ಮಡಿಕೇರಿ: ಸಾಂವಿಧಾನಿಕ ಹಕ್ಕು ಪಡೆಯಲು ರಾಷ್ಟ್ರೀಯ ಜನಗಣತಿಯ ವೇಳೆ ಕೊಡವರ ಪ್ರತ್ಯೇಕ ಅಸ್ಮಿತೆ ದಾಖಲೀಕರಣವಾಗುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಹಾಗಾಗಿ, ಕೊಡವರೆಲ್ಲರೂ ರಾಷ್ಟ್ರೀಯ ಜನಗಣತಿಯಲ್ಲಿನ ಎಲ್ಲ ಮೂರೂ ಕಾಲಂಗಳಲ್ಲೂ ‘ಕೊಡವ’ ಎಂದೇ ನಮೂದಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ ಶನಿವಾರ ನಡೆದ 15ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೊಡವರು ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಆದಿಮಸಂಜಾತ, ಇಂಡಿಜಿನಸ್, ಆ್ಯನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಗುಂಪು. 1871–72ರಿಂದ 1931ರವರೆಗೆ ನಡೆದ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ ಅಥವಾ ಮೂಲವಂಶಸ್ಥರು (ರೇಸ್) ಎಂದು ದಾಖಲಿಸುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿರುವ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು’ ಎಂದು ಹೇಳಿದರು.
ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ ‘ಸಂಘ’ ಮತಕ್ಷೇತ್ರದಂತೆ ಕೊಡವರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ, ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ‘ಕೊಡವರು’ ಎಂದೇ ದಾಖಲೀಕರಣವಾಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬುಡಕಟ್ಟು ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ, ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ ಹಾಗೂ ಚೆಟ್ಟಳ್ಳಿಯಲ್ಲಿ ಮಾನವ ಸರಪಳಿ ರಚಿಸಿ ಜನಜಾಗೃತಿ ಮೂಡಿಸಲಾಗಿದೆ. ಮುಂದಿನ ಮಾನವ ಸರಪಳಿ ಅ.21ರಂದು ಅಮ್ಮತ್ತಿಯಲ್ಲಿ ನಡೆಯಲಿದೆ ಎಂದರು.
ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗಂಡ ಸುಮಿ ಅಪ್ಪಯ್ಯ, ಚೋಳಪಂಡ ತಾಜ ಕಾಳಯ್ಯ, ಪಳಂಗಂಡ ಗೀತಾ ಸುಬ್ರಮಣಿ, ಮುಳ್ಳಂಡ ಮಾಯಮ್ಮ, ಬಲ್ಲಾರಂಡ ಸ್ವಾತಿ ನಾಣಯ್ಯ, ಪುತ್ತರಿರ ಕರುಣ್ ಕಾಳಯ್ಯ, ಬಟ್ಟೀರ ವೇಣು ನಾಚಪ್ಪ, ಪುತ್ತರಿರ ಗಣೇಶ್ ಭೀಮಯ್ಯ, ಬಲ್ಲಾರಂಡ ಮೋಟಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.