ADVERTISEMENT

ಕೊಡಗು | ಬೇಸಿಗೆ ಬಿಸಿಲಿಗೆ ಲಕ್ಷ್ಮಣ ತೀರ್ಥದಲ್ಲೂ ನೀರಿಲ್ಲ!

ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಉಂಟಾಗಿದೆ ಹವಾಮಾನ ಬದಲಾವಣೆ

ಜೆ.ಸೋಮಣ್ಣ
Published 17 ಮಾರ್ಚ್ 2025, 6:30 IST
Last Updated 17 ಮಾರ್ಚ್ 2025, 6:30 IST
ಗೋಣಿಕೊಪ್ಪಲು ಬಳಿಯ ಬಾಳೆಲೆ ಬಳಿ ನೀರಿಲ್ಲದೆ ಒಣಗಿರುವ ಲಕ್ಷ್ಮಣತೀರ್ಥ ನದಿ
ಗೋಣಿಕೊಪ್ಪಲು ಬಳಿಯ ಬಾಳೆಲೆ ಬಳಿ ನೀರಿಲ್ಲದೆ ಒಣಗಿರುವ ಲಕ್ಷ್ಮಣತೀರ್ಥ ನದಿ   

ಗೋಣಿಕೊಪ್ಪಲು: ಮುಂಗಾರು ಮಳೆಯ ಸಂದರ್ಭದಲ್ಲಿ ದಕ್ಷಿಣ ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಬೃಹತ್ ಸಾಗರವನ್ನೇ ಸೃಷ್ಟಿಸುವ ಲಕ್ಷ್ಮಣತೀರ್ಥ ನದಿ ಈಗ ಬರಿದಾಗಿದೆ.

ಮರಳು ರಾಶಿ ತುಂಬಿರುವ ನದಿಯ ಹೊಂಡಗಳಲ್ಲಿ ಮಾತ್ರ ಪ್ರಾಣಿ ಪಕ್ಷಿಗಳು ಕುಡಿಯುವಷ್ಟು ನೀರಿದೆ. ನದಿಯ ಉಗಮ ಸ್ಥಾನವಾದ ಶ್ರೀಮಂಗಲ ಬಳಿಯ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿಯೇ ನೀರಿನ ಹರಿವು ಕ್ಷೀಣಿಸಿದೆ. ಇದರಿಂದಾಗಿ ಇರ್ಪು ಜಲಪಾತದ ಭೋರ್ಗರೆತ ಕುಸಿದಿದೆ. ಹೀಗಾಗಿ, ನದಿ ಆರಂಭಗೊಳ್ಳುವ ಕುರ್ಚಿ ಗ್ರಾಮದಿಂದ ಹಿಡಿದು 70 ಕಿ.ಮೀ ದೂರದ ಬಾಳೆಲೆ ನಿಟ್ಟೂರು ಜಾಗಲೆವರೆಗೆ ನದಿ ನೀರಿನ ಹರಿವು ಸಂಪೂರ್ಣವಾಗಿ ನಿಂತಿದೆ. ಇದರಿಂದಾಗಿ ಕಾಫಿ ತೋಟದ ಕಾರ್ಮಿಕರು ಮತ್ತು ಇತರ ಬಡವರ್ಗದವರಿಗೆ ಬಟ್ಟೆ ತೊಳೆಯಲೂ ಕಷ್ಟವಾಗಿದೆ. ಬರಿದಾದ ನದಿಯ ಒಡಲಲ್ಲಿ ಗಿಡಗಂಟಿಗಳು ಬೆಳೆದಿವೆ. ಹೊಂಡಗಳಲ್ಲಿ ನೀರು ಕುಡಿದ ದನಕರುಗಳು ಮರಳು ರಾಶಿಯಲ್ಲಿ ಓಡಾಡಿಕೊಂಡಿವೆ.

ಈ ನದಿಯನ್ನು ಸೇರುವ ಕೀರೆಹೊಳೆ ಸ್ಥಿತಿಯೂ ಕೂಡ ಇದೇ ರೀತಿ ಇದೆ. ಕಾನೂರು, ಬೆಸಗೂರು, ಬೆಕ್ಕೆಸೊಡ್ಲೂರು, ಮಲ್ಲೂರು, ದೇವನೂರು ಮರಪಾಲ, ಕೋಣನಕಟ್ಟೆ, ಬಾಳಾಜಿ ಮೊದಲಾದ ಭಾಗಗಳಲ್ಲಿ ಹರಿಯುವ ಕೀರೆಹೊಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಈ ಬಾರಿ ಸಾಮಾನ್ಯವಾಗಿ ಜನವರಿವರೆಗೂ ಕೊಡಗಿಗೆ ಮಳೆ ಬಿದ್ದಿತು. ಕಾಫಿ ಮತ್ತು ಭತ್ತದ ಕಟಾವಿಗೆ ತೊಂದರೆ ಕೊಡುತಿದ್ದ ಮಳೆಗೆ ಜನತೆ ಶಾಪ ಹಾಕುತ್ತಿದ್ದರು. ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ ಈ ಮಳೆಯಿಂದ ಎಂದು ಜನತೆ ಗೊಣಗುತ್ತಿದ್ದರು. ಇದೀಗ ಮಳೆ ನಿಂತು ಕೇವಲ 3 ತಿಂಗಳು ಮಾತ್ರ ಕಳೆದಿದೆ. ಇಷ್ಟರಲ್ಲಿಯೇ ಕೊಡಗಿನ ನದಿತೊರೆಗಳೆಲ್ಲ ಬತ್ತಿ ಹೋಗಿವೆ. ಇಂಥ ಸ್ಥಿತಿ ಕಳೆದ ಏಳೆಂಟು ವರ್ಷಗಳಿಂದ ಈಚೆಗೆ ಶುರುವಾಗಿದೆ. ಇದರಿಂದ ಬಿಸಿಲ ಧಗೆಯೂ ಹೆಚ್ಚಿದೆ.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಉಂಟಾದ ಕೊಡಗಿನ ಹವಾಮಾನ ವೈಪರೀತ್ಯವನ್ನು ಹುಡುಕುತ್ತಾ ಹೊರಟರೆ ಒಬ್ಬೊಬ್ಬರು ಒಂದೊಂದು ಬಗೆಯ ಕಾರಣ ಕೊಡುತ್ತಾರೆ. ಕೊಡಗಿನಲ್ಲಿ ರಸ್ತೆ, ಬಡಾವಣೆ ಹಾಗೂ ಹೈಟೆನ್ಷನ್ ಹಾಗಿ ಲಕ್ಷಾಂತರ ಮರಗಳ ಹರಣವಾಗಿದೆ. ಇದರಿಂದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮರಗಳು ಇಲ್ಲವಾಗಿವೆ. ಭೂಮಿ ಒಣಗಿ ಅಂತರ್ಜಲ ಕುಸಿದು ನದಿಗಳು ಬಹಳ ಬೇಗ ಒಣಗುತ್ತಿವೆ ಎಂದು ಕೆಲವರು ಹೇಳುತ್ತಾರೆ.

