ADVERTISEMENT

ಸೀಮೆಎಣ್ಣೆ ವಿತರಣೆ ಸ್ಥಗಿತ; ಪರದಾಟ

ಮಕ್ಕಳಿಗೆ ಓದಲು ಮೋಂಬತ್ತಿಯೇ ಗತಿ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:42 IST
Last Updated 12 ಡಿಸೆಂಬರ್ 2022, 6:42 IST
ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ಗದ್ದೆ ಹಾಡಿಯ ಮಕ್ಕಳು ಮೋಂಬತ್ತಿ ಬೆಳಕಿನಲ್ಲಿ ಓದುತ್ತಿರುವ ದೃಶ್ಯ ಕಂಡು ಬಂತು
ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ಗದ್ದೆ ಹಾಡಿಯ ಮಕ್ಕಳು ಮೋಂಬತ್ತಿ ಬೆಳಕಿನಲ್ಲಿ ಓದುತ್ತಿರುವ ದೃಶ್ಯ ಕಂಡು ಬಂತು   

ಮಡಿಕೇರಿ: ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಸೀಮೆಎಣ್ಣೆ ಮುಕ್ತ ದೇಶವನ್ನಾಗಿ ಮಾಡುವ ಸದುದ್ದೇಶದಿಂದ ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ಸರಬರಾಜನ್ನು ಸ್ಥಗಿತಗೊಳಿಸಿದ ನಂತರ ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶದ ಮಕ್ಕಳ ಕಲಿಕೆಗೆ ಭಾರಿ ಪೆಟ್ಟು ಬಿದ್ದಿದೆ. ವಿದ್ಯುತ್ ಸಂಪರ್ಕ ಇಲ್ಲದ ಕುಟುಂಬಗಳು ಮಾತ್ರವಲ್ಲ ಸಂಪರ್ಕ ಇರುವ ಕುಟುಂಬಗಳಿಗೂ ರಾತ್ರಿ ವೇಳೆ ಬೆಳಕು ಪಡೆಯುವುದು ದುಬಾರಿಯಾಗಿ ಪರಿಣಮಿಸುತ್ತಿದೆ.

ಸುಮಾರು ಒಂದು ವರ್ಷಗಳಿಂದ ಪಡಿತರ ವ್ಯವಸ್ಥೆಯಲ್ಲಿ ಸೀಮೆಎಣ್ಣೆ ಸರಬರಾಜನ್ನು ನಿಲ್ಲಿಸಲಾಯಿತು. ಸೀಮೆಎಣ್ಣೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾದ ‘ಉಜ್ವಲ’, ‘ಬೆಳಕು’ ಯೋಜನೆಗಳು ಜಿಲ್ಲೆಯಲ್ಲಿ ನಿರೀಕ್ಷಿತ ಫಲ ನೀಡಿಲ್ಲ. ಇದರ ಮಧ್ಯೆಯೇ ಸೀಮೆಎಣ್ಣೆಯ ಸರಬರಾಜು ನಿಲ್ಲಿಸಿರುವುದು ಬಡವರಿಗೆ ಗದಾಪ್ರಹಾರ ಎನಿಸಿದೆ.

ಜಿಲ್ಲೆಯಲ್ಲಿ 83 ಕುಟುಂಬಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಸೆಸ್ಕ್ ತನ್ನ ಅಧಿಕೃತ ವರದಿಯಲ್ಲಿ ಹೇಳಿದೆ. ಇವರಿಗಾಗಿ ಸೌರಫಲಕಗಳನ್ನು ನೀಡಬೇಕು ಎನ್ನುವ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿ ದೂಳು ತಿನ್ನುತ್ತಿದೆ. ಈ ಕುಟುಂಬಗಳು ನಿರಂತರವಾಗಿ ಕತ್ತಲಿನಲ್ಲೇ ರಾತ್ರಿಗಳನ್ನು ದೂಡುವಂತಾಗಿದೆ.

