ADVERTISEMENT

ಕನ್ನಡ ರಾಜ್ಯೋತ್ಸವ ವಿಶೇಷ: ಮಲಯಾಳ ಮಕ್ಕಳ ಕನ್ನಡ ಪ್ರೇಮ

ಕೇರಳ ಗಡಿಭಾಗದ ಕುಟ್ಟ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ

ಕೆ.ಎಸ್.ಗಿರೀಶ್
Published 31 ಅಕ್ಟೋಬರ್ 2022, 21:31 IST
Last Updated 31 ಅಕ್ಟೋಬರ್ 2022, 21:31 IST
ಕೊಡಗು ಜಿಲ್ಲೆಯ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕೊಡಗು ಜಿಲ್ಲೆಯ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಮಡಿಕೇರಿ: ಮಲಯಾಳ ಮಾತೃಭಾಷೆ. ಆದರೆ ಅವರ ಪ್ರೇಮವಿರುವುದು ಕನ್ನಡ ಶಾಲೆಯ ಮೇಲೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೇರಳ ಗಡಿಭಾಗದಲ್ಲಿರುವ ಕುಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಲಯಾಳ ಮಾತೃಭಾಷೆಯವರೇ ಹೆಚ್ಚಿದ್ದು, ಸದ್ಯ 238 ಮಕ್ಕಳು ಕಲಿಯುತ್ತಿದ್ದಾರೆ.

ಇಲ್ಲಿಂದ ಕೇವಲ 3 ಕಿ.ಮೀ ದೂರ ಕ್ರಮಿಸಿದರೆ ಕೇರಳ ಸಿಗುತ್ತದೆ. ಗಡಿಯಲ್ಲೇ ಇರುವ ತೋಳ್ಪಟ್ಟಿ ಗ್ರಾಮದ ಮಲಯಾಳ ಭಾಷೆಯ ಶಾಲೆಗೂ ಪೋಷಕರು ಮಕ್ಕಳನ್ನು ಕಳಿಸುತ್ತಿಲ್ಲ.

ಕುಟ್ಟ ಗ್ರಾಮದಲ್ಲಿ 1952ರಲ್ಲಿ ಆರಂಭವಾದ ಶಾಲೆಯಲ್ಲಿರುವ ಉತ್ತಮ ಸೌಕರ್ಯಗಳೇ ಪೋಷಕರು, ಮಕ್ಕಳನ್ನು ಸೆಳೆಯುತ್ತಿವೆ. ಕುಟ್ಟದಲ್ಲೂ ಮಲಯಾಳ ಶಾಲೆ ತೆರೆಯಲು
ಇನ್ನಿಲ್ಲದ ಕಸರತ್ತು ನಡೆಸಿರುವ ಕೇರಳ ಸರ್ಕಾರವು ನಡೆಸಿದ ಸಭೆಗಳಲ್ಲೂ ಪೋಷಕರು ಕನ್ನಡ ಶಾಲೆಯನ್ನೇ ಎತ್ತಿ ಹಿಡಿದಿದ್ದಾರೆ.

ADVERTISEMENT

ಅತ್ಯುತ್ತಮ ಬೋಧನೆಯೊಂದಿಗೆ ಉತ್ತಮ ಪರಿಸರವಿರುವ ಶಾಲೆಯಲ್ಲಿ ವಿಶಾಲ ಮೈದಾನವಿದೆ. ಕ್ರೀಡಾ ಪರಿಕರಗಳೂ ಸಾಕಷ್ಟಿವೆ. ಸದಾ ಮಳೆಯಿಂದ ಕೂಡಿರುವ ಇಲ್ಲಿ ಮಕ್ಕಳಿಗೆ ಪ್ರಾರ್ಥನೆ ಮಾಡಲು, ಯೋಗಾಭ್ಯಾಸ ಮಾಡಲು ಬೃಹತ್ ಚಾವಣಿ ಹಾಕಲಾಗಿದೆ. ಬಹಳಷ್ಟು ಶಿಕ್ಷಕರಿಗೆ ಮಲಯಾಳ ಮಾತೃಭಾಷೆಯಾಗಿರುವುದರಿಂದ ಪೋಷಕರನ್ನು ಸುಲಭವಾಗಿ ಮನವೊಲಿಸಿ, ಕನ್ನಡದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, ಮಕ್ಕಳನ್ನು ಶಾಲೆಗೆ ಸೇರಿಸುವುದರಲ್ಲಿ ಸಫಲರಾಗಿದ್ದಾರೆ.

ಸರ್ಕಾರದ ಸೌಲಭ್ಯಗಳ ಜತೆಗೆ, ಶಾಲೆಯು ಸರ್ಕಾರೇತರ ಸಂಸ್ಥೆಗಳ ನೆರವನ್ನೂ ಪಡೆದು ಅಗತ್ಯ ಸೌಲಭ್ಯ
ಗಳನ್ನು ಪಡೆದುಕೊಳ್ಳುತ್ತಿದೆ. ‘ಕೃತಗ್ಯತಾ’ ಟ್ರಸ್ಟ್‌ ಶಾಲೆಗೆ 5 ಕಂಪ್ಯೂಟರ್‌ಗಳನ್ನು ನೀಡಿ ಶಿಕ್ಷಕರನ್ನೂ ನೇಮಿಸಿದೆ.

ಶಾಲೆಯಲ್ಲಿ ಆಕರ್ಷಕವಾದ ಗೋಡೆ ಬರಹಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಿವೆ. ಮಧ್ಯಾಹ್ನದ ಬಿಸಿಯೂಟ, ದೈಹಿಕ ಶಿಕ್ಷಣ ಶಿಕ್ಷಕರ ಉತ್ತೇಜನ, ಸುಸಜ್ಜಿತ ಪ್ರಯೋಗಾಲಯ, ಪ್ರತಿ ಮಗುವಿನ ಕಲಿಕೆ ಕಡೆಗೆ ವೈಯಕ್ತಿಕ ಗಮನ– ಈ ಅಂಶಗಳು ಶಾಲೆಗೆ ಜನಪ್ರಿಯತೆ ತಂದುಕೊಟ್ಟಿವೆ. ಮಂಜೂ ರಾಗಿರುವ 9 ಹುದ್ದೆಗಳ ಪೈಕಿ ನಾಲ್ವರು ಕಾಯಂ ಶಿಕ್ಷಕರಿದ್ದಾರೆ. ಉಳಿದ ನಾಲ್ವರು ಅತಿಥಿ ಶಿಕ್ಷಕರು. ಒಂದು ಹುದ್ದೆ ಖಾಲಿ ಇದೆ. ಕೇರಳದಿಂದ ಕೇವಲ ಅರ್ಧ ಕಿ.ಮೀ ದೂರ ಇರುವ ಸಿಂಕೋನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಯಶಸ್ಸಿನ ಹಾದಿಯಲ್ಲಿದೆ. ಕಳೆದ ವರ್ಷ 52 ಇದ್ದ ಮಕ್ಕಳ ಸಂಖ್ಯೆ ಈಗ 64ಕ್ಕೆ ಹೆಚ್ಚಿದೆ. ‘ಕೇವಲ ಮೂವರು ಶಿಕ್ಷಕರಷ್ಟೇ ಇರುವುದು ಕೊರತೆ ಎನಿಸಿದ್ದು, ಸ‌ರ್ಕಾರ ಇನ್ನಷ್ಟು ಶಿಕ್ಷಕರನ್ನು ನೇಮಿಸಿದರೆ ಇಲ್ಲೂ ಮಕ್ಕಳ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎನ್ನುತ್ತವೆ ಶಾಲೆಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.