ADVERTISEMENT

ಕೊಡಗು: ಜಿಲ್ಲೆಯಲ್ಲಿ ಮತ್ತೆ ಬಿರುಸಾದ ಮುಂಗಾರು

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಭಾಗಗಳಲ್ಲಿ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 6:13 IST
Last Updated 3 ಜುಲೈ 2025, 6:13 IST
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನಿಗರಕೊಪ್ಪ ಗ್ರಾಮ ಸಂಪರ್ಕ ಕುಸಿಯುತ್ತಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪಿಡಿಒ ಸ್ಮಿತಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನಿಗರಕೊಪ್ಪ ಗ್ರಾಮ ಸಂಪರ್ಕ ಕುಸಿಯುತ್ತಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪಿಡಿಒ ಸ್ಮಿತಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು   

ಮಡಿಕೇರಿ: ಕೊಡಗಿನಲ್ಲಿ ಬುಧವಾರದಿಂದ ಮತ್ತೆ ಮುಂಗಾರು ಬಿರುಸಾಗಿದ್ದು, ನಗರ ಸೇರಿದಂತೆ ಹಲವೆಡೆ ಮಳೆ, ಗಾಳಿ ಆರ್ಭಟಿಸುತ್ತಿದೆ. ಜುಲೈ 3ರಂದೂ ಭಾರಿ ಮಳೆ ಸುರಿಯುವ ಮುನ್ನಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಿಸಿದೆ.

ಸೋಮವಾರಪೇಟೆ ಮತ್ತು ವಿರಾಜಪೇಟೆ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಮಡಿಕೇರಿಯಲ್ಲಿ ದಿನವಿಡೀ ಬಿರುಸಿನ ಗಾಳಿಯೊಂದಿಗೆ ಮಳೆಯಾಯಿತು. ಕೊಡೆ ಹಿಡಿದು ನಡೆಯಲಾರದಷ್ಟು ವೇಗದಲ್ಲಿ ಗಾಳಿ ಬೀಸುತ್ತಿದೆ. ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಲೇ ಶಾಲೆ, ಶಾಲೆಯಿಂದ ಮನೆಗೆ ತೆರಳಿದರು.

ಶೀತಗಾಳಿ ಬಿರುಸಾಗಿರುವುದರಿಂದ ಚಳಿ ಮತ್ತಷ್ಟು ಹೆಚ್ಚಿದೆ. ಜನರು ನಡುಗುವಂತಹ ವಾತಾವರಣ ಸೃಷ್ಟಿಯಾಗಿದೆ. ಮಡಿಕೇರಿ ನಗರದಲ್ಲಿ ನಗರಸಭೆ ವತಿಯಿಂದ ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದ ಮರದ ಕೊಂಬೆಗಳನ್ನು ಕತ್ತರಿಸಲಾಯಿತು.

ADVERTISEMENT

ಸೋಮವಾರಪೇಟೆಯಲ್ಲಿ ಬಿಡುವಿಲ್ಲದ ಮಳೆ

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮತ್ತೊಮ್ಮೆ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ಬಿಡುವಿಲ್ಲದೆ ಮಳೆ ಸುರಿಯುತ್ತಿದೆ.

ಎರಡು ದಿವಸ ಮಳೆ ಬಿಡುವು ನೀಡಿದ್ದರಿಂದ ಕೃಷಿ ಚಟುವಟಿಕೆಯನ್ನು ಬಿರುಸುಗೊಳಿಸಿದ್ದರು. ಬುಧವಾರ ಸುರಿದ ನಿರಂತರ ಮಳೆಯಿಂದ ಕಾಫಿ ತೋಟಗಳಲ್ಲಿ ಯಾವುದೇ ಕೆಲಸಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ.

‘ಮಳೆ ಒಂದೆರಡು ವಾರ ಬಿಡುವು ನೀಡಿದಲ್ಲಿ ಕೆಲಸಗಳು ತಕ್ಕ ಮಟ್ಟಿಗೆ ಮುಗಿಯುತ್ತಿದ್ದವು. ಮಳೆ ಬೀಳುತ್ತಿರುವುದರಿಂದ ರಾಸಾಯನಿಕ ಗೊಬ್ಬರ ಹಾಕುವುದು, ಗಿಡಗಳಿಗೆ ಸ್ಪ್ರೇ ಮಾಡುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಕೆಲವೆಡೆ ಮರದ ರೆಂಬೆಗಳನ್ನು ಕತ್ತರಿಸಲು ಆಗಿಲ್ಲ’ ಎಂದು ಬಿಳಿಗೇರಿ ಗ್ರಾಮದ ಕೃಷಿಕ ಮೋಹನ್ ಬೋಪಣ್ಣ ತಿಳಿಸಿದರು.

ಭಾರಿ ಗಾಳಿ ಮಳೆಗೆ ನಾಲ್ಕು ದಿನಗಳ ಹಿಂದೆ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನಿಗರಕೊಪ್ಪ ಗ್ರಾಮ ಸಂಪರ್ಕ ಕುಸಿಯುತ್ತಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪಿಡಿಒ ಸ್ಮಿತಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘದಿಂದ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ರೈತರು ತೆಗೆದುಕೊಂಡು ಹೋಗುತ್ತಿರುವುದು

ವಿರಾಜಪೇಟೆಯಲ್ಲಿ ಉತ್ತಮ ಮಳೆ

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಎರಡ್ಮೂರು ದಿನಗಳಿಂದ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡಿತ್ತು. ಆದರೆ ಬುಧವಾರ ಮುಂಜಾನೆಯಿಂದಲೇ ವ್ಯಾಪಕವಾಗಿ ಮಳೆ ಸುರಿಯಿತು. ಬೆಳಿಗ್ಗೆ ಧಾರಾಕಾರವಾಗಿ ಸುರಿದ ಮಳೆಯ ಆರ್ಭಟವು ಮಧ್ಯಾಹ್ನದ ಬಳಿಕ ಕೊಂಚ ಇಳಿಮುಖಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.