ADVERTISEMENT

ವೈದ್ಯರ ಕೊರತೆ: ರೋಗಿಗಳ ಪರದಾಟ

ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪ್ಪದ ರೋಗಿಗಳ ಬವಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 17:27 IST
Last Updated 9 ಡಿಸೆಂಬರ್ 2018, 17:27 IST
ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರ
ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರ   

ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ಎರಡನೇ ದೊಡ್ಡ ಪಟ್ಟಣವಾಗಿರುವ ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ರೋಗಿಗಳು ಪರದಾಡುವಂತಾಗಿದೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಇಬ್ಬರು ವೈದ್ಯರಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಜಿಲ್ಲಾ ಉಸ್ತವಾರಿ ಸಚಿವರು, ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಹೆಚ್ಚಿನ ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಿಂದ ರೋಗಿಗಳು ತಪಾಸಣೆಗೆ ಬರುವುದರಿಂದ ಹೆಚ್ಚಿನ ವೈದ್ಯರ ಅಗತ್ಯವಿದೆ. ಇಲ್ಲಿ ಪ್ರತಿದಿನ 250ರಿಂದ 300 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ.

ADVERTISEMENT

ರಾತ್ರಿ ಇಲ್ಲಿ ಕರ್ತವ್ಯ ನಿರ್ವಹಿಸಲು ಸಹ ಒಬ್ಬರೇ ವೈದ್ಯರಿದ್ದಾರೆ. ವೈದ್ಯರ ಸಮಸ್ಯೆಯಿಂದಾಗಿ ಸಮುದಾಯ ಆರೋಗ್ಯ ಕೆಂದ್ರದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಪೋಕ್ಲು ವ್ಯಾಪ್ತಿಯ ಸುಮಾರು 24 ಗ್ರಾಮಗಳು ಸೇರುತ್ತವೆ. ಇಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ದೂರದ ಮಡಿಕೇರಿ, ವಿರಾಜಪೇಟೆಗೆ ತೆರಳುವಂತಾಗಿದೆ. ಎರಡಂತಸ್ತಿನ ವಿಶಾಲವಾದ ಕಟ್ಟಡದಲ್ಲಿ ಸಂದರ್ಶಕರಿಗೆ ಕೂರಲು ವಿಶಾಲವಾದ ಸ್ಥಳಾವಕಾಶ, ವೈದ್ಯರ ಕೊಠಡಿಗಳು, ಔಷಧಿ ದಾಸ್ತಾನು ಕೊಠಡಿ, ಲ್ಯಾಬ್, ಲೇಬರ್ ಥೀಯೆಟರ್, ಲೇಬರ್ ವಾರ್ಡ್‌, ಕಣ್ಣು ಪರೀಕ್ಷಾ ಕೊಠಡಿ, ಐಸಿಟಿಸಿ ವಿಭಾಗ, ಎಚ್ಐವಿ ಆಪ್ತ ಸಮಾಲೋಚನೆ ಹಾಗೂ ಪರೀಕ್ಷೆ, ಎಕ್ಸರೇ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇದೆ. ಆದರೆ ಮುಖ್ಯವಾಗಿ ವೈದ್ಯಾಧಿಕಾರಿ, ಬೇರೆ ಬೇರೆ ವಿಭಾಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ನೇಮಕವಾಗಬೇಕಾಗಿದೆ.

ವೈದ್ಯರು ಹಾಗೂ ಸಿಬ್ಬಂದಿಗೆ ವಾಸಿಸಲು ಯೋಗ್ಯವಾದ ವಸತಿ ಗೃಹಗಳ ನಿರ್ಮಾಣ ಮಾಡಿದರೆ ನಗರಗಳಿಂದ ಇಲ್ಲಿಗೆ ವೈದ್ಯರು ಬಂದು ನೆಲೆಸುತ್ತಾರೆ. ಆಗ ರೋಗಿಗಳ ಕಷ್ಟ ತಪ್ಪುತ್ತದೆ. ಸಂಬಂಧಪಟ್ಟವರು ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬೇತು ಗ್ರಾಮದ ನಿವಾಸಿ ಚೋಕಿರ ಸುಧಿ ಅಪ್ಪಯ್ಯ ಎಚ್ಚರಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸದ್ಯಕೆ ಇಬ್ಬರು ಸಮರ್ಥ ವೈದ್ಯಾಧಿಕಾರಿಗಳು ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಲು ವೈಧ್ಯಾಧಿಕಾರಿಗಳು ಉತ್ಸಾಹ ತೋರುತ್ತಿಲ್ಗ. ಸರ್ಕಾರ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ. ಗ್ರಾಮ ಸಭೆಯಲ್ಲೂ ವೈದ್ಯರ ಕೊರತೆಯ ವಿಷಯ ಪ್ರಸ್ತಾಪವಾಗಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯು ‘ಪ್ರಜಾವಾಣಿಗೆ’ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.