ಶನಿವಾರಸಂತೆ: ‘ಮಾನವೀಯತೆ ಉಳಿಸುವುದೇ ಪ್ರತಿಯೊಬ್ಬರ ಮೊದಲ ಕರ್ತವ್ಯವಾಗಬೇಕು’ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಪ್ರತಿಪಾದಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹಾಸನ ಶಾಖಾ ಮಠ, ಬಿಜಿಎಸ್ ಸೇವಾ ಸಂಘ ಕಳಲೆ ಕೂಡಿಗೆ, ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಹಾಗೂ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಶನಿವಾರಸಂತೆಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಯುಪಿಎಸ್‍ಸಿ ಪರೀಕ್ಷೆ , ಬ್ಯಾಂಕಿಂಗ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರದ ಯುವವಿಕಾಸನ-25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಲಿಕೆಯ ದಾಹ ಇಲ್ಲದಿದ್ದರೆ, ಗುರಿ ಮುಟ್ಟಲು ಸಾಧ್ಯವಾಗದು. ಜ್ಞಾನ ಮತ್ತು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ನಿರ್ಭಯತೆ ಈ ಮಹತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಇದರ ಜೊತೆಯಲ್ಲಿ ಬುದ್ದಿ, ಮನಸ್ಸು, ಹೃದಯವಂತಿಕೆ, ಕರ್ಮ ಇವೆಲ್ಲಾವನ್ನು ಸದ್ಬಳಕೆ ಮಾಡಿದರೆ ವ್ಯಕ್ತಿ ತನ್ನ ಜೀವನವನ್ನು ಸ್ವಾಭಿಮಾನದಿಂದ ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಕೊರತೆಗಳನ್ನು ಗುರುತಿಸಿ ಮಾರ್ಗದರ್ಶನ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಅಪಮಾನ, ಅವಮಾನ ಬಂದರೂ ಮರೆಯುವಂತೆ ಛಲದಿಂದ ಬದುಕುವ ಕಲೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಮಾತನಾಡಿ, ‘ಗ್ರಾಮೀಣ ಪ್ರದೇಶದ ಮಕ್ಕಳು ಅಳುಕು, ಅಂಜಿಕೆಯಿಂದ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಪರಿಶ್ರಮ ಛಲದ ಸ್ವಭಾವವನ್ನು ಬೆಳೆಸಿಕೊಂಡರೆ ಸಾಧನೆ ಮಾಡಬಹುದು’ ಎಂದರು.
ಪದವಿ ಪಡೆದ ವಿದ್ಯಾರ್ಥಿಗಳು ಯುಪಿಎಸ್‍ಸಿ, ಕೆಪಿಎಸ್‍ಸಿ, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅವಕಾಶ ಇದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವುದು, ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಪರೀಕ್ಷೆ ಎದುರಿಸಲು ಉಪಯೋಗವಾಗುತ್ತದೆ ಎಂದರು.
ಕಾರ್ಯಗಾರದಲ್ಲಿ ತಾಲೂಕಿನ ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್‌ಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಮರುಳೀಧರ್, ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಇಂಡಿಯನ್ ಐಎಎಸ್ ಅಕಾಡೆಮಿ ಸಂಸ್ಥಾಪಕ , ಸಿಇಒ ಪಿ.ಸಿ.ಶ್ರೀನಿವಾಸ್, ಪುನಿತ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಉದ್ಯಮಿ ಗಿರೀಶ್ ಮಲ್ಲಪ್ಪ, ಕಳಲೆ ಕೂಡಿಗೆಯ ಬಿಜಿಎಸ್ ಸೇವಾ ಸಂಘದ ಉಪಾಧ್ಯಕ್ಷ ಕಳಲೆ ಕೃಷ್ಣೇಗೌಡ, ಜಗನ್‍ಪಾಲ್, ಪುಟ್ಟೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.