ಮಡಿಕೇರಿ: ನಗರದ ಐತಿಹಾಸಿಕ ಕೋಟೆ ಹಾಗೂ ಜಿಲ್ಲೆಯ ಐನ್‌ಮನೆಗಳ ಅಭಿವೃದ್ಧಿ, ಹಳೆಯ ದೇಗುಲಗಳ ಪುನರುಜ್ಜೀವನ, ಕೊಡಗಿನ ಸಂಸ್ಕೃತಿಯ ಉಳಿವು, ಪ್ರವಾಸಿತಾಣಗಳಿಗೆ ಶಕ್ತಿ ತುಂಬುವುದು, ದೊಡ್ಡ ಅಭಿವೃದ್ಧಿಯ ಬದಲಿಗೆ ಕೊಡಗನ್ನು ಕೊಡಗಾಗಿಯೇ ಉಳಿಸುವ ಅನೇಕ ಹೊಸ ಹೊಳಹುಗಳು ಇಲ್ಲಿ ಶನಿವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಂಡು ಬಂದವು.
ಕೊಡಗು ಪತ್ರಕರ್ತರ ಸಂಘದಿಂದ ಇಲ್ಲಿ ನಡೆದ ‘ಕೊಡಗು ವಿಷನ್’ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆಗಳನ್ನು ನೀಡಿದರು, ಸಮಸ್ಯೆಗಳನ್ನು ಹೇಳಿಕೊಂಡರು, ಮನವಿ ಸಲ್ಲಿಸಿದರು.
ಎಲ್ಲರ ಮನವಿಗಳನ್ನೂ ಸ್ವೀಕರಿಸಿ, ಎಲ್ಲರ ಮಾತುಗಳನ್ನೂ ಆಲಿಸಿದ ಸಂಸದ ಯದುವೀರ್, ‘ಕೊಡಗಿನಲ್ಲಿ ಬೃಹತ್ ಅಭಿವೃದ್ಧಿ ಕಾರ್ಯಗಳು ಬೇಡ. ಇಲ್ಲಿನ ಪರಿಸರ, ಸಂಸ್ಕೃತಿಯನ್ನು ಉಳಿಸಿಕೊಂಡು, ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.
‘ಅಭಿವೃದ್ಧಿಗಾಗಿ ಅಭಿವೃದ್ಧಿ ಮಾಡುವುದು ಬೇಡ. ಇಲ್ಲಿನ ಪ್ರವಾಸೋದ್ಯಮ ಹೆಚ್ಚಿಸಲು ಹೆಚ್ಚಿನದ್ದು ಮಾಡಬೇಕಿಲ್ಲ. ಇಲ್ಲಿನ ಪ್ರಕೃತಿ ಮತ್ತು ಸಂಸ್ಕೃತಿ ಉಳಿಸಿಕೊಂಡರೆ ಸಾಕು. ಐತಿಹಾಸಿಕ ಕೋಟೆಯನ್ನು ಮ್ಯೂಸಿಯಂಯನ್ನಾಗಿ ಮಾಡಿ, ಐನ್‌ಮನೆಗಳನ್ನು ಅಭಿವೃದ್ಧಿಪಡಿಸಿ, ಹೊರಗೆ ಕೊಡಗಿನ ಇತಿಹಾಸ ಪರಿಚಯಿಸಿ, ಇಲ್ಲಿರುವ ಪ್ರವಾಸಿತಾಣಗಳಿಗೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡಿದರೆ ಸಾಕು’ ಎಂದು ಕೊಡಗಿನ ಅಭಿವೃದ್ಧಿ ಕುರಿತ ತಮ್ಮ ದೃಷ್ಟಿಯನ್ನು ಸಭೆಯಲ್ಲಿರಿಸಿದರು.
ಜಿಲ್ಲೆಗೆ ರೈಲು ಸಂಪರ್ಕ ಒದಗಿಸಲು ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡುತ್ತಿಲ್ಲ. ಏರ್‌ಸ್ಕ್ರಿಪ್ಟ್ ನಿರ್ಮಾಣಕ್ಕೆ 2 ಜಾಗಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಒಂದನ್ನು ಅಂತಿಮಗೊಳಿಸಬೇಕಿದೆ. ಚತುಷ್ಪಥ ಹೆದ್ದಾರಿ ಕುಶಾಲನಗರದವರೆಗೆ ಮಾತ್ರ ಇರಲಿದೆ ಎಂದು ಜಿಲ್ಲೆಯಲ್ಲಿ ಹಾಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪಕ್ಷಿನೋಟವನ್ನು ಸಭಿಕರ ಮುಂದಿರಿಸಿದರು.
ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ತೆರೆಯುವುದು, ಬಹುರಾಷ್ಟ್ರೀಯ ಕಂಪನಿಗಳು ಪರವಾನಗಿ ಇಲ್ಲದೇ ಮಾಡುತ್ತಿರುವ ಆನ್‌ಲೈನ್ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕುವುದು, ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ಮೇಲಂತಸ್ತಿನ ನಿರ್ಮಾಣಕ್ಕೆ ಸಹಾಯಹಸ್ತ ಚಾಚುವುದು, ಕಾಫಿಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವುದು, ರೈಲು ಟಿಕೆಟ್ ಬುಕ್ಕಿಂಗ್ ಕೇಂದ್ರದ ಪುನರ್ ಆರಂಭ ಹೀಗೆ ಅನೇಕ ಭರವಸೆಗಳನ್ನು ನೀಡಿದರು.
ಕಾಫಿಯನ್ನು ಸರ್ಫೇಸಿ ಕಾಯ್ದೆಯಿಂದ ಹೊರತರಬೇಕಾದರೆ ರಾಜ್ಯ ಸರ್ಕಾರ ಕಾಫಿಯನ್ನು ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸುವ ಬದಲು ಕೃಷಿ ಬೆಳೆಯನ್ನಾಗಿ ಪರಿಗಣಿಸಬೇಕು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ವಿಚಾರಗಳಿಗೆ ರಾಜ್ಯಸರ್ಕಾರವೇ ಕ್ರಮ ವಹಿಸಬೇಕು. ಇದಕ್ಕಾಗಿ ಪಕ್ಷಾತೀತವಾದ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಿದ್ಧ ಎಂದೂ ಘೋಷಿಸಿದರು.
ರಾಷ್ಟ್ರಪ್ರಶಸ್ತಿ ಪಡೆದ ‘ಕಂದೀಲು’ ಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ಕೊಟ್ಟುಕತ್ತೀರ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಭಾಗವಹಿಸಿದ್ದರು.
ಪ್ರಕೃತಿ ವಿಕೋಪದ ವೇಳೆ ರೆಡ್ ಕ್ರಾಸ್ ಭವನ ಕಾಳಜಿ ಕೇಂದ್ರವಾಗಿ ನೆರವಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿರ್ಮಾಣಕ್ಕೆ ನೆರವಾಗಬೇಕುಬಿ.ಕೆ. ರವೀಂದ್ರ ರೈ ಭಾರತೀಯ ರೆಡ್ ಕ್ರಾಸ್‌ನ ಕೊಡಗು ಸಭಾಪತಿ.
ನಿರ್ದೇಶಕಿಯರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ರಾಜ್ಯದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ 3ನೇ ನಿರ್ದೇಶಕಿ ನಾನು. ಈ ಗೌರವ ಇನ್ನಷ್ಟು ಕೆಲಸ ಮಾಡುವ ಹುರುಪು ತುಂಬಿದೆ ಕೊಟ್ಟುಕತ್ತೀರಯಶೋಧ ಪ್ರಕಾಶ್ ‘ಕಂದೀಲು’ ಚಿತ್ರದ ನಿರ್ದೇಶಕಿ.
