ADVERTISEMENT

ತೀರ್ಥೋದ್ಭವ ಕಳೆದರೂ ತೀರದ ಸಂಭ್ರಮ!

ಬಲಮುರಿಯಲ್ಲಿ ಇಂದು ಜಾತ್ರೆ

ಸಿ.ಎಸ್.ಸುರೇಶ್
Published 18 ಅಕ್ಟೋಬರ್ 2022, 7:57 IST
Last Updated 18 ಅಕ್ಟೋಬರ್ 2022, 7:57 IST
ನಾಪೋಕ್ಲು ಸಮೀಪದ ಬಲಮುರಿಯ ಅಗಸ್ತ್ಯೇಶ್ವರ ದೇವಾಲಯ
ನಾಪೋಕ್ಲು ಸಮೀಪದ ಬಲಮುರಿಯ ಅಗಸ್ತ್ಯೇಶ್ವರ ದೇವಾಲಯ   

ನಾಪೋಕ್ಲು: ಸೋಮವಾರ ಸಂಜೆ ಮೇಷ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದು ಅಸಂಖ್ಯಾತ ಭಕ್ತರು ತೀರ್ಥಸ್ನಾನ ಮಾಡಿ ಸಂಭ್ರಮಿಸಿದರೆ ಕ್ಷೇತ್ರಗಳಲ್ಲಿ ಒಂದು ತಿಂಗಳ ಕಾಲ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಭಕ್ತರು ಕ್ಷೇತ್ರಗಳಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಿದ್ದಾರೆ. ಪಿಂಡ ಪ್ರಧಾನ ಮತ್ತಿತರ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ತೀರ್ಥೋದ್ಭವ ಮುಗಿದರೂ ಭಕ್ತರ ಸಂಭ್ರಮ ನಿಲ್ಲುವುದಿಲ್ಲ.

ಜಿಲ್ಲೆಯಲ್ಲಿ ದಸರಾ ಮತ್ತು ಕಾವೇರಿ ಸಂಕ್ರಮಣ ವಿಶೇಷ ಉತ್ಸವಗಳು. ದಸರಾ ಸಂಭ್ರಮ ಒಂದು ದಿನಕ್ಕೆ ಮೀಸಲಾದರೆ ಕಾವೇರಿ ಜಾತ್ರೆ ತುಲಾ ಸಂಕ್ರಮಣದಿಂದ ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಜರುಗುತ್ತದೆ. ತಲಕಾವೇರಿಯಲ್ಲಿ ತೀರ್ಥೊದ್ಭವ ಜರುಗಿದ ಮರುದಿನ ಮೂರ್ನಾಡು ಸಮೀಪದ ಬಲಮುರಿ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗುತ್ತಾರೆ.

ಜಾತ್ರೆಯ ಅಂಗವಾಗಿ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಅಕ್ಷಯಪಾತ್ರೆ ಇರಿಸಿ ನಂದಾದೀಪವನ್ನು ಉರಿಸಲಾಗಿದ್ದು. ನಂದಾದೀಪವು ಒಂದು ತಿಂಗಳ ಕಾಲ ತುಪ್ಪದಲ್ಲಿ ಉರಿಯಲಿದೆ. ಭಕ್ತರು ಬೆಳೆದ ಅಕ್ಕಿಯನ್ನು ಅಕ್ಷಯಪಾತ್ರೆಗೆ ಸುರಿಯಲಾಗಿದ್ದು ಪಡಿಯಕ್ಕಿ ರೂಪದಲ್ಲಿ ಪ್ರಸಾದವಾಗಿ ಒಂದು ತಿಂಗಳಕಾಲ ಭಕ್ತರಿಗೆ ವಿತರಿಸಲಾಗುತ್ತದೆ.

ADVERTISEMENT

ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 26ನೇ ವರ್ಷದ ಕಾವೇರಿ ರಥಯಾತ್ರೆ ಮಂಗಳವಾರ ಭಾಗಮಂಡಲದಿಂದ ಆರಂಭಗೊಳ್ಳಲಿದ್ದು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಪೇರೂರು ಬಲ್ಲಮಾವಟಿ, ಚೋನಕೆರೆ, ನಾಪೋಕ್ಲು ಊರುಗಳಲ್ಲಿ ಭಕ್ತರಿಗೆ ಕಾವೇರಿ ತೀರ್ಥ ವಿತರಣೆ ಮಾಡಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ತಿಳಿಸಿದರು.

