ADVERTISEMENT

ದಸರೆಯಲ್ಲಿ ಸಂಭ್ರಮಿಸಿದ ಮಹಿಳೆಯರು

ಮಡಿಕೇರಿಯಲ್ಲಿ ಮಹಿಳಾ ದಸರೆ, ಜನಸಾಮಾನ್ಯರಿಂದ ಬಾರದ ಹೆಚ್ಚಿನ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 5:02 IST
Last Updated 1 ಅಕ್ಟೋಬರ್ 2022, 5:02 IST
ಮಡಿಕೇರಿಯಲ್ಲಿ ಶುಕ್ರವಾರ ನಡೆದ ಮಹಿಳಾ ದಸರೆಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಪತ್ನಿ ರೂಪಶ್ರೀ ಸತೀಶ ಉದ್ಘಾಟಿಸಿದರು. ಅನಿತಾ ಪೂವಯ್ಯ, ವೀಣಾ ಅಚ್ಚಯ್ಯ, ಸವಿತಾ ರಾಕೇಶ್ ಇದ್ದಾರೆ
ಮಡಿಕೇರಿಯಲ್ಲಿ ಶುಕ್ರವಾರ ನಡೆದ ಮಹಿಳಾ ದಸರೆಯನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಪತ್ನಿ ರೂಪಶ್ರೀ ಸತೀಶ ಉದ್ಘಾಟಿಸಿದರು. ಅನಿತಾ ಪೂವಯ್ಯ, ವೀಣಾ ಅಚ್ಚಯ್ಯ, ಸವಿತಾ ರಾಕೇಶ್ ಇದ್ದಾರೆ   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಕಲಾಸಂಭ್ರಮ ವೇದಿಕೆಯಲ್ಲಿ ನಡೆಯುತ್ತಿರುವ ದಸರೆಯಲ್ಲಿ ಶುಕ್ರವಾರ ಮಹಿಳಾ ಕಲರವ ಎಲ್ಲೆಡೆ ಕೇಳಿ ಬಂತು. ದಿನವಿಡೀ ನೂರಾರು ಮಹಿಳೆಯರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸಾಧಕ ಮಹಿಳೆಯರನ್ನು ಗೌರವಿಸಲಾಯಿತು. ಹಲವು ಬಗೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸ್ಪರ್ಧಾಸ್ಪೂರ್ತಿ ಮೆರೆದರು.

ಬಲೂನ್ ಶೂಟ್, ಮದರಂಗಿ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಮಹಿಳೆಯರು ತಯಾರಿಸಿದ ಗೃಹ ಬಳಕೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ, ಮಹಿಳಾ ಸಂತೆ, ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಮಹಿಳೆಯರು ವಯಸ್ಸಿನ ಭೇದವಿಲ್ಲದೆ ಭಾಗವಹಿಸಿದ್ದು, ಮಹಿಳಾ ದಸರೆಯ ವಿಶೇಷ ಎನಿಸಿತ್ತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಪತ್ನಿ ರೂಪಶ್ರೀ ಸತೀಶ್ ಅವರು ಚಾಲನೆ ನೀಡಿದ್ದು ವಿಶೇಷವಾಗಿತ್ತು.

ADVERTISEMENT

ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ವರ್ಷಗಳ ಹಿಂದೆ ಜಿಲ್ಲೆಯ 3 ಉನ್ನತ ಸ್ಥಾನಗಳನ್ನು ಮಹಿಳೆಯರು ಅಲಂಕರಿಸಿದ್ದರು. ಇದು ಮಹಿಳೆಯರಿಗೆ ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ’ ಎಂದು ಹೇಳಿದರು.

ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು. ಈ ಬಾರಿಯ ಮಡಿಕೇರಿ ದಸರಾ ಮೈಸೂರು ದಸರಾ ಮಾದರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಮಹಿಳೆಯರು ಯಾರಿಗೂ ಕೂಡ ಕಮ್ಮಿ ಇಲ್ಲ. ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ ನೀಡುವಂತಾಗಬೇಕು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಕೂಡ ತಮ್ಮನ್ನು ಗುರುತಿಸಿಕೊಳ್ಳುವುದರ ಜೊತೆಗೆ ಕೊಡಗನ್ನು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿಸುವತ್ತ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.

ರೂಪಶ್ರೀ ಸತೀಶ್ ಮಾತನಾಡಿ, ‘ಮೈಸೂರು ಮತ್ತು ಮಡಿಕೇರಿ ದಸರಾ ಒಂದೊಂದು ವಿಶೇಷತೆಗಳಿಂದ ಕೂಡಿದೆ. ಮಡಿಕೇರಿ ದಸರಾ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ’ ಎಂದರು.

ನಗರಸಭೆಯ ನಿವೃತ್ತ ಪೌರಾಯುಕ್ತರಾದ ಬಿ.ಬಿ.ಪುಷ್ಪಾವತಿ ಮಾತನಾಡಿ, ‘ನವರಾತ್ರಿ ಉತ್ಸವವೇ ಮಹಿಳಾ ಪ್ರಧಾನ ಆಚರಣೆ. ಈ ಆಚರಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ’ ಎಂದರು.

ಮುಂದಿನ ದಿನಗಳಲ್ಲಿ ದಸರಾಕ್ಕೆ ಅನುದಾನ ರೂಪಿಸುವಾಗ ಮಹಿಳಾ ದಸರಾಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಕರೆಸಬೇಕು. ಇದರಿಂದ ಅವರ ಅನುಭವಗಳು ಅವರು ಮಾಡಿದ ಸಾದನೆ ಇನ್ನಿತರ ಮಹಿಳೆಯರಿಗೆ ಸ್ಪೂರ್ತಿದಾಯಕವಾಗುತ್ತದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಕೆಂಚೆಟ್ಟಿರ ರೇಷ್ಮಾದೇವಯ್ಯ (ಕ್ರೀಡಾ ಕ್ಷೇತ್ರ), ಲಕ್ಷ್ಮಿ (ಪೌರಕಾರ್ಮಿಕರು), ಶೋಭಾ ಮುತ್ತಪ್ಪ (ಕ್ರೀಡಾ ಕ್ಷೇತ್ರ), ನಿರ್ಮಲಾ (ಅಂಗನವಾಡಿ ಕಾರ್ಯಕರ್ತೆ), ಎಂ.ಪಿ.ಕನಿಕೆ (ಆಶಾ ಕಾರ್ಯಕರ್ತೆ) ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಕೊಡವ ಸಮಾಜದ ನಿರ್ದೇಶಕಿ ಕನ್ನಂಡ ಕವಿತಾ, ನಗರಸಭೆಯ ನಿಕಟಪೂರ್ವ ಸದಸ್ಯರಾದ ಮೋಂತಿ ಗಣೇಶ್, ನಗರಾಭಿವೃದ್ಧಿ ಪ್ರಾಧಿಕಾರದ ನಿಕಟ‍ಪೂರ್ವ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಗರಸಭೆಯ ವ್ಯವಸ್ಥಾಪಕಿ ಸುಜಾತಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಯನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.