ಕುಶಾಲನಗರ: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಬಿ.ಜಗದೀಶ್ ಅವಿರೋಧವಾಗಿ ಆಯ್ಕೆಯಾದರು. ಸಂಘದ ಅಧ್ಯಕ್ಷರಾಗಿದ್ದ ಕೆ.ಸಿ.ಉದಯಕುಮಾರ್ ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು
ನೂತನ ಅಧ್ಯಕ್ಷರಿಗೆ ಶುಭಕೋರಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪ್ರಾಮಾಣಿಕ ಕೈಗಳ ಅವಶ್ಯಕತೆ ಇದೆ.
ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಎತ್ತರಕ್ಕೆ ಬೆಳೆಯಬಹುದು. ಆ ಮೂಲಕ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡಬೇಕು. ಸಹಕಾರಿ ಬಂಧುಗಳು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಘದಲ್ಲಿ ಸಾಲಸೌಲಭ್ಯ ಪಡೆಯಲು ರೈತರಿಗೆ ಜಂಟಿ ಖಾತೆ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರ ಮಟ್ಟದಲ್ಲಿ ಪ್ತಯತ್ಮಿಸಲಾಗುವುದು. ಜೊತೆಗೆ ಸಹಕಾರ ಸಚಿವರ ಬಳಿಗೆ ನಿಯೋಗ ತೆರಳಿ ಈ ಕುರಿತು ಕೊಡಗಿಗೆ ವಿಶೇಷ ಕಾನೂನು ತರಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ಅಧಿಕಾರ ಶಾಶ್ವತವಲ್ಲ. ಮುಂಬರುವ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುವುದು ಸರಿಯಲ್ಲ. ಪಕ್ಷದ ತತ್ವ ಸಿದ್ಧಾಂತ ಚಾಚೂ ತಪ್ಪದೆ ಪಾಲಿಸುವ ಕಾರ್ಯಕರ್ತರಿಗೆ ಅವಕಾಶ ನೀಡಲು ತಾನು ಸದಾ ಬದ್ಧನಾಗಿದ್ದೇನೆ ಎಂದರು. ಅಧಿಕಾರ ಪಡೆದ ನಂತರ ಪಕ್ಷಭೇದಮರೆತು ಎಲ್ಲರನ್ನು ಸಮಾನವಾಗಿ ಕಾಣಲು ಅವರು ಸಲಹೆ ನೀಡಿದರು.
ನೂತನ ಅಧ್ಯಕ್ಷ ಟಿ.ಬಿ.ಜಗದೀಶ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಸಾಲ ಸೌಲಭ್ಯ ಪಡೆಯಲು ಜಂಟಿ ಖಾತೆ ಸಮಸ್ಯೆ ಆಗಿದೆ. ಈ ಬಗ್ಗೆ ಕೂಡಲೇ ಸರ್ಕಾರದ ಗಮನ ಸೆಳೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣೇಗೌಡ ಮಾತನಾಡಿ, ಸಂಘದ ಚಾವಣಿ ನಿರ್ಮಾಣಕ್ಕೆ ಅನುದಾನ ಒದಗಿಸಲು ಮನವಿ ಸಲ್ಲಿಸಿದರು. ಇದೇ ಸಂದರ್ಭ ಚುನಾವಣೆಗೆ ಸಹಕರಿಸಿದವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಸಂಘದ ಉಪಾಧ್ಯಕ್ಷೆ ಗೌರಮಣಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ನಟೇಶ್ ಗೌಡ, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಅರುಣ್ ರಾವ್ ಸೇರಿದಂತೆ ಸಂಘದ ನಿರ್ದೇಶಕರಾದ ಕೆ.ಎಸ್.ಕೃಷ್ಣೇಗೌಡ, ಟಿ.ಎ.ರವಿಚಂದ್ರ, ಟಿ.ಜಿ.ರವಿಕುಮಾರ್, ಎಚ್.ಸಿ.ಮೂರ್ತಿ, ಹೇಮ, ಸಿ.ಕೆ.ಉದಯಕುಮಾರ್, ಗ್ರಾ.ಪಂ ಸದಸ್ಯೆ ಸಾವಿತ್ರಿ ಗಿರೀಶ್, ಮುಖಂಡರಾದ ಎಸ್.ಎಸ್.ಚಂದ್ರಶೇಖರ್, ಪಿ.ಡಿ.ರವಿ, ವಿ.ಜೆ.ನವೀನ್ ಗೌಡ, ತೋಟೇಶ್, ರಮೇಶ್, ಗುಂಡಣ್ಣ, ಟಿ.ಎಸ್.ಚಂದ್ರಶೇಖರ್, ಗಣೇಶ್, ವಸಂತಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.