18ರಂದು ಬಲಮುರಿ ಜಾತ್ರೆ: ಕಾವೇರಿ ತೀರದ ಪವಿತ್ರ ಯಾತ್ರಾಸ್ಥಳವಾದ ಬಲಮುರಿಯಲ್ಲಿ ಕಾವೇರಿ ಜಾತ್ರೆ ಮಂಗಳವಾರ ಸಂಭ್ರಮದಿಂದ ಜರುಗಲಿದ್ದು ಅಗತ್ಯ ಸಿದ್ಧತೆ ಮಾಡಲಾಗಿದೆ. ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಲಿದೆ. ಉತ್ಸವಕ್ಕೆ ಬರುವ ಭಕ್ತರಿಗೆ ಗ್ರಾಮದ ದಾನಿಗಳಿಂದ ಅನ್ನಸಂತರ್ಪಣೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಾತ್ರೆಯ ದಿನದಂದು ರುದ್ರಾಭಿಷೇಕ, ಮಹಾಪೂಜೆಗಳು ಜರುಗಲಿವೆ ಎಂದು ದೇವಾಲಯದ ಅರ್ಚಕ ಮಹಾಬಲೇಶ್ವರ ಭಟ್ ತಿಳಿಸಿದರು.

ಅಗಸ್ಥ್ಯೇಶ್ವರ ದೇವಾಲಯ ಹಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದು ತುರ್ತು ಅಭಿವೃದ್ಧಿ ಕಾಣಬೇಕಾದ ಅಗತ್ಯವಿದೆ ಎನ್ನುತ್ತಾರೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ.

ಪ್ರತಿವರ್ಷ ಬಲಮುರಿ ಸಹಸ್ರಾರು ಮಂದಿ ಭಕ್ತರು ಬರುತ್ತಾರೆ. ಸೂಕ್ತ ವ್ಯವಸ್ಥೆಗಳಿಲ್ಲ. ಪಿಂಡ ಪ್ರದಾನ ಮಾಡುವ ಸ್ಥಳದಲ್ಲಿ ಮೆಟ್ಟಿಲುಗಳ ನಿರ್ಮಿಸುವ ಅವಶ್ಯಕತೆ ಇದೆ. ದೇವಸ್ಥಾನಕ್ಕೆ ತೆರಳಲು ಮಾರ್ಗಸೂಚಿಗಳಿಲ್ಲ. ಭಕ್ತರು ಸುತ್ತುಬಳಸಿ ದೇವಾಲಯ ತಲುಪಬೇಕಿದೆ. ಮಡಿಕೇರಿಯಿಂದ 18 ಕಿ.ಮೀ. ದೂರದಲ್ಲಿರುವ ಬಲಮುರಿ ಕೊಡಗಿನ ಪುಣ್ಯಸ್ಥಳವಾಗಿದ್ದು ತುರ್ತು ಅಭಿವೃದ್ದಿ ಪಡಿಸಬೇಕಾದ ಅಗತ್ಯವಿದೆ ಎಂದರು.

ಹಿಂದೆ ವಲಂಪುರಿ-ಈಗ ಬಲಮುರಿ: ಪುರಾಣದ ಪ್ರಕಾರ ಕಾವೇರಿ ಮಾತೆಯು ತಾನು ಹರಿದು ಇಲ್ಲಿಗೆ ಬರುವುದಾಗಿ ದೇವಕಾಂತ ಮಹಾರಾಜನಿಗೆ ಸೂಚನೆ ನೀಡಿದ್ದಳು. ತನ್ನ ಮಾತಿನಂತೆ ಕಾವೇರಿ ನದಿಯಾಗಿ ವಲಂಪುರಿಗೆ ಹರಿದು ಬರುವಾಗ ರಭಸದ ಪ್ರವಾಹ ಏರ್ಪಟ್ಟಿತು.ಕಾವೇರಿಯನ್ನು ತಡೆಯಲು ಬಂದ ಮಹಿಳೆಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ಗಂಟು ಹಾಕಿ ಮಹಿಳೆಯರು ಉಟ್ಟುಕೊಂಡಿದ್ದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮುನಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠೆ ಮಾಡಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.