ADVERTISEMENT

ರಾಜ್ಯದಲ್ಲಿ ಕಾಡಾನೆ ಸಾವು ಹೆಚ್ಚಳ.. ಹೇಗಿದೆ ಪರಿಸ್ಥಿತಿ?

ಕಳೆದ ವರ್ಷ ರಾಜ್ಯದಲ್ಲಿ ಮೃತಪಟ್ಟ ಕಾಡಾನೆಗಳ ಸಂಖ್ಯೆ 109

ಕೆ.ಎಸ್.ಗಿರೀಶ್
Published 12 ಆಗಸ್ಟ್ 2025, 7:44 IST
Last Updated 12 ಆಗಸ್ಟ್ 2025, 7:44 IST
ನಾಗರಹೊಳೆಯ ಕಾಡಂಚಿನಲ್ಲಿ ಕಾಡಾನೆಯೊಂದು ತನ್ನ ಮರಿಯೊಂದಿಗೆ ನೀರು ಕುಡಿಯಲೆಂದು ಕೆರೆ ಬಂದ ಕ್ಷಣ
ನಾಗರಹೊಳೆಯ ಕಾಡಂಚಿನಲ್ಲಿ ಕಾಡಾನೆಯೊಂದು ತನ್ನ ಮರಿಯೊಂದಿಗೆ ನೀರು ಕುಡಿಯಲೆಂದು ಕೆರೆ ಬಂದ ಕ್ಷಣ   

ಮಡಿಕೇರಿ: ರಾಜ್ಯದಲ್ಲಿ ಸುಮಾರು 6,395 ಕಾಡಾನೆಗಳಿದ್ದು, ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಾವು ಹೆಚ್ಚುತ್ತಿವೆ.

ರಾಜ್ಯದಲ್ಲಿ 2021ರಲ್ಲಿ 82 ಕಾಡಾನೆಗಳು ಮೃತಪಟ್ಟಿದ್ದವು. ಆದರೆ, ಕಳೆದ ವರ್ಷ 2024ರಲ್ಲಿ ಈ ಸಂಖ್ಯೆ 109ನ್ನು ತಲುಪಿತು. ಕಳೆದ 5 ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯ ಕಾಡಾನೆಗಳು ಮೃತಪಟ್ಟಿರಲಿಲ್ಲ. ಈ ವರ್ಷ ಕೇವಲ 6 ತಿಂಗಳಿನಲ್ಲಿ 20 ಕಾಡಾನೆಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಈ ವರ್ಷ ಜನವರಿಯಿಂದ ಜೂನ್‌ವರೆಗೆ ಒಟ್ಟು 6 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಮೃತಪಟ್ಟಿರುವ 20 ಕಾಡಾನೆಗಳ ಪೈಕಿ ಕೊಡಗಿನಲ್ಲಿಯೇ 8 ಕಾಡಾನೆಗಳು ಮೃತಪಟ್ಟಿವೆ. ಅವುಗಳಲ್ಲಿ 2 ಕಾಡಾನೆಗಳು ವಿದ್ಯುತ್ ಆಘಾತದಿಂದ ಮೃತಪಟ್ಟಿವೆ.

ADVERTISEMENT

ಕೊಡಗಿನ ವಿರಾಜಪೇಟೆ ವಿಭಾಗವೊಂದರಲ್ಲೇ ಸುಮಾರು 109 ಕಾಡಾನೆಗಳಿವೆ. ಇನ್ನು ಹೊರಗಿನ ತೋಟಗಳಲ್ಲಿ 104 ಕಾಡಾನೆಗಳಿವೆ. ಮೇಲ್ನೋಟಕ್ಕೆ ಕಾಡಾನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅನ್ನಿಸುತ್ತಿದ್ದರೂ, ವಾಸ್ತವದಲ್ಲಿ ಹಿಂದೆ ಇದ್ದಷ್ಟು ಸಂಖ್ಯೆಯಲ್ಲಿ ಕಾಡಾನೆಗಳು ಈಗ ಇಲ್ಲ. ಪುರಾಣಗಳಲ್ಲಿ ಪ್ರಸ್ತಾಪವಾಗುವ ಗಜಾರಣ್ಯ ಎಂಬ ತಾಣಗಳಲ್ಲಿ ಈಗ ಕಾಡಾನೆಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಾಗಿದೆ. ಈಗಲೂ ಕಾಡಾನೆಗಳ ಸಾವಿನ ದರ ಏರಿಕೆಯಾಗುತ್ತಿದೆ.

