ADVERTISEMENT

ದಸರೆಗೆ ಕರಗೋತ್ಸವ ಮುನ್ನುಡಿ‌

26ರಂದು ಪಂಪಿನ ಕೆರೆಯಿಂದ ಹೊರಡುವ ನಾಲ್ಕು ಶಕ್ತಿದೇವತೆಗಳ ಕರಗಗಳು

ಕೆ.ಎಸ್.ಗಿರೀಶ್
Published 24 ಸೆಪ್ಟೆಂಬರ್ 2022, 5:43 IST
Last Updated 24 ಸೆಪ್ಟೆಂಬರ್ 2022, 5:43 IST
ದಂಡಿನಮಾರಿಯಮ್ಮ ಕರಗ ಹೊತ್ತಿದ್ದ ಉಮೇಶ್‌ ಪೂಜಾರಿ (ಎಡಚಿತ್ರ). ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕರಗ ಹೊತ್ತಿದ್ದ ಪಿ.ಪಿ.ಚಾಮಿ (ಮಧ್ಯೆ). ಕೋಟೆ ಮಾರಿಯಮ್ಮ ಕರಗ ಹೊತ್ತಿದ್ದ ಪಿ.ಬಿ.ಉಮೇಶ್‌ ಸುಬ್ರಮಣಿ (ಸಂಗ್ರಹ ಚಿತ್ರಗಳು)
ದಂಡಿನಮಾರಿಯಮ್ಮ ಕರಗ ಹೊತ್ತಿದ್ದ ಉಮೇಶ್‌ ಪೂಜಾರಿ (ಎಡಚಿತ್ರ). ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕರಗ ಹೊತ್ತಿದ್ದ ಪಿ.ಪಿ.ಚಾಮಿ (ಮಧ್ಯೆ). ಕೋಟೆ ಮಾರಿಯಮ್ಮ ಕರಗ ಹೊತ್ತಿದ್ದ ಪಿ.ಬಿ.ಉಮೇಶ್‌ ಸುಬ್ರಮಣಿ (ಸಂಗ್ರಹ ಚಿತ್ರಗಳು)   

ಮಡಿಕೇರಿ: ಮಡಿಕೇರಿ ದಸರೆ ಎಂದರೆ ಕೇವಲ ಒಂದು ಉತ್ಸವವಲ್ಲ. ಮಹತ್ವದ ಕರಗೋತ್ಸವ ಹಾಗೂ ಮಂಟಪೋತ್ಸವ ಗಳನ್ನೂ ಒಳಗೊಂಡಿ ರುವುದು ಇಲ್ಲಿನ ವಿಶೇಷ. ಬೇರೆ ಯಾವುದೇ ದಸರೆಯಲ್ಲೂ ಕಾಣಸಿಗದಂತೆ ಕರಗೋತ್ಸವ ಇಲ್ಲಿನ ಹೆಗ್ಗುರುತಾದರೆ, ಬೇರೆಲ್ಲೂ ಸಿಗದಂತಹ ಮಂಟಪೋತ್ಸವ ಮಡಿಕೇರಿ ದಸರೆಯ ಹಿರಿಮೆ.

ಮಡಿಕೇರಿಯಲ್ಲಿ ಕಾಣಿಸಿಕೊಂಡ ಸಾಂಕ್ರಮಿಕ ರೋಗಗಳ ನಿವಾರಣೆಗೆಂದು ಆರಂಭವಾದ 4 ಶಕ್ತಿ ದೇವತೆಗಳ ಕರಗಗಳು ಇಡೀ ನಗರವನ್ನು ನವರಾತ್ರಿಯ ಸಮಯದಲ್ಲಿ ಪ್ರದಕ್ಷಿಣೆ ಹಾಕಿ ಜನರ ಒಳಿತಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಇಲ್ಲಿನ ಕೋಟೆಮಾರಿಯಮ್ಮ, ಕುಂದೂರು ಮೊಟ್ಟೆಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕುಶಕ್ತಿದೇವತೆಗಳ ಕರಗಗಳು ಪಂಪಿನ ಕೆರೆಯಿಂದ ಸೆ.26ರಂದು ಹೊರಡುತ್ತವೆ.