ADVERTISEMENT

ವಿದ್ಯುತ್ ಸಂಪರ್ಕ ಇರುವ ಗುಡ್ಡಗಾಡು ಪ್ರದೇಶದ ಸಾವಿರಾರು ಕುಟುಂಬಗಳಿಗೂ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಇಲ್ಲ. ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದರೆ, ವಿದ್ಯುತ್ ಲೈನ್‌ಗೆ ಹಾನಿಯಾದರೆ ವಾರಗಟ್ಟಲೆ ವಿದ್ಯುತ್ ಪೂರೈಕೆ ಆಗುವುದೇ ಇಲ್ಲ. ಇಂತಹ ಹೊತ್ತಿನಲ್ಲಿ ಬೆಳಕು ನೀಡುತ್ತಿದ್ದ ಸೀಮೆಎಣ್ಣೆ ದೀಪಗಳು ಇದೀಗ ಮೂಲೆ ಸೇರುತ್ತಿವೆ. ನಿತ್ಯವೂ ಹಣ ವ್ಯಯಿಸಿ ಮೋಂಬತ್ತಿಯಿಂದಲೇ ಗುಡಿಸಲುಗಳನ್ನು ಬೆಳಗಿಸಬೇಕಾದ ಅನಿವಾರ್ಯತೆಗೆ ಬಡವರು ಸಿಲುಕಿದ್ದಾರೆ.

ಆರಂಭದಲ್ಲಿ ಅಲ್ಲಲ್ಲಿ ಸೀಮೆಎಣ್ಣೆ ಸ್ವಲ್ಪ ಹೆಚ್ಚಿನ ದರಕ್ಕೆ ಸಿಗುತ್ತಿತ್ತು. ಈಗ ಅದೂ ಸಿಗುತ್ತಿಲ್ಲ. ಕೆಲವರು ಡೀಸೆಲ್‌ನ್ನೇ ಬಳಕೆ ಮಾಡುವಂತಹ ಅಪಾಯಕಾರಿ ಸನ್ನಿವೇಶಕ್ಕೂ ಇಳಿದಿದ್ದಾರೆ. ಮತ್ತೆ ಹಲವರು ಮೋಂಬತ್ತಿ ಖರೀದಿಸುತ್ತಿದ್ದಾರೆ. ಇದು ತೀರಾ ದುಬಾರಿ ಎನಿಸಿದೆ ಎಂದು ತಿತಿಮತಿ ವಾಸಿ ತಿಮ್ಮ ಹೇಳುತ್ತಾರೆ.

ಎಲ್ಲರಿಗೂ ವಿದ್ಯುತ್ ಸಂಪರ್ಕ, ಸಮರ್ಪಕವಾದ ವಿದ್ಯುತ್ ಸರಬರಾಜು ವ್ಯವಸ್ಥೆ ರೂಪಿಸದೇ ಏಕಾಏಕಿ ಸೀಮೆಎಣ್ಣೆ ಪೂರೈಕೆಯನ್ನು ನಿಲ್ಲಿಸಿರುವುದು ಸರಿಯಲ್ಲ ಎಂಬ ಆಕ್ರೋಶ ಗುಡ್ಡಗಾಡು ಪ್ರದೇಶದ ಜನರಲ್ಲಿದೆ. ಪ್ರತಿ ಗ್ರಾಮಸಭೆಗಳು, ತಾಲ್ಲೂಕು ಪಂಚಾಯಿತಿ ಸಭೆಗಳು, ಜಿಲ್ಲಾಧಿಕಾರಿ, ತಹಶೀಲ್ದಾರರ ಗ್ರಾಮವಾಸ್ತವ್ಯ ಮಾತ್ರವಲ್ಲ, ಸಂಸದ ಪ್ರತಾಪಸಿಂಹ ನಡೆಸುವ ‘ದಿಶಾ’ ಸಮಿತಿ ಸಭೆಗಳಲ್ಲೂ ಸಮಸ್ಯೆ ಪ್ರಸ್ತಾಪವಾದರೂ ಜನಪ್ರತಿನಿಧಿಗಳು ಮಾತ್ರವಲ್ಲ ಅಧಿಕಾರಿಗಳೂ ಮೌನ ತಾಳಿದ್ದಾರೆ.

