ADVERTISEMENT

16ರಂದು ಜಿಲ್ಲಾಮಟ್ಟದ ಶಿಕ್ಷಕರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 11:22 IST
Last Updated 14 ಅಕ್ಟೋಬರ್ 2018, 11:22 IST

ಮಡಿಕೇರಿ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 16ರಂದು ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೊಡಗು ಜಿಲ್ಲಾಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

‘ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು’ ವಿಷಯದಡಿ ನಡೆಯಲಿರುವ 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಪೂರ್ವಭಾವಿಯಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿಂದ ಒಬ್ಬ ವಿಜ್ಞಾನ, ಆಸಕ್ತ ಶಿಕ್ಷಕರು ಭಾಗವಹಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚಾದೊ ಕೋರಿದ್ದಾರೆ.

ತರಬೇತಿ ಪಡೆದವರು ಮಾರ್ಗದರ್ಶಿ ಸಮಾವೇಶದಲ್ಲಿ ಮಕ್ಕಳು ಪ್ರಬಂಧ ಮಂಡಿಸಲು ನೆರವು ನೀಡಬೇಕು. ಕಾರ್ಯಾಗಾರ ಹಾಗೂ ನಂತರ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ವತಿಯಿಂದ ಒಒಡಿ ಸೌಲಭ್ಯವಿದೆ. ಜಿಲ್ಲಾಮಟ್ಟದಲ್ಲಿ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಆಯ್ಕೆಯಾಗುವ ಮೊದಲ 10 ತಂಡಗಳು, ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ವೈಜ್ಞಾನಿಕ ಪ್ರಬಂಧ ಮಂಡಿಸಲಿದ್ದಾರೆ ಎಂದೂ ತಿಳಿಸಿದ್ದಾರೆ.‌

ADVERTISEMENT

ನಂತರ, ರಾಜ್ಯಮಟ್ಟದಲ್ಲಿ ಆಯ್ಕೆಯಾಗುವ ಮೊದಲ 30 ತಂಡಗಳು ಡಿಸೆಂಬರ್ 27-31ರವರೆಗೆ 5 ದಿನಗಳ ಕಾಲ ಒಡಿಶಾ ರಾಜ್ಯದ ಭುವನೇಶ್ವರ ನಗರದಲ್ಲಿ ನಡೆಯುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

ಶಕ್ತಿ, ಆರೋಗ್ಯ, ಸ್ವಚ್ಛತೆ ಮತ್ತು ಪೋಷಣೆ, ಪರಿಸರ ವ್ಯವಸ್ಥೆಗಳು, ಜೀವಿ ಪರಿಸರ ಮತ್ತು ಪರಿಸರ ಸೇವೆಗಳು, ಆರೋಗ್ಯ, ನೈರ್ಮಲ್ಯ ಮತ್ತು ಸ್ವಾಸ್ಥ್ಯ ಪರಿಪಾಲನೆ, ತ್ಯಾಜ್ಯದಿಂದ ಸಂಪತ್ತು, ಸಮಾಜ, ಸಂಸ್ಕೃತಿ ಮತ್ತು ಜೀವನೋಪಾಯ ಹಾಗೂ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ ಮುಂತಾದ ವಿಷಯಗಳ ಕುರಿತು ತಮ್ಮ ಪ್ರಯೋಗಗಳ ಮೂಲಕ ಸಿದ್ಧಪಡಿಸಿದ ವೈಜ್ಞಾನಿಕ ಯೋಜನಾ ಪ್ರಬಂಧವನ್ನು ಬಾಲ ವಿಜ್ಞಾನಿಗಳು ಮಂಡಿಸಲು ಅವಕಾಶವಿದೆ ಎಂದು ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.