ನವರಾತ್ರಿಯ ಎಲ್ಲ ದಿನಗಳಲ್ಲೂ ನಗರದ ರಸ್ತೆಗಳಲ್ಲಿ, ಬಡಾವಣೆಯ ಬೀದಿಗಳಲ್ಲಿ ಕರಗಗಳ ಮೆರವಣಿಗೆ ನಡೆಯುತ್ತದೆ. ಬೇರೆಲ್ಲ ಆಚರಣೆಗಳು ಹೊಸ ಕಾಲಘಟ್ಟ ದಲ್ಲಿ ಬದಲಾವಣೆ ಹೊಂದುತ್ತಿದ್ದರೂ ಕರಗಗಳ ಮೆರವಣಿಗೆ ಸಾಂಪ್ರದಾಯಿಕತೆ, ಶ್ರದ್ಧಾಭಕ್ತಿ, ಗೌರವಗಳನ್ನು ಉಳಿಸಿ ಕೊಂಡು ಅನೂಚಾನವಾಗಿ ಬಂದಂತೆ ನಡೆಯುತ್ತಿರುವುದು ಇದರ ಹೆಗ್ಗಳಿಕೆ. ಸಾವಿರಾರು ಮಂದಿ ಕರಗಗಳಿಗೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸುವುದು ಮಡಿಕೇರಿ ದಸರೆಯ ವಿಶೇಷಗಳಲ್ಲಿ ಒಂದು.

ADVERTISEMENT

50 ವರ್ಷ ಕರಗ ಹೊತ್ತ ಉಮೇಶ್‌ ಪೂಜಾರಿ: ಉಮೇಶ್‌ ಪೂಜಾರಿ ಅವರು ಸತತ 50ನೇ ವರ್ಷ ಇಲ್ಲಿನ ದಂಡಿನ ಮಾರಿಯಮ್ಮ ಕರಗವನ್ನು ಹೊರುತ್ತಿರುವುದು ಮತ್ತೊಂದು ವಿಶೇಷ. ತನ್ನ 14ನೇ ವಯಸ್ಸಿನಿಂದಲೇ 1973ರಿಂದ ಕರಗ ಹೊರಲು ಆರಂಭಿಸಿದ ಅವರು, ನಂತರ ಸೇನೆಗೆ ಸೇರಿದರೂ ಕರಗ ಹೊರುವುದನ್ನು ತಪ್ಪಿಸಲಿಲ್ಲ. ಪ್ರತಿ ವರ್ಷ ದಸರೆ ಸಮಯದಲ್ಲಿ ರಜೆ ತೆಗೆದುಕೊಂಡು ಕರಗ ಹೊರುತ್ತಿದ್ದರು. ನಿವೃತ್ತಿಯ ನಂತರವೂ ಅವರು ಕರಗ ಹೊತ್ತು ಶ್ರದ್ಧಾಭಕ್ತಿಯನ್ನು ಮೆರೆಯುತ್ತಿದ್ದಾರೆ.

ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಸತತ 48 ವರ್ಷಗಳ ಕಾಲ ಹೊರುತ್ತಿರುವವರು ಪಿ.ಪಿ.ಚಾಮಿ. ನಿತ್ಯ 10 ಕಿ.ಮೀ ಕರಗವನ್ನು ಹೊತ್ತು ಇವರು ಸಾಗುತ್ತಿದ್ದಾರೆ. ತಮ್ಮ ಈ ವಯಸ್ಸಿನಲ್ಲೂ ಅವರು ಉತ್ಸಾಹಿ ತರುಣರಂತೆ ಹೆಜ್ಜೆ ಹಾಕಿ, ಸಮಾಜಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಕೋಟೆ ಮಾರಿಯಮ್ಮ ಕರಗವನ್ನು ಸತತ 30 ವರ್ಷಗಳಿಂದ ಪಿ.ಬಿ.ಅನೀಶ್‌ ಕುಮಾರ್, ಪಿ.ಬಿ.ಉಮೇಶ್‌ ಸುಬ್ರಮಣಿ ಹೊರುತ್ತಿರುವುದು ಮತ್ತೊಂದು ವಿಶೇಷ. ಕಂಚಿ ಕಾಮಾಕ್ಷಮ್ಮ ದೇಗುಲದ ಕರಗವನ್ನು ನವೀನ್‌ ಕುಮಾರ್ ಕಳೆದ 15 ವರ್ಷಗಳಿಂದ ಹೊರುತ್ತಿದ್ದಾರೆ.

ಈ ನಾಲ್ಕು ಕರಗಗಳು ಮಡಿಕೇರಿ ದಸರೆಗೆ ಮುನ್ನುಡಿ ಬರೆಯಲಿದ್ದು, ಜನಸಾಮಾನ್ಯರು ಕರಗ ಮತ್ತು ದಸರಾ ಎರಡನ್ನೂ ನೋಡಲು ಕಾತರರಾಗಿದ್ದಾರೆ.

ನಾಳೆ: ಮಡಿಕೇರಿ ದಸರೆಯ ವಿಶೇಷ ಮಂಟಪೋತ್ಸವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.