ಕಾಡಾನೆಗಳ ಸಾವಿನ ಏರುಗತಿಯು ಕಾಡಾನೆ– ಮಾನವ ಸಂಘರ್ಷ ತೀವ್ರತರವಾಗಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ಈ ಸಂಘರ್ಷ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಸಾವಿನ ದರ ಮತ್ತಷ್ಟು ಏರಿಕೆಯಾಗುವ ಆತಂಕ ಮೂಡಿದೆ.

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳು ಈಗ ಹೊಸದಾಗಿ ಬಂದಿಲ್ಲ. ಪುರಾತನ ಕಾಲದಿಂದಲೂ ಕಾಡಾನೆಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಹಿಂದಿನ ಕಾಲದಲ್ಲಿ ಇಲ್ಲಿನ ಜನರು ಕಾಡಾನೆಯೊಂದಿಗೆ ಎಂದಿಗೂ ಸಂಘರ್ಷಕ್ಕೆ ಇಳಿದವರಲ್ಲ. ಹಾಗಾಗಿ, ಬೇರೆ ಜಿಲ್ಲೆಯಲ್ಲಿ ಬೇಟೆ ಮೊದಲಾದ ಕಾರಣಗಳಿಂದ ಕಾಡಾನೆಗಳ ಸಂಖ್ಯೆ ಕುಸಿತವಾದರೂ ಕೊಡಗು ಇನ್ನೂ ಸಹ ಗಜಾರಣ್ಯ ಎನಿಸಿದೆ. ಆದರೆ, ಹಿಂದೆ ದೇವರಕಾಡುಗಳು, ಕಾಡಿನಂತೆಯೆ ಇದ್ದ ಪೈಸಾರಿ ಜಾಗಗಳಲ್ಲಿ ಕಾಡಾನೆಗಳು ಬಂದು ಹೋಗುತ್ತಿದ್ದವು. ಆದರೆ, ಈಗ ಇವುಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದು ಸಹ ಕಾಡಾನೆ– ಮಾನವ ಸಂಘರ್ಷ ಹೆಚ್ಚಳಕ್ಕೆ ಕಾರಣ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಕಾಡಾನೆಗಳ ಕುರಿತು ಅತೀವವಾದ ಭೀತಿಗಿಂತ ಹೆಚ್ಚಾಗಿ ದ್ವೇಷ ಮೂಡಲಾರಂಭಿಸಿದೆ. ರೈತರು ವರ್ಷದಿಂದ ಬೆಳೆದ ಫಸಲು ಕೈಗೆ ಸಿಗುತ್ತಿಲ್ಲ. ಇತ್ತೀಚಿನ ವರ್ಷಗಳಿಂದ ಈಚೆಗೆ ನೂರಾರು ಸಂಖ್ಯೆಯಲ್ಲಿ ಜನರು ಗಾಯಗೊಳ್ಳುವಂತಾಗಿದೆ. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೀಗಾಗಿ, ಸಹಜವಾಗಿಯೇ ಕಾಡಾನೆ ಕುರಿತು ದ್ವೇಷ ಭಾವನೆ ಬೆಳೆಯುತ್ತಿದೆ.

