ADVERTISEMENT

ಮಡಿಕೇರಿ | ಸಲಹೆ ಸ್ವೀಕರಿಸಿ, ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ಸಚಿವ ಭೋಸರಾಜು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:15 IST
Last Updated 16 ಸೆಪ್ಟೆಂಬರ್ 2025, 4:15 IST
ಭಾಗಮಂಡಲದಲ್ಲಿ ಸೋಮವಾರ ನಡೆದ ಕಾವೇರಿ ಪವಿತ್ರ ತೀರ್ಥೋದ್ಭವ ಜಾತ್ರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಲಹೆಗಳನ್ನು ನೀಡಿದರು
ಭಾಗಮಂಡಲದಲ್ಲಿ ಸೋಮವಾರ ನಡೆದ ಕಾವೇರಿ ಪವಿತ್ರ ತೀರ್ಥೋದ್ಭವ ಜಾತ್ರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಲಹೆಗಳನ್ನು ನೀಡಿದರು   

ಮಡಿಕೇರಿ: ‘ಅ. 17ರಂದು ಹಗಲು ವೇಳೆಯಲ್ಲಿ ತೀರ್ಥೋದ್ಭವ ಆಗುವುದರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ.‌ ಸಲಹೆಗಳನ್ನು ಸ್ವೀಕರಿಸಿ, ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಿ’ ಎಂದು ಸಚಿವ ಎನ್.ಎಸ್.ಭೋಸರಾಜು ನಿರ್ದೇಶನ ನೀಡಿದರು.

ಭಾಗಮಂಡಲದಲ್ಲಿ ಸೋಮವಾರ ನಡೆದ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆ ಸಂಬಂಧದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಬಹುತೇಕ ಮಂದಿ ತೀರ್ಥೋದ್ಭವದ ದಿನ ಮದ್ಯ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ‘ಅ. 17ರಂದು ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವ ನಡೆಯಲಿರುವುದರಿಂದ ಅಂದು ಕೊಡಗು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಕುರಿತು ಚಿಂತಿಸಲಾಗುವುದು’ ಎಂದು ತಿಳಿಸಿದರು.

ಇದುವರೆಗೂ ಭಾಗಮಂಡಲದಿಂದ ತಲಕಾವೇರಿಗೆ 15 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ 25ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ದೇಗುಲಗಳಿಗೆ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡುವಂತೆಯೂ ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಪೊನ್ನಣ್ಣ ಸಕರಾತ್ಮಕವಾಗಿ ಸ್ಪಂದಿಸಿದರು.

ಉಳಿದಂತೆ, ಭಾಗಮಂಡಲ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಭಕ್ತಾದಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಹೆಚ್ಚಿನ ನಿಗಾ ವಹಿಸಬೇಕು ನಿರ್ದೇಶನ ನೀಡಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಮಾತನಾಡಿ, ತ್ರಿವೇಣಿ ಸಂಗಮದಲ್ಲಿ ಹೂಳೆತ್ತಲು ಕಳೆದ ಬಾರಿಯಂತೆ ₹ 2 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ದೇಗುಲದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ‌ ಆರ್.ಐಶ್ವರ್ಯ, ಉಪವಿಭಾಗಾಧಿಕಾರಿ ನಿತೀಶ್, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶೇಖರ್, ತಹಶೀಲ್ದಾರ್ ಶ್ರೀಧರ್ ಭಾಗವಹಿಸಿದ್ದರು.

ಸಭೆಯಲ್ಲಿ ಕೇಳಿ ಬಂದ ಒತ್ತಾಯಗಳು

  • ಮದ್ಯ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಲು ಸೂಚನೆ

  • ಮಡಿಕೇರಿ-ಭಾಗಮಂಡಲ ರಸ್ತೆ ದುರಸ್ತಿಗೆ ಒತ್ತಾಯ

  • ಮಳೆ ಕಡಿಮೆಯಾದ ನಂತರ ಗುಣಮಟ್ಟದ ರಸ್ತೆ ನಿರ್ಮಾಣದ ಭರವಸೆ

  • ರಸ್ತೆಯನ್ನು ಜಾತ್ರೆಗೆ ಸೀಮಿತವಾಗಿ ಸರಿಪಡಿಸುವ ಕೆಲಸ ಆಗುತ್ತಿದೆ ಎಂಬ ಆರೋಪ

  • ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಎಸ್.ಪಿ ಒಪ್ಪಿಗೆ

  • ವ್ಯವಸ್ಥಿತವಾದ ಪಾದಯಾತ್ರೆಗೆ ಅವಕಾಶ

  • ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಒತ್ತಾಯ

  • ಸ್ಥಳೀಯ ಕಲಾತಂಡಕ್ಕೆ ಕಲಾವಿದರಿಗೆ ಅವಕಾಶ ನೀಡಲು ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.