ADVERTISEMENT

ಅಕ್ರಮ ವಲಸಿಗರು ಕೊಡಗಿಗೆ ಕಂಟಕ: ಬಿಜೆಪಿ ಒತ್ತಾಯ

ಎಲ್ಲ ಅಸ್ಸಾಂ ಕಾರ್ಮಿಕರ ದಾಖಲಾತಿ ಪರಿಶೀಲನೆಗೆ ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:52 IST
Last Updated 30 ಜುಲೈ 2025, 5:52 IST
ರವಿ ಕಾಳಪ್ಪ
ರವಿ ಕಾಳಪ್ಪ   

ಮಡಿಕೇರಿ: ‘ಬಾಂಗ್ಲಾದೇಶದಿಂದ ಜಿಲ್ಲೆಗೆ ಬಂದಿರುವ ಅಕ್ರಮ ವಲಸಿಗರು ಮುಂದೊಂದು ದಿನ ಕೊಡಗಿಗೆ ಕಂಟಕರಾಗಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕ ಎಚ್ಚರಿಸಿದೆ.

‘ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಜಿಲ್ಲೆಯಲ್ಲಿರುವ ಶಂಕೆ ಮೂಡಿದೆ. ಹಾಗಾಗಿ, ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಬಿಜೆಪಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿಯವರು ಹಾಗೂ ಪೊಲೀಸರು ಈ ಕೂಡಲೇ ಜಿಲ್ಲೆಯಲ್ಲಿರುವ ಎಲ್ಲ ಅಸ್ಸಾಂ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಬೇಕು. ಒಂದು ವೇಳೆ ನಕಲಿ ಎಂಬುದು ಗೊತ್ತಾದ ಕೂಡಲೇ, ಅವರು ಬಾಂಗ್ಲಾ ದೇಶದವರು ಎಂದು ತಿಳಿದ ಕೂಡಲೇ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈಗಾಗಲೇ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ಈಗ ವಲಸಿಗರು ಕೊಡಗಿನ ಸಂತೆ ಮಾರುಕಟ್ಟೆಗಳಲ್ಲಿ ಸಹ ಗುಂಪು ಕಟ್ಟಿಕೊಂಡು ವ್ಯಾಪಾರ ಮಾಡುತ್ತಾ ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡು ವಾತಾವರಣ ಹಾಳು ಮಾಡುತ್ತಿದ್ದಾರೆ. ಪೊಲೀಸರು ಇದರತ್ತ ಗಮನ ಹರಿಸಬೇಕು’ ಎಂದರು.

‘ಪ್ರವಾಸೋದ್ಯಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಭಾಗಮಂಡಲ ಮತ್ತು ತಲಕಾವೇರಿಯಂತಹ ಪುಣ್ಯ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವುದು ಸರಿಯಲ್ಲ’ ಎಂದು ಖಂಡಿಸಿದ ಅವರು, ‘ಈ ಕೂಡಲೇ ಈ ಎರಡೂ ಕ್ಷೇತ್ರಗಳನ್ನೂ ಧಾರ್ಮಿಕ ಸ್ಥಳವನ್ನಾಗಿಯೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ನಿರ್ಮಾಣ ಮಾಡುವ ಕುರಿತ ಟೆಂಡರ್ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ನೀಡದೇ ಇರುವುದು ಸಂಶಯಕ್ಕೆ ಎಡೆ ಮಾಡಿದೆ. ಆಡಳಿತ ಪಕ್ಷದ ಕೆಲವರು ಇದರ ಹಿಂದಿರುವ ಗುಮಾನಿ ಇದೆ. ಇದರ ಅನುಷ್ಠಾನಕ್ಕೆ ಮುಂದಾದರೆ ಬಿಜೆಪಿ ಉಗ್ರ ಪ್ರತಿಭಟನೆ ಮಾಡಲಿದೆ’ ಎಂದು ಎಚ್ಚರಿಕೆ ನೀಡಿದರು.‌

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವು ಪ್ರತಿ 5 ವರ್ಷಕ್ಕೊಮ್ಮೆ ಸಿಡಿಪಿ ಪ್ಲಾನ್ ಮಾಡಬೇಕಿತ್ತು. ಆದರೆ ಮಾಡಿಲ್ಲ. ಕೂಡಲೇ ಮುಡಾ ಅಧೀನಕ್ಕೆ ಒಳಪಡುವ ಅಕ್ಕಪಕ್ಕದ ಗ್ರಾಮಗಳಲ್ಲಿ ಯಾವ ಜಾಗ ಈಗಾಗಲೇ ‘ಎಲ್ಲೊ’ ವಲಯ ಆಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಒಂದು ಎಕರೆ ಭೂಪರಿವರ್ತನೆಗೆ ಸರ್ಕಾರದ ಅಧಿಕೃತ ಶುಲ್ಕ ಎಷ್ಟು ಎಂಬುದನ್ನು ಹಾಗೂ ಎಷ್ಟು ಸಮಯದಲ್ಲಿ ಪ‍ರಿವರ್ತನೆ ಮಾಡಿಕೊಡಲಾಗುತ್ತದೆ ಎಂಬುದನ್ನು ‘ಮುಡಾ’ ಅಧ್ಯಕ್ಷರು ಹಾಗೂ ಸರ್ಕಾರ ಜನರಿಗೆ ತಿಳಿಸಬೇಕು. ಪ್ರಾಧಿಕಾರವು ಸರ್ವಾಂಗೀಣ ಅಭಿವೃದ್ಧಿಗಾಗಿ ‘ಸಿಡಿಪಿ ಪ್ಲಾನ್‌’ ಅನ್ನು ಪರಿಷ್ಕರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಉಮೇಶ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕಿಲನ್, ವಕ್ತಾರ ಬಿ.ಕೆ.ಅರುಣ್‌ಕುಮಾರ್ ಭಾಗವಹಿಸಿದ್ದರು.

ಮಹೇಶ್‌ ಜೈನಿ
ಮಡಿಕೇರಿ– ಭಾಗಮಂಡಲ ರಸ್ತೆಯಲ್ಲಿ ಸಂಚರಿಸಿದರೆ ಸಾಕು ಕೊಡಗು ಜಿಲ್ಲೆಯ ಅಭಿವೃದ್ಧಿ ಹೇಗಿದೆ ಎಂಬುದು ಗೊತ್ತಾಗುತ್ತದೆ.
ತಳೂರು ಕಿಶೋರ್‌ಕುಮಾರ್ ಬಿಜೆಪಿ ಜಿಲ್ಲಾ ಘಟಕದ ವಕ್ತಾರ.

‘ಗಾಜಿನ ಸೇತುವೆ ನಗರಸಭೆ ಗಮನಕ್ಕೆ ಬಂದಿಲ್ಲ’

ಮಡಿಕೇರಿ ನಗರಸಭೆ ಗಮನಕ್ಕೆ ತಾರದೇ ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ನಿರ್ಮಾಣ ಮಾಡಲಾಗುತ್ತಿದೆ. ಈ ವಿಷಯವನ್ನು ನಗರಸಭೆಯ ಸಾಮಾನ್ಯಸಭೆಯಲ್ಲಿಟ್ಟು ಚರ್ಚೆ ನಡೆಸಲಾಗುವುದು ಎಂದು ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಹೇಳಿದರು. ಒಂದು ವೇಳೆ ಅಲ್ಲಿ ಗಾಜಿನ ಸೇತುವೆ ನಿರ್ಮಾಣವಾದರೆ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗುವುದಿಲ್ಲ. ಇನ್ನಾದರೂ ಇಲ್ಲಿನ ಪರಿಸರವಾದಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.