ಕೂರ್ಗ್ ಹೋಟೆಲ್ಸ್ ರೆಸಾರ್ಟ್ ಅಸೋಸಿಯೇಷನ್‌ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ಚಿದ್ವಿಲಾಸ್ ಅವರು ಕೊಡಗಿನ ಅಭಿವೃದ್ಧಿ ಕುರಿತು ಸಾಲು ಸಾಲು ಬೇಡಿಕೆಗಳನ್ನು ಮಂಡಿಸಿದರು. ‘ಕೊಡಗನ್ನು ಬೇರೆ ಕಡೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ರಕ್ಷಣಾ ಕ್ಷೇತ್ರದಲ್ಲಿ ಕಾಫಿಯನ್ನು ಚಹಾದೊಂದಿಗೆ ಒಂದು ಪಾನೀಯವಾಗಿ ಪರಿಚಯಿಸಬೇಕು ದೇಶದ ಬೇರೆ ಬೇರೆ ರಾಜ್ಯಗಳಿಗೂ ಕೊಡಗಿನ ಕಾಫಿಯನ್ನು ಪರಿಚಯಿಸಬೇಕು ರೈಲ್ವೆ ಬುಕಿಂಗ್ ಕೇಂದ್ರದ ಪುನರ್‌ಆರಂಭ ಶೈತ್ಯಾಗಾರದ ನಿರ್ಮಾಣ ಜಲಜೀವನ್ ಮಿಷನ್ ಸಮರ್ಪಕ ಜಾರಿ ಹಾಗೂ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿಯೇ ನಿರ್ದಿಷ್ಟ ಯೋಜನೆ ಜಾರಿಗೊಳಿಸುವ ಬೇಡಿಕೆಗಳನ್ನಿರಿಸಿದರು.
ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು. ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಗೆ ನೆರವಾಗಬೇಕು-ನಂದಾ ಬೆಳ್ಯಪ್ಪ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ.
ಕಾಫಿ ಬೆಳೆಯನ್ನು ಬೆಳೆ ವಿಮಾ ವ್ಯಾಪ್ತಿಗೆ ತರಬೇಕು. ಎನ್‌ಡಿಆರ್‌ಎಫ್ ಪರಿಹಾರವನ್ನು ಹೆಚ್ಚಿಸಬೇಕು.-ಕೆ.ಕೆ. ವಿಶ್ವನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ
ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಬೇಕು. ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆಯಂತೆ ಬೃಹತ್ ಕಾವೇರಿ ಪ್ರತಿಮೆ ನಿರ್ಮಿಸಬೇಕು
-ಬಿ.ಆರ್.ನಾಗೇಂದ್ರ ಪ್ರಸಾದ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ.
ಹುಣಸೂರು- ವಿರಾಜಪೇಟೆ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳಿವೆ. ಅವುಗಳನ್ನು ತೆರವುಗೊಳಿಸಬೇಕು
ನಾಸೀರ್, ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ
ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿಗಳ ಮಾರಾಟವು ನಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು
ಅಂಬೆಕಲ್ಲು ಜೀವನ, ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ.
ಪ್ರವಾಸಿ ಕೇಂದ್ರವಾದ ಕೊಡಗನ್ನು ದೇಶದ ಇತರೆಡೆಗಳಲ್ಲಿಯೂ ಪ್ರವಾಸಿ ನೆಲೆಯಲ್ಲಿ ಪರಿಚಯಿಸುವ ಕಾರ್ಯ ಮಾಡಬೇಕು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮೊದಲಾದೆಡೆಗಳಿಂದ ಕೊಡಗು ಜಿಲ್ಲೆಗೆ ಕಾರ್ಮಿಕರು ಬರುತ್ತಿದ್ದಾರೆ. ಹೀಗೆ ಮನಬಂದಂತೆ ಬರುವ ಕಾರ್ಮಿಕರನ್ನು ಆಯಾ ರಾಜ್ಯಗಳಲ್ಲೆ ನೋಂದಾಯಿಸಿಕೊಂಡು ಕಳುಹಿಸುವ ವ್ಯವಸ್ಥೆ ಮಾಡಬೇಕು
-ಮೊಂತಿ ಗಣೇಶ್, ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ.
ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೊಡಗಿನಲ್ಲಿ ಹೊಸ ಉದ್ಯಮಕ್ಕಾಗಿ ಸಾಕಷ್ಟು ಜಾಗ ಮೀಸಲಿದೆ. ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಈ ಜಾಗವನ್ನು ಬಳಸಿಕೊಳ್ಳುವುದು ಸೂಕ್ತ
-ಪ್ರವೀಣ್ ಕುಮಾರ್, ಕೂಡ್ಲೂರು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ
‘ವಿಷನ್ ಕೊಡಗು’ ಮೂಲಕ ಕೇಂದ್ರ ಸರ್ಕಾರದ ಯಾವೆಲ್ಲಾ ಯೋಜನೆಗಳು ಕೊಡಗಿಗೆ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ
-ಎಚ್.ಟಿ.ಅನಿಲ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.