ಕಾಡಾನೆ ಹಾವಳಿ ತಡೆಗೆ ಹಲವು ಕ್ರಮ

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಮಾತ್ರವಲ್ಲ ಇಲಾಖೆಯ ನೂರಾರು ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಜೀವದ ಹಂಗು ತೊರೆದು ನಿರಂತರವಾಗಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋಮವಾರವಷ್ಟೇ ಇಂಜಿಲಗೆರೆಯಲ್ಲಿದ್ದ 13 ಕಾಡಾನೆಗಳನ್ನು ಕಾಡಿಗಟ್ಟಲಾಗಿದೆ. ಕಾಡಾನೆ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ‘ಅರ್ಲಿ ವಾರ್ನಿಂಗ್ ಸಿಸ್ಟಂ’ ಅನ್ನು ಜಾರಿಗೊಳಿಸಲಾಗಿದೆ. ಇದರಡಿ 16 ಸಾವಿರ ಮಂದಿಯ ಮೊಬೈಲ್‌ಗೆ ಫೋನ್‌ಗೆ ನಿತ್ಯ  2 ಬಾರಿ ಕಾಡಾನೆಗಳ ಚಲನ ವಲನಗಳ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ರವಾನಿಸಲಾಗುತ್ತಿದೆ. ವಿರಾಜಪೇಟೆ ವಿಭಾಗವೊಂದರಲ್ಲೇ 121 ಜನರು 17 ತಂಡಗಳಾಗಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. 7 ವಾಹನಗಳು ನಿರಂತರವಾಗಿ ಗಸ್ತು ತಿರುಗುತ್ತಿವೆ. ರೈಲ್ವೆ ‌ಬ್ಯಾರಿಕೇಡ್ ಸೋಲಾರ್ ಫೆನ್ಸಿಂಗ್ ಆನೆ ಕಂದಕಗಳನ್ನು ನಿರ್ಮಿಸಿ ಈಗ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನೂ ಹಾಕಲಾಗುತ್ತಿದೆ. ಕಾಡಾನೆಗಳು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ 8 ಡಿಜಿಟಲ್ ಫಲಕಗಳನ್ನು ಅಳವಡಿಸಿ ಕಾಡಾನೆಗಳು ಸಂಚರಿಸುತ್ತಿರುವ ಪ್ರದೇಶಗಳ ಮಾಹಿತಿ ನೀಡಲಾಗುತ್ತಿದೆ. ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಕಾಡಾನೆಗಳು ನಾಡಿನತ್ತ ಬರುತ್ತಿವೆ.

ಕಾಡಾನೆ ಮೈಮೇಲೆಲ್ಲ ಗಾಯ!

ಫೆಬ್ರುವರಿಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಎಂಬಲ್ಲಿ ಸೆರೆ ಹಿಡಿಯಲಾದ ‘ಕಾಜೂರು ಕರ್ಣ’ ಎಂಬ ಹೆಸರಿನ 50 ವರ್ಷ ವಯಸ್ಸಿನ ಕಾಡಾನೆಯ ಮೈಯನ್ನು ನೋಡಿದ ಎಂತಹವರಿಗಾದರೂ ಕಣ್ಣಲ್ಲಿ ನೀರು ಬಾರದೇ ಇರುತ್ತಿರಲಿಲ್ಲ. ಮೈಮೇಲೆಲ್ಲ ಜನರು ಕಲ್ಲಿನಿಂದ ಹೊಡೆದ ಗಾಯದ ಗುರುತುಗಳಿದ್ದವು. ಅದರ ಕಾಲಿನಿಂದ 2 ಗುಂಡುಗಳನ್ನು ಹೊರತೆಗೆಯಲಾಗಿತ್ತು. ಆ ಗಾಯಗಳಿಂದ ಬಕೆಟ್‌ಗಟ್ಟಲೆ ಕೀವು ಹೊರ ಬಂದಿತ್ತು. ಇದು ಕೇವಲ ಒಂದು ಕಾಡಾನೆಯ ಸ್ಥಿತಿ ಅಲ್ಲ. ಕಾಡಿನಿಂದ ಹೊರಗೆ ಓಡಾಡುತ್ತಿರುವ ಬಹುತೇಕ ಕಾಡಾನೆಗಳು ಇಂತಹ ನರಕಯಾತನೆ ಅನುಭವಿಸುತ್ತಿವೆ. ಹಾಗಾಗಿಯೇ ಅವು ಇತ್ತೀಚಿನ ದಿನಗಳಲ್ಲಿ ಮನುಷ್ಯರನ್ನು ಕಂಡರೆ ಸಾಕು ಹೊಸಕಿ ಹಾಕುವಷ್ಟು ಕೋಪ ತಳೆಯುತ್ತಿವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.