ADVERTISEMENT

ಮಡಿಕೇರಿ | ‘ಅತಿಕ್ರಮ ಪ್ರವೇಶ ಅಪರಾಧ’ ಫಲಕ ಅಳವಡಿಕೆ: ಆದಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 16:01 IST
Last Updated 14 ಮೇ 2025, 16:01 IST
ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಒಳಗಿನ ಕರಡಿಕಲ್ಲು ಅತ್ತೂರುಕೊಲ್ಲಿಯಲ್ಲಿ ‘ಅತಿಕ್ರಮ ಪ್ರವೇಶ ಅಪರಾಧ’ ಫಲಕ ಹಾಕಿರುವುದು
ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಒಳಗಿನ ಕರಡಿಕಲ್ಲು ಅತ್ತೂರುಕೊಲ್ಲಿಯಲ್ಲಿ ‘ಅತಿಕ್ರಮ ಪ್ರವೇಶ ಅಪರಾಧ’ ಫಲಕ ಹಾಕಿರುವುದು   

ಮಡಿಕೇರಿ: ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಒಳಗಿನ ಕರಡಿಕಲ್ಲು ಅತ್ತೂರುಕೊಲ್ಲಿಯಲ್ಲಿ ಅರಣ್ಯ ಇಲಾಖೆಯು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 27ರಂತೆ ಹುಲಿ ಸಂರಕ್ಷಿತ ಪ್ರದೇಶ– ಅತಿಕ್ರಮ ಪ್ರವೇಶ ಅಪರಾಧ’ ಎಂಬ ಫಲಕ ಅಳವಡಿಸಿದ್ದು, ಅಲ್ಲಿಯೇ ಮೇ 5ರಿಂದ ಪ್ರತಿಭಟನೆ ನಡೆಸುತ್ತಿರುವ ಆದಿವಾಸಿಗಳಲ್ಲಿ ಆಕ್ರೋಶ ಮೂಡಿಸಿದೆ.

ಈ ನಡುವೆಯೇ, ಅರಣ್ಯ ಹಕ್ಕು ಕಾಯ್ದೆ ಅಡಿ ವೈಯಕ್ತಿಕ ಮತ್ತು ಸಮುದಾಯ ಹಕ್ಕುಗಳಿಗೆ ಒತ್ತಾಯಿಸಿ ಜೇನು ಕುರುಬ ಸಮುದಾಯದ 52 ಕುಟುಂಬಗಳ ಪ್ರತಿಭಟನೆ ಬುಧವಾರವೂ ಮುಂದುವರಿಯಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು, ‘ನಮ್ಮ ಹೋರಾಟವನ್ನು ಹತ್ತಿಕ್ಕಲೆಂದೇ ಫಲಕವನ್ನು ಅಳವಡಿಸಲಾಗಿದೆ. ನಾವು ಮೊದಲು ಇಲ್ಲೇ ಇದ್ದವರು. ಅತಿಕ್ರಮವಾಗಿ ಪ್ರವೇಶಿಸಿಲ್ಲ’ ಎಂದರು.

ADVERTISEMENT

‘ಅರಣ್ಯದೊಳಗೆ ಯಾವುದೇ ಚಟುವಟಿಕೆ ನಡೆಸಬಾರದೆಂದು ಸುಪ್ರೀಂಕೋರ್ಟ್ ಆದೇಶಿಸಿದ್ದು, ಕೂಡಲೇ ಹೊರನಡೆಯಬೇಕೆಂದು ಇಲಾಖೆಯು ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದು, ಆದೇಶದ ಪ್ರತಿ ನೀಡಬೇಕು ಹಾಗೂ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿ ದೌರ್ಜನ್ಯ ಎಸಗುತ್ತಿರುವುದು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿ ಅಪರಾಧವಾಗುತ್ತದೆ ಎಂದು ಪತ್ರ ನೀಡಿದ್ದೇವೆ’ ಎಂದು ತಿಳಿಸಿದರು. 

ಪ್ರತಿಭಟನೆ ವಿಷಯವಾಗಿ ನಾಗರಹೊಳೆ ಅದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ, ರಾಜ್ಯ ಮೂಲ ಆದಿವಾಸಿ ವೇದಿಕೆ ಕರ್ನಾಟಕ, ಬುಡಕಟ್ಟು ಕೃಷಿಕರ ಸಂಘದ ಪ್ರತಿನಿಧಿಗಳು ಇಲ್ಲಿಗೆ ಸಮೀಪದ ಬಾಳೆಕೋವು ಹಾಡಿಯಲ್ಲಿ ಮೇ 15ರಂದು ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.