಜೀವನ ಸಾಗಿಸಲು ಸಾಧ್ಯವಿದೆ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕು
ಡಾ.ಜಿ.ಕೆ.ಸನತ್‌ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ.
ಸೋಂಕಿತರ ಕುರಿತು ತಾರತಮ್ಯ ಬೇಡ. ಅವರು ಉತ್ತಮ ಜೀವನ ರೂಪಿಸಲು ಬೆಂಬಲ ನೀಡಿ. ಎಚ್‌ಐವಿ ತಡೆ ನಿಯಂತ್ರಣ ಎಲ್ಲರ ಜವಾಬ್ದಾರಿ ಕೂಪದಿರ ಸುನೀತಾ ಮುತ್ತಣ್ಣ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿಸೋಂಕಿತರ ಕುರಿತು ತಾರತಮ್ಯ ಬೇಡ. ಅವರು ಉತ್ತಮ ಜೀವನ ರೂಪಿಸಲು ಬೆಂಬಲ ನೀಡಿ. ಎಚ್‌ಐವಿ ತಡೆ ನಿಯಂತ್ರಣ ಎಲ್ಲರ ಜ
ವಾಬ್ದಾರಿ ಕೂಪದಿರ ಸುನೀತಾ ಮುತ್ತಣ್ಣ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ

ಎಆರ್‌ಟಿ ಚಿಕಿತ್ಸೆಯಿಂದ ನಿಯಂತ್ರಣ ಸಾಧ್ಯ

ಎಆರ್‌ಟಿ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆದುಕೊಳ್ಳುವ ಮೂಲಕ ಎಚ್‌ಐವಿ ಏಡ್ಸ್‌ ಅನ್ನು ನಿಯಂತ್ರಣದಲ್ಲಿಟ್ಟುಕೊಂಡು ಇತರರಂತೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ. ಈಗ ಆಧುನಿಕ ಚಿಕಿತ್ಸಾ ಕ್ರಮಗಳು ಬಂದಿರುವುದರಿಂದ ಸಾವಿನ ಪ್ರಮಾಣ ಹಿಂದಿನಷ್ಟು ಇಲ್ಲ. ಹಾಗಾಗಿ ಎಲ್ಲ ಎಚ್‌ಐವಿ ಸೋಂಕಿತರು ನಿಯಮಿತವಾಗಿ ಎಆರ್‌ಟಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಕೆ.ಸನತ್‌ಕುಮಾರ್ ಹೇಳುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಎಆರ್‌ಟಿ ಚಿಕಿತ್ಸಾ ಕೇಂದ್ರವಿದೆ. ಇಲ್ಲಿ ನೋಂದಣಿಯಾಗಿ ಚಿಕಿತ್ಸೆ ಪಡೆಯಬಹುದು. ಬೇರೆ ಯಾವುದೇ ಸೋಂಕಿಲ್ಲದವರು ಕುಶಾಲನಗರ ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸೋಮವಾರಪೇಟೆ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿರುವ ಉಪ ಎಆರ್‌ಟಿ ಕೇಂದ್ರಗಳಲ್ಲಿ ಔಷಧ ಪಡೆಯಬಹುದು.

ಇಂದು ಕಾರ್ಯಕ್ರಮ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಡಿ. 1ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಜಾಥಾ ನಡೆಯಲಿದೆ. ಜಾಥವು ಇಂದಿರಾಗಾಂಧಿ ವೃತ್ತ (ಚೌಕಿ) ವೃತ್ತದ ಮುಖಾಂತರ ಸರ್ಕಾರಿ ಪದವಿಪೂರ್ವ ಕಾಲೇಜಿನರೆಗೆ ತಲುಪುತ್ತದೆ. ನಂತರ ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮಾರಂಭ ನಡೆಯಲಿದೆ. ಹಾಸನ ಜಿಲ್ಲೆಯ ಕಲಾವಿದರಿಂದ ಎಚ್‌ಐವಿ ಏಡ್ಸ್‌ ಕುರಿತು ತೊಗಲುಗೊಂಬೆಯಾಟವೂ ಇರಲಿದೆ.

ಎಚ್‌ಐವಿ ಹರಡುವಿಕೆ ಹೇಗೆ

* ಅಸುರಕ್ಷಿತ ಲೈಂಗಿಕ ಸಂಪರ್ಕ

* ಅಸುರಕ್ಷಿತ ಸಲಿಂಗ ಲೈಂಗಿಕ ಸಂಪರ್ಕ

* ಸಂಸ್ಕರಿಸದ ಸೂಜಿ ಸಿರಿಂಜು ಶಸ್ತ್ರಕ್ರಿಯಾ ಸಾಧನಗಳನ್ನು ಬಳಸುವುದರಿಂದ

* ಸೋಂಕಿತರಿಂದ ರಕ್ತ ಹಾಗೂ ರಕ್ತದ ಉತ್ಪನ್ನಗಳನ್ನು ಪಡೆಯುವುದರಿಂದ

* ಎಚ್ಐವಿ ಸೋಂಕು ಇರುವ ತಾಯಿಯಿಂದ ಮಗುವಿಗೆ ಸೋಂಕು ಬರುವ ಸಾಧ್ಯತೆ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.