ಮಲಗುವ ಸ್ಥಿತಿಯಲ್ಲಿ ಹಾಡಿಗಳು

‌ಗೋಣಿಕೊಪ್ಪಲು: ‘ನಾನು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವಾಗ ಪ್ರತಿ ಸಭೆಯಲ್ಲಿಯೂ ಹಾಡಿ ವಿದ್ಯುತ್ ಮತ್ತು ರಸ್ತೆ ಬಗ್ಗೆಯೇ ಚರ್ಚಿಸುತ್ತಿದ್ದೆ. ನನಗೆ ವಿರೋಧ ಪಕ್ಷದ ಸದಸ್ಯರೂ ಬೆಂಬಲ ಸೂಚಿಸುತ್ತಿದ್ದರು. ಸಭೆಯಲ್ಲಿ ಅಧಿಕಾರಿಗಳು ಕೂಡಲೆ ಒದಗಿಸಿಕೊಡಲಾಗುವುದು ಎಂದು ಹೇಳಿ ಬಂದು ನೋಡಿ ಹೋಗುತ್ತಿದ್ದರೆ ಹೊರತೆ ಸೌಲಭ್ಯ ನೀಡಲಿಲ್ಲ’ ಎಂದು ತಿತಿಮತಿ ಚೇಣಿಹಡ್ಲು ಹಾಡಿ ನಿವಾಸಿ ಪಿ.ಆರ್.ಪಂಕಜಾ ಬೇಸರ ವ್ಯಕ್ತಪಡಿಸುತ್ತಾರೆ.

ಜಗತ್ತು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದರೂ ಕೊಡಗಿನ ಹಾಡಿಗಳು ಮಾತ್ರ ಇನ್ನೂ ಮಲಗುವಸ್ಥಿತಿಯಲ್ಲೇ ಇವೆ. ಇದು ನಮ್ಮ ದುರದೃಷ್ಟ.

ಮಕ್ಕಳಿಗೆ ಓದಲು, ಬರೆಯಲು ಬೆಳಕಿಲ್ಲ. ಮೋಂಬತ್ತಿ ಇಲ್ಲವೇ ಕಟ್ಟಿಗೆ ಕೊಳ್ಳಿಯ ಬೆಳಕಿನಲ್ಲಿ ಹೋಂ ವರ್ಕ್ ಮಾಡಿಸಬೇಕು. ಚಿಕ್ಕ ಮಕ್ಕಳಾದರೆ ಹೇಗೋ ಮಾಡಿಸಬಹುದು. ದೊಡ್ಡ ಮಕ್ಕಳು ಕತ್ತಲಾಗುವುದನ್ನೇ ಕಾಯುತ್ತಾರೆ. ವಿದ್ಯುತ್ ಇಲ್ಲ ಎಂದು ಕೂಡಲೆ ಮಲಗಿ ಬಿಡುತ್ತಾರೆ. ಶಾಲೆಯಲ್ಲಿ ಹೋಂ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಹೊಡೆಯುತ್ತಾರೆ ಎಂಬ ಭಯದಿಂದ ಶಾಲೆಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ. ಹೀಗಾಗಿ ಬಹಳಷ್ಟು ಮಕ್ಕಳ ಓದು ಪ್ರಾಥಮಿಕ ಶಾಲೆಗೆ ನಿಂತು ಹೋಗಿದೆ ಎಂದು ಅವರು ಹೇಳುತ್ತಾರೆ.

ತುಕ್ಕು ಹಿಡಿದ ಸೋಲಾರ್

ಗೋಣಿಕೊಪ್ಪಲು: ಅರಣ್ಯ ಇಲಾಖೆ ಮತ್ತು ಐಟಿಡಿಪಿ ಇಲಾಖೆಯವರು ಬೆಳಕಿಗಾಗಿ ನೀಡುವ ಸೋಲಾರ್ ಎರಡು ಅಥವಾ ಮೂರು ವರ್ಷ ಬಾಳಿಕೆ ಬರುತ್ತವೆ. ವರ್ಷ ಕಳೆದಂತೆ ಶಕ್ತಿ ಕಳೆದುಕೊಂಡು ಬೆಳಕು ನೀಡುವುದನ್ನೇ ನಿಲ್ಲಿಸುತ್ತವೆ. ರಸ್ತೆಯಲ್ಲಿಯೂ ತುಕ್ಕು ಹಿಡಿದ ಸೋಲಾರ್‌ ದೀ‍ಗಳೇ ನಿಂತಿವೆ. ಮೊಬೈಲ್ ಚಾರ್ಜ್ ಮಾಡಲೂ ಕರೆಂಟ್ ಇಲ್ಲ. ಇತೀಚೆಗೆ ಎಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ನಮಗೆ ಯಾರಾದರೂ ಮೃತಪಟ್ಟರು ತಿಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ನಾಗರಹೊಳೆ ಹಾಡಿಯರಾಜ್ಯ ಆದಿವಾಸಿ ಸಂಘದ ಜಿಲ್ಲಾಧ್ಯಕ್ಷ ತಿಮ್ಮ ಹೇಳುತ್ತಾರೆ.

