ADVERTISEMENT

5 ರಂದು ನೆರೆ ಸಂತ್ರಸ್ತರ 13 ಮನೆ ಹಸ್ತಾಂತರ

ಕೊಡಗು ರಿಲೀಫ್ ಸೊಸೈಟಿಯ ಕೊಡುಗೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ಮನೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 12:46 IST
Last Updated 3 ನವೆಂಬರ್ 2019, 12:46 IST
ಸಂತ್ರಸ್ತರಿಗೆ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ನಿರ್ಮಿಸಿರುವ 8 ಮನೆ
ಸಂತ್ರಸ್ತರಿಗೆ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ನಿರ್ಮಿಸಿರುವ 8 ಮನೆ   

ಮಡಿಕೇರಿ:ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ನೆರೆ ಸಂತ್ರಸ್ತರ ಕುಟುಂಬಗಳಿಗೆ ನ.5 ರಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ 13 ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಮಹಾ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಾದ 8 ಕುಟುಂಬಗಳಿಗೆ ನಗರದ ಹೊರವಲಯ ತ್ಯಾಗರಾಜ ಕಾಲೋನಿಯ ಕಾರುಣ್ಯ ಮೊಹಲ್ಲಾದಲ್ಲಿ ₹30 ಲಕ್ಷ ವೆಚ್ಚದಲ್ಲಿ ನೂತನ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ಅದೇ ದಿನ ಸಂಜೆ 4ಕ್ಕೆ ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಸಂತ್ರಸ್ತರಾದ 5 ಕುಟುಂಬಗಳಿಗೂ ಸಿದ್ದಾಪುರದ ಎಂ.ಜಿ ರಸ್ತೆಯಲ್ಲಿರುವ ಮನೆಗಳನ್ನು ಹಸ್ತಾಂತರಿಸಲಾಗುವುದು, ಈ ಭಾಗದಲ್ಲಿಯೇ ಇನ್ನು ಹೆಚ್ಚಿನ ಮನೆ ನಿರ್ಮಾಣಕ್ಕೆ 2 ಎಕರೆ ಜಾಗನಿರಾಶ್ರಿತರಿಗೆಂದು ಮೀಸಲಿಡಲಾಗಿದೆ ಎಂದು ತಿಳಿಸಿದರು.

ADVERTISEMENT

ಈ ಮನೆಗಳಿಗೆ ಅಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮನೆ ಕೀಯನ್ನು ನಿರಾಶ್ರಿತರಿಗೆ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚರಂಜನ್‌, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸಾ, ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸ್ಥಾನೀಯ ಅಧ್ಯಕ್ಷ ಜಿ.ಎಚ್.ಮುಹಮ್ಮದ್ ಹನೀಫ್ ಮಾತನಾಡಿ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಜಮಾಅತೆ ಇಸ್ಲಾಮೀ ಹಿಂದ್‌ನ ಸಮಾಜಸೇವಾ ವಿಭಾಗವಾಗಿದ್ದು, ಕಳೆದ ಒಂದು ದಶಕಗಳಿಂದ ರಾಜ್ಯದ 8 ವಲಯಗಳಲ್ಲಿ ಸಮಾಜ ಸೇವಾ ಕೆಲಸ ನಿರ್ವಹಿಸುತ್ತಾ ಬಂದಿದೆ. 50ಕ್ಕೂ ಹೆಚ್ಚು ಗುಂಪುಗಳಲ್ಲಿ 500 ಕ್ಕಿಂತಲೂ ಹೆಚ್ಚು ಕಾರ್ಯಕರ್ತರನ್ನು ಸೊಸೈಟಿ ಹೊಂದಿದೆ ಎಂದು ತಿಳಿಸಿದರು.

ಮಹಾ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಸಂತ್ರಸ್ತರಾದ ಹಾಗೂ ಸರ್ಕಾರದ ಪಟ್ಟಿಯಲ್ಲಿಯೂ ಹೆಸರಿಲ್ಲದ ಅರ್ಹ ಕುಟುಂಬಗಳನ್ನು ಗುರುತಿಸಿ ಮನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚು ನಷ್ಟವಾಗಿದೆ. ಆದ್ದರಿಂದ ದಾನಿಗಳು, ಸಂಘ ಸಂಸ್ಥೆಗಳು ಸರ್ಕಾರದ ಜತೆಗೆ ನೆರವಾಗಬೇಕಿದೆ ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹೆಮಾನ್, ಸಾರ್ವಜನಿಕ ಸಂಪರ್ಕ ವಿಭಾಗದ ಸಂಚಾಲಕ ಸಿ.ಎಚ್.ಅಫ್ಸರ್ ಮಡಿಕೇರಿ, ತಣಲ್ ಆಶ್ರಯ ಕೇಂದ್ರದ ವ್ಯವಸ್ಥಾಪಕ ಮುಹಮ್ಮದ್ ಮುಸ್ತಫಾ, ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.