ಮಡಿಕೇರಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ನುಡಿನಮನ ಸಲ್ಲಿಸುವ ಮೂಲಕ ಅವರ ಜನ್ಮದಿನವನ್ನು ಇಲ್ಲಿ ಗುರುವಾರ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ, ಶಾಲಾ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆ, ನಗರಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಾನಪದ ಪರಿಷತ್ತಿನ ಸಹಕಾರದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ‘ಸತ್ಯ ಹಾಗೂ ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಬೆಳಕು ತೋರಿಸಿದ ಮಹಾನ್ ಚೇತನ. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರೂ ನಡೆದರು. ನೈತಿಕತೆಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಮಾದರಿಯಾಗಿದ್ದರು’ ಎಂದು ತಿಳಿಸಿದರು.
ಭಗವಾನ್ ಬುದ್ಧ ಅವರು ಇಡೀ ಮನುಕುಲಕ್ಕೆ ಸತ್ಯ ಹೇಳಿದರು, ಅದೇ ರೀತಿ ಗಾಂಧೀಜಿ ಅವರು ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ರಾಷ್ಟ್ರದ ಬಗ್ಗೆ ಇದ್ದ ಗೌರವ ಮತ್ತು ಭಕ್ತಿ ಮಾದರಿ ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್ ಮಾತನಾಡಿ, ‘ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂದೇಶ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಕೊಳ್ಳಬೇಕು’ ಎಂದರು.
ಪ್ರೇಮ ರಾಘವಯ್ಯ, ರೇವತಿ ರಮೇಶ್ ಹಾಗೂ ಸುಶೀಲಾ ಅವರು ನಾಡಗೀತೆ ಹಾಡಿದರು. ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಮಹಾತ್ಮ ಗಾಂಧೀಜಿ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಪೌರಾಯುಕ್ತ ರಮೇಶ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಸರ್ವೋದಯ ಸಮಿತಿ ಸದಸ್ಯರಾದ ಮುದ್ದಯ್ಯ, ಪ್ರೇಮ, ಸಿದ್ದರಾಜು ಬೆಳ್ಳಯ್ಯ, ಪಾರ್ವತಿ, ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ಕೃಷ್ಣಪ್ಪ, ಭಾಗವಹಿಸಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು
ಮಹಾತ್ಮ ಗಾಂಧಿಜಿ ಅವರ 156ನೇ ಜಯಂತಿ ಪ್ರಯುಕ್ತ ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಮೂರು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹ 3 ಸಾವಿರ ದ್ವಿತೀಯ ₹ 2 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ₹ 1 ಸಾವಿರ ನಗದು ಬಹುಮಾನ ನೀಡಲಾಯಿತು. ಪ್ರೌಢಶಾಲಾ ವಿಭಾಗ: ಹಾಕತ್ತೂರಿಮ ಸರ್ಕಾರಿ ಪ್ರೌಢಶಾಲೆ 9ನೇ ತರಗತಿಯ ಪಿ.ಎಸ್.ಯಶಸ್ವಿ (ಪ್ರ) ಸಂತ ಮೈಕಲರ ಪ್ರೌಢಶಾಲೆಯ 9ನೇ ತರಗತಿಯ ಕೆ.ಆರ್.ಲಿಪೀಕ್ಷಾ (ದ್ವಿ) ಸೋಮವಾರಪೇಟೆಯ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ 9ನೇ ತರಗತಿಯ ಡಿ.ಎಂ ಚರಿತ (ತೃ) ಪದವಿಪೂರ್ವ ವಿಭಾಗ: ಮೂರ್ನಾಡು ಪದವಿ ಪೂರ್ವ ಕಾಲೇಜಿ ಬಿ.ಆರ್.ನವ್ಯ (ಪ್ರ) ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎ.ಆರ್ ಮೋಕ್ಷಾ (ದ್ವಿ) ವಿರಾಜಪೇಟೆಯ ಲಯನ್ಸ್ ಪಿಯು ಕಾಲೇಜಿನ ಚಂದನ(ತೃ) ಪದವಿ ಸ್ನಾತಕೋತ್ತರ ಪದವಿ ವಿಭಾಗ: ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಸಿಎ ವಿಭಾಗದ ಯು.ಆರ್.ರಕ್ಷಿತ್ ಕುಮಾರ್ (ಪ್ರ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎಸ್.ಮಂಜುಳಾ (ದ್ವಿ) ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ. ಕೀರ್ತನ(ತೃ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.