ನಮ್ಮ ಮನೆಗಳಿಗೆ ಪ್ಲಾಸ್ಟಿಕ್ ಹೊದಿಕೆ, ಸೋಲಾರ್ ದೀಪ ಒಂದೆರಡು ತಿಂಗಳ ಕಾಲ ಸಂಬಾಳಿಸುವ ಸೌಲಭ್ಯ ಬೇಡ. ಇವುಗಳ ಬದಲು ಕಾಂಕ್ರೀಟ್ ಅಥವಾ ಹೆಂಚಿನ ಚಾವಣಿ, ವಿದ್ಯುತ್ ದೀಪ ಮೊದಲಾದ ಶಾಶ್ವತವಾದ ಸೌಲಭ್ಯಗಳು ಬೇಕಾಗಿವೆ ಎಂದು ಒತ್ತಾಯಿಸುತ್ತಾರೆ.

101 ಕಿಲೋ ಲೀಟರ್ ಸೀಮೆ ಎಣ್ಣೆಗೆ ಪ್ರಸ್ತಾವ

ಕೊಡಗು ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಈಗಾಗಲೇ 101 ಲೀಟರ್ ಸೀಮೆಎಣ್ಣೆ ಬೇಕು ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಮೂಲಕವೂ ಮತ್ತೊಂದು ಪ್ರಸ್ತಾಪ ಹೋಗಿದೆ. ಆದರೆ, ಅದರ ಫಲಶ್ರುತಿ ಮಾತ್ರ ಶೂನ್ಯ.

ಮಳೆಗಾಲದಲ್ಲಿ ಸೀಮೆಎಣ್ಣೆ ಬೇಕು

ಸೋಮವಾರಪೇಟೆ: ತಾಲ್ಲೂಕು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಹಲವು ಗ್ರಾಮಗಳು ಮಳೆಗಾಲದಲ್ಲಿ ದ್ವೀಪದಂತಾಗುವುದರಿಂದ ಜನ ಸಂಪರ್ಕ ಕಡಿದುಕೊಳ್ಳುತ್ತವೆ.

ನಿರಂತರ ಮೂರು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿಯಾಗುವುದರಿಂದ ಈ ಭಾಗಗಳಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಇರುವುದಿಲ್ಲ. ಮೊದಲು ತಿಂಗಳಿಗೊಮ್ಮೆ ಸೀಮೆಎಣ್ಣೆಯನ್ನು ಸರ್ಕಾರ ನೀಡುತ್ತಿತ್ತು. ಆದರೆ, ಕಳೆದ ಕೆಲವು ಕಾಲದಿಂದ ಅದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಮಳೆಗಾಲದಲ್ಲಂತು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಓದಲು ಸಹ ಕಷ್ಟಪಡುವಂತಾಗಿದೆ. ಇದರ ಬಗ್ಗೆ ಸಂಬಂಧಿಸಿದ ಬಗ್ಗೆ ಹಲವು ಭಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮೀಣ ಜನರ ದೂರಾಗಿದೆ.

ಮಳೆಗಾಲದಲ್ಲಿ ಸೀಮೆಎಣ್ಣೆ ಅಗತ್ಯ

ಬೇಸಿಗೆ ಕಾಲದಲ್ಲಿ ನಮಗೆ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ. ಆದರೆ, ಮಳೆಗಾಲದಲ್ಲಿ ಮಾತ್ರ ಸೀಮೆಎಣ್ಣೆ ಅಗತ್ಯವಾಗಿದೆ. ವಿದ್ಯುತ್ ಇಲ್ಲದಿರುವುದರಿಂದ ಮೋಂಬತ್ತಿ ಹತ್ತಿಸಿಕೊಂಡು ರಾತ್ರಿ ಕಳೆಯಬೇಕಾಗಿದೆ. ಕೆಲವು ವರ್ಷಗಳಿಂದ ಸರ್ಕಾರ ಮನೆ ಮನೆಗೆ ಅಡುಗೆ ಅನಿಲ ನೀಡಿದೆ. ಸೀಮೆಎಣ್ಣೆ ಕೇಳಿದರೆ, ನಿಮ್ಮ ಮನೆಯಲ್ಲಿ ಗ್ಯಾಸ್ ಇದೆ. ಸೀಮೆಎಣ್ನೆ ಸಿಗುವುದಿಲ್ಲ ಎಂದು ಹೇಳುತ್ತಾರೆ. ಗ್ಯಾಸ್‌ನಿಂದ ದೀಪ ಹತ್ತಿಸಲು ಸಾಧ್ಯವಿಲ್ಲ. ಕೂಡಲೇ ನಮಗೆ ಸೀಮೆಎಣ್ಣೆಯನ್ನು ವಿತರಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು

ವಸಂತ,ಸೂಳೆಬಾವಿ ಹಾಡಿಯ

ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ

ಸೀಮೆ ಎಣ್ಣೆ ಮತ್ತು ಅಕ್ಕಿ ನೀಡಲು ನ್ಯಾಯಬೆಲೆ ಅಂಗಡಿಗೆ ಹೋದಲ್ಲಿ ಯಾವಾಗಲೂ ಸರ್ವರ್ ಪ್ರಾಬ್ಲಮ್ ಎಂದು ಸಿಬ್ಬಂದಿ ಹೇಳುತ್ತಾರೆ. ಮೂರು ನಾಲ್ಕು ದಿನಗಳು ಹೋದರೂ, ಅಕ್ಕಿ ಸೀಮೆ ಎಣ್ಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ನಮಗೆ ಸೀಮೆಎಣ್ಣೆಯ ಅವಶ್ಯಕತೆ ಹೆಚ್ಚಾಗಿದೆ. ಆದರೆ, ನಮಗೆ ಸಿಗುತ್ತಿಲ್ಲ. ಸರಿಯಾದ ವ್ಯವಸ್ಥೆಯಡಿ ಪಡಿತರ ನೀಡಲು ಸಂಬಂದಿಸಿದ ಇಲಾಖೆಯವರು ಮುಂದಾಗಬೇಕು.

ಶ್ಯಾಮ್, ಸಜ್ಜಳ್ಳಿ ಹಾಡಿ.

ಮಕ್ಕಳಿಗೆ ಓದಲು ಬೆಳಕು ನೀಡಿ

ನಮಗೆ ಸಮರ್ಪಕವಾದ ವಿದ್ಯುತ್ ಸಂಪರ್ಕ ಬೇಕು. ಅದು ಸಿಗುವವರೆಗೂ ದೀಪ ಹೊತ್ತಿಸಲು ಸೀಮೆ ಎಣ್ಣೆ ಬೇಕು. ಮೋಂಬತ್ತಿ ಹಾಗೂ ದೀಪದ ಎಣ್ಣೆ ದುಬಾರಿಯಾಗಿದೆ. ನಮ್ಮ ಕೈಗೆಟುಕುವ ರೀತಿಯಲ್ಲಿ ನಮ್ಮ ಮಕ್ಕಳಿಗೆ ಓದಲು ಬೆಳಕು ನೀಡಿ.

ತಿತಿಮತಿ ಚೇಣಿಹಡ್ಲು ಹಾಡಿ ನಿವಾಸಿ ಪಿ.ಆರ್.ಪಂಕಜಾ

ಕಾಡಂಚಿನ ಜನರ ಕಷ್ಟ ಕೇಳುವವರಾರು?

ಸೀಮೆಎಣ್ಣೆ ಒಂದೇ ಅಲ್ಲ ಹಾಡಿಗಳು ಹಾಗೂ ಕಾಡಂಚಿನ ಜನರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ನಾವು ಆದಿವಾಸಿಗಳು ಈಗ ರಾತ್ರಿ ವೇಳೆ ಬೆಳಕಿಲ್ಲದೇ ಇನ್ನಷ್ಟು ಹಿಂದುಳಿಯುತ್ತಿದ್ದೇವೆ. ಜನಪ್ರತಿನಿಧಿಗಳು ನಮ್ಮ ಮಕ್ಕಳ ಓದಿಗೆ ಶಾಶ್ವತ ಸೌಕರ್ಯ ಕಲ್ಪಿಸಬೇಕು.

ಕುಡಿಯರ ಮುತ್ತಣ್ಣ, ಹೋರಾಟಗಾರ.

ನಿರ್ವಹಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ, ಡಿ.ಪಿ.ಲೋಕೇಶ್, ಸಿ.ಎಸ್.ಸುರೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.