ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಬಳಿಯ ಬಿಳೂರು ಗ್ರಾಮದ ಕಾಂಡೆರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ 31ನೇ ವರ್ಷದ ಸಂಭ್ರಮ
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ತನ್ನ 31ನೇ ವರ್ಷದ ಸಂಭ್ರಮದ ಸಾರ್ವತ್ರಿಕ ಕೊಡವ ಜನಪದಿಯ ‘ಪುತ್ತರಿ ನಮ್ಮೆ’ಯನ್ನು ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಬಳಿಯ ಬಿಳೂರು ಗ್ರಾಮದ ಕಾಂಡೆರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಶನಿವಾರ ಆಚರಿಸಲಾಯಿತು.
ರೋಹಿಣಿ ನಕ್ಷತ್ರದ ಆರಂಭಿಕ ಗಳಿಗೆಯ ಹುಣ್ಣಿಮೆಯ ದಿನ ಭತ್ತದ ಕದಿರು ತೆಗೆಯುವ ಮೂಲಕ ಆಚರಣೆಗೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ದುಡಿಕೊಟ್ಟ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ಗಾಳಿಯಲ್ಲಿ ಗುಂಡುಹಾರಿಸಲಾಯಿತು. ಕೊಡವ ಆಟ್-ಪಾಟ್ ನಡೆಯಿತು. ಅಂತಿಮವಾಗಿ ಮಾನವ ಸರಪಳಿ ಮೂಲಕ ಕೊಡವ ಲ್ಯಾಂಡ್, ವಿಶ್ವ ರಾಷ್ಟ್ರ ಸಂಸ್ಥೆಯ ಘೋಷಣೆಯ ಪ್ರಕಾರ ಅತ್ಯಂತ ಸಣ್ಣ ಪ್ರಾಚೀನ ಬುಡಕಟ್ಟಾದ ಕೊಡವರಿಗೆ ಅಂತರರಾಷ್ಟ್ರೀಯ ಕಾನೂನಡಿಯಲ್ಲಿ ಭದ್ರತೆ ಮತ್ತು ರಾಜ್ಯಾಂಗ ಖಾತರಿಗಾಗಿ ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಸಂವಿಧಾನ ಮತ್ತು ಗುರು-ಕಾರ್ಣವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಲಾಯಿತು. ರಾಷ್ಟ್ರಗೀತೆಯ ನಂತರ ಕೊಡವ ಸಾಂಪ್ರದಾಯಿಕ ಭಕ್ಷ್ಯ ಸ್ವೀಕರಿಸಿ, ಆಚರಣೆಯನ್ನು ಸಂಪನ್ನಗೊಳಿಸಲಾಯಿತು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಈ ವೇಳೆ ಮಾತನಾಡಿ, ‘ನಮಗೆ ಯಾವುದೇ ಧಾರ್ಮಿಕ ಕ್ರಿಯೆಗೆ ಏಜೆಂಟ್‌ರ ಅಗತ್ಯವಿಲ್ಲ’ ಎಂದು ಹೇಳಿದರು.
‘ಕೊಡವರು ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಸರ್ವಶಕ್ತ ಮತ್ತು ದೈವಿಕತೆಯೊಂದಿಗೆ ಮಾತನಾಡುತ್ತಾರೆ. ಕೊಡವರು ನಾವೇ ನಮ್ಮ ಜನಪದ ಆಚರಣೆಗಳನ್ನು ನಿರ್ಧರಿಸುತ್ತೇವೆ’ ಎಂದು ಪ್ರತಿಪಾದಿಸಿದರು.
ಆದಿಮಸಂಜಾತ ಕೊಡವರ ಎಲ್ಲಾ ಜನಾಂಗೀಯ ಹಬ್ಬಗಳು ಮಾತೃಭೂಮಿ, ಪ್ರಕೃತಿ ದೇವಿ, ದೈವಿಕ ಜಲದೇವಿ ಕಾವೇರಿ, ಯೋಧ ಪರಂಪರೆ ಬೇಟೆಯ ಕೌಶಲ, ಜನಾಂಗೀಯ ಧಾರ್ಮಿಕ ಸಂಸ್ಕಾರ, ಗನ್, ಆಯುಧ ಮತ್ತು ಕೃಷಿ ಪ್ರವೃತ್ತಿಗಳ ಸುತ್ತವೇ ಸುತ್ತುತ್ತವೆ ಎಂದರು.
‘ಕೊಡವ ಹಬ್ಬಗಳನ್ನು ನಿರ್ಧರಿಸುವಾಗ ಕೊಡವ ಸಂಸ್ಕೃತಿಯಲ್ಲಿ ಮೂಢನಂಬಿಕೆಗೆ ಅವಕಾಶವಿಲ್ಲ. ನಮ್ಮ ಪೂಜ್ಯ ಪೂರ್ವಜರು (ಕಾರ್ಣವರು) ಕುಲ ಪಿತಾಮಹರು ರೂಪಿಸಿದ ಈಗಾಗಲೇ ಅಲಿಖಿತ ಮೌಖಿಕ ಕೊಡವ ಜಾನಪದ - ಕಾನೂನು ವ್ಯವಸ್ಥೆಗಳು ಮತ್ತು ನಮ್ಮ ಆಚರಣೆಗಳನ್ನು ಬಹಳ ಹಿಂದೆಯೇ ರೂಪಿಸಿದ್ದಾರೆ. ಇದು ಪೀಳಿಗೆಯಿಂದ ಇಂದಿನವರೆಗೆ ನಮಗೆ ಬಂದಿದೆ. ಅದರಂತೆ ನಮ್ಮ ಹಿರಿಯರು ಹುಣ್ಣಿಮೆಯ ಚಕ್ರದಂತೆ ಹಬ್ಬಗಳನ್ನು ನಿರ್ಧರಿಸುತ್ತಾರೆ’ ಎಂದು ಹೇಳಿದರು.
ಕಾಂಡೇರ ರಮ್ಮಿ ಉತ್ತಪ್ಪ, ಕುಮಾರಿ ಕಾಂಡೇರ ಜೀನ ಉತ್ತಪ್ಪ, ಸರ್ವ ಶ್ರೀ ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಅರೆಯಡ ಸಾವನ್, ಕಾಂಡೇರ ಜಿಮ್ಮಿ ಉತ್ತಪ್ಪ, ಕಿರಿಯಮಾಡ ಶಾನ್, ಕಾಂಡೇರ ಸಾಂಚನ್, ನಂದೇಟಿರ ರವಿ ಸುಬ್ಬಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.