ADVERTISEMENT

ಕರುಳಿನ ಕೂಗು | ತಾಯಿ ಕರೆದೊಯ್ಯಲು ಸಾವಿರಾರು ಕಿಮೀ ದೂರದಿಂದ ಬಂದ ಪುತ್ರ

ಎಂಟು ತಿಂಗಳ ಬಳಿಕ ಒಂದಾದ ತಾಯಿ– ಮಗ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 14:08 IST
Last Updated 19 ಫೆಬ್ರುವರಿ 2020, 14:08 IST
ಪುತ್ರನ ಕಂಡು ಮುದ್ದಾಡಿದ ತಾಯಿ ಮುಕ್ಕು
ಪುತ್ರನ ಕಂಡು ಮುದ್ದಾಡಿದ ತಾಯಿ ಮುಕ್ಕು   

ಮಡಿಕೇರಿ: ಉತ್ತರ ಪ್ರದೇಶದಲ್ಲಿ ಜಾತ್ರೆಗೆ ಹೋಗಿ ತಪ್ಪಿಸಿಕೊಂಡು ಮಡಿಕೇರಿಗೆ ಬಂದಿದ್ದ ತಾಯಿಯೊಬ್ಬರು, ಮತ್ತೆ ಪುತ್ರನ ಸೇರಿದ ಭಾವನಾತ್ಮಕ ಸನ್ನಿವೇಶಕ್ಕೆ ಬುಧವಾರ ‘ಮಂಜಿನ ನಗರಿ’ ಮಡಿಕೇರಿ ಸಾಕ್ಷಿಯಾಯಿತು. ಮಗನನ್ನು ಕಂಡ ತಾಯಿ ಬಿಗಿದಪ್ಪಿ ಮುದ್ದಾಡಿದರೆ, ತಾಯಿಯ ಮಡಿಲು ಸೇರಿದ ತೃಪ್ತಿ ಮಗನದ್ದಾಯಿತು. ಇಬ್ಬರ ಕಣ್ಣಾಲಿಗಳೂ ತೇವಗೊಂಡವು. ಕರುಳ ಬಳ್ಳಿಯನ್ನು ಒಂದುಗೂಡಿಸಿದ ಸಂತೃಪ್ತಿ ಸ್ಥಳೀಯರದ್ದು.

ಇಷ್ಟು ದಿನ ತಾಯಿ ದೂರವಾದ ದುಃಖದಲ್ಲಿ ಪುತ್ರ, ಹೆತ್ತ ಪುತ್ರನಿಲ್ಲದ ಸಂಕಟದಲ್ಲಿ ತಾಯಿ ದಿನದೂಡುತ್ತಿದ್ದರು. ತಾಯಿ ಮಡಿಕೇರಿಯಲ್ಲಿ ಇದ್ದಾರೆ ಎಂಬ ಮಾಹಿತಿ ತಿಳಿದ ಕೂಡಲೇ ಸಾವಿರಾರು ಕಿಲೋಮೀಟರ್‌ ದೂರದಿಂದ ತಾಯಿ ಹುಡುಕಿಕೊಂಡು ಪುತ್ರ ಬಂದಿದ್ದರು.

ಏನಾಗಿತ್ತು?: ಉತ್ತರ ಪ್ರದೇಶದ ಡಾಣಿಣ್‌ಪುರ್‌ ಗ್ರಾಮದ ವೃದ್ಧೆ ಮುಕ್ಕು ಎಂಬುವರು ಎಂಟು ತಿಂಗಳ ಹಿಂದೆ ಜಾತ್ರೆಗೆಂದು ಮನೆಯಿಂದ ತೆರಳಿದ್ದರು. ಜಾತ್ರೆ ಮುಗಿಸಿ ಮನೆಗೆ ಹೋಗುವಾಗ ಬೇರೊಂದು ರೈಲನ್ನೇರಿ ಆಕಸ್ಮಿಕವಾಗಿ ಮೈಸೂರಿಗೆ ಬಂದುಬಟ್ಟಿದ್ದರು.

ADVERTISEMENT

ಅಲ್ಲಿಂದ ಮಡಿಕೇರಿಗೆ ಬಂದಿದ್ದ ಮುಕ್ಕು, ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆಟೊ ನಿಲ್ದಾಣ ಹಾಗೂ ಕಾಲೇಜುಗಳ ಬಳಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದರು. ಇದನ್ನು ನೋಡಿದ ‘ತನಲ್‌’ ವೃದ್ಧಾಶ್ರಮದ ಮಹಮ್ಮದ್‌ ಹಾಗೂ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ಪ್ರೊ.ರಂಗಪ್ಪ ಅವರು ವೃದ್ಧಾಶ್ರಮಕ್ಕೆ ಸೇರಿಸಿದ್ದರು.

ಬಳಿಕ ಅವರ ಕುಟುಂಬಸ್ಥರ ವಿಳಾಸ ಹುಡುಕಲು ಶ್ರಮಿಸಿದ್ದರು. ಮುಕ್ಕು ಅವರಿಗೆ ಪುತ್ರನ ಹೆಸರು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಕೊನೆಗೂ ವಿಳಾಸ ಪತ್ತೆ ಮಾಡಿದ ಇಬ್ಬರು, ತಾಯಿ ಹಾಗೂ ಮಗನನ್ನು ಒಂದುಗೂಡಿಸಲು ಯಶಸ್ವಿ ಆಗಿದ್ದಾರೆ. ಗುರುವಾರ ಇಬ್ಬರು ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ.

ಮಗನನ್ನು ಕಂಡು ಕಣ್ಣೀರಿಟ್ಟ ತಾಯಿ
ಅಮ್ಮ ಸಿಕ್ಕ ಖುಷಿಯಲ್ಲಿ ಕಣ್ಣೀರಿಟ್ಟ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.