ಮತ್ತೆ ಕೆಲವರು ಜಿಲ್ಲೆಯಲ್ಲಿ ರೆಸಾರ್ಟ್‌ಗಳು ಹೆಚ್ಚುತ್ತಿವೆ. ಕೆಲವು ಕಡೆ ಸದ್ದಿಲ್ಲದೆ ಕಾಫಿ ತೋಟಗಳು ರಿಯಲ್ ಎಸ್ಟೇಟ್ ಮಾಫಿಯಗಳ ಹಿಡಿತಕ್ಕೆ ಸಿಕ್ಕಿ ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇದರಿಂದ ಕೆರೆಹಳ್ಳ, ಕೀರೆಹೊಳೆ ಮೊದಲಾದವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಹೇಳುತ್ತಾರೆ.

ವಾಸ್ತವವಾಗಿ ನೋಡುವುದಾದರೆ, ಈ ಎರಡು ಅಭಿಪ್ರಾಯಗಳಲ್ಲಿ ಸತ್ಯಾಂಶವಿದೆ ಎನ್ನಿಸುತ್ತದೆ. ಕೊಡಗು ಹಿಂದಿನಂತಿಲ್ಲ. ಬಹಳ ವೇಗವಾಗಿ ಬದಲಾಗುತ್ತಿದೆ. ಗಿಡಮರಗಳು ನಾಶವಾಗುತ್ತಿವೆ. ಬಡಾವಣೆಗಳು ಹೆಚ್ಚುತ್ತಿವೆ. ನಗರೀಕರಣದ ಕಾಂಕ್ರಿಟ್ ಕಟ್ಟಡಗಳು ಹೆಚ್ಚುತ್ತಿವೆ. ಈ ಎಲ್ಲದರ ಪರಿಣಾಮ ನದಿಗಳ ಮೇಲಾಗುತ್ತಿದೆ.

ಈ ಬಗ್ಗೆ ಬಲ್ಲಯಮಂಡೂರಿನ ಕಾಫಿ ಬೆಳೆಗಾರ ಪಿ.ಕೆ.ಪೊನ್ನಪ್ಪ ಅವರನ್ನು ಮಾತನಾಡಿಸಿದಾಗ, ‘ಎಲ್ಲ ಪ್ರದೇಶಗಳಂತೆ ಕೊಡಗು ಕೂಡ ಬದಲಾಗತ್ತಿದೆ. ಈ ಬದಲಾವಣೆಯನ್ನು ತಡೆಗಟ್ಟಲು ಸಾಧ್ಯವಾಗದಿದ್ದರೂ, ಪರಿಸರದ ಉಳುವಿಗಾಗಿಯಾದರು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲಿನ ಗದ್ದೆ, ಕಾಫಿತೋಟಗಳನ್ನು ಉಳಿಸಬೇಕಾಗಿದೆ. ಇಲ್ಲದಿದ್ದರೆ ಮುಂದೆ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಆತಂಕದಿಂದ ನುಡಿದರು.

ಮಳೆಗಾಲದಲ್ಲಿ ಬಾಳೆಲೆ ನಿಟ್ಟೂರು ನಡುವಿನ ಸೇತುವೆ ಮೇಲೆ ಹರಿಯುವ ಲಕ್ಷ್ಮಣತೀರ್ಥ ನದಿಯ ಸೇತುವೆ ಕೆಳಗೆ ಸ್ವಲ್ಪವೂ ನೀರಿಲ್ಲದೆ ಒಣಗಿದೆ
ಗೋಣಿಕೊಪ್ಪಲು ಬಳಿಯ ಅರುವತ್ತೊಕ್ಕಲು ಮಾಯಮುಡಿ ನಡುವೆ ನೀರಿಲ್ಲದೆ ಕೇವಲ ಬಂಡೆಗಳಿಂದ ಕೂಡಿರುವ ಕೀರೆಹೊಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.