
ಮಡಿಕೇರಿ: ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿಯ ವತಿಯಿಂದ ನಡೆದ ‘ಸಿ’ ಮತ್ತು ‘ಡಿ’ ದರ್ಜೆ ಭೂಮಿ ಸಮಸ್ಯೆ ಕುರಿತು ಸಭೆಯಲ್ಲಿ ಪಕ್ಷಾತೀತವಾದ ಒಗ್ಗಟ್ಟು ಪ್ರದರ್ಶಿತವಾಯಿತು. ಭಾಗವಹಿಸಿದ್ದ ಕಾಂಗ್ರೆಸ್, ಬಿಜೆಪಿ, ರೈತ ಮುಖಂಡರು ಒಗ್ಗಟ್ಟಿನಿಂದ ಮುನ್ನಡೆಯಲು ನಿರ್ಧರಿಸಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ‘ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ‘ಸಿ’ ಮತ್ತು ‘ಡಿ’ ದರ್ಜೆ ಭೂಮಿ ಸಮಸ್ಯೆಯ ಇತ್ಯರ್ಥಕ್ಕೆ ಸರ್ಕಾರ ಈಗ ಸಮಿತಿಯೊಂದನ್ನು ರಚಿಸಿದೆ. ಸದ್ಯದಲ್ಲಿಯೇ ಸಮಿತಿಯ ಸದಸ್ಯರು ಜಿಲ್ಲೆಗೆ ಬಂದು ಈ ಸಂಬಂಧ ಮಾಹಿತಿ ಪಡೆಯಲಿದ್ದಾರೆ’ ಎಂದು ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರೊಬ್ಬರ ಸಲಹೆಯಂತೆ ಸಮಿತಿ ಕಾರ್ಯಾರಂಭಿಸುವುದಕ್ಕೂ ಮೊದಲು ಜಿಲ್ಲೆಯಲ್ಲಿ ಸಭೆಯೊಂದನ್ನು ನಡೆಸಿ ಇಲ್ಲಿನ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಮಾತ್ರವಲ್ಲ, ರೈತರಿಗೂ ಏನೆಲ್ಲಾ ಮಾಹಿತಿ ನೀಡಬೇಕು ಎಂಬುದರ ಕುರಿತು ತಿಳಿಸಲಾಗುವುದು’ ಎಂದು ಹೇಳಿದರು.
ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೇ ಹೊರತು ಭಾವನೆಗಳಿಂದ ಯಾವುದೇ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.
ಈ ಹಿಂದಿನ ಅಧಿಕಾರಿಗಳ ತಪ್ಪಿನಿಂದ ಹೊರಡಿಸಲಾದ ಆದೇಶಗಳಿಂದ ಸಮಸ್ಯೆ ವಿವಾದದ ಸ್ಪರೂಪ ಪಡೆದಿದೆ. ಈ ಕುರಿತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಾನೂನಿತ್ಮಾಕವಾದ ಹೋರಾಟದಿಂದ ಮಾತ್ರ ಗೆಲುವು ಸಾಧ್ಯ. ಈಗ ರಚನೆಯಾಗಿರುವ ಸಮಿತಿ ಸದಸ್ಯರಿಗೂ ಕೊಡಗಿನ ವಾಸ್ತವ ಸ್ಥಿತಿಯನ್ನು ತಿಳಿಸಿಕೊಡಬೇಕಿದೆ ಎಂದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಹಿಂದಿನಿಂದಲೂ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಈಗ ನಾವು ಮುಂದೇನು ಮಾಡಬೇಕು ಎನ್ನುವುದು ಮುಖ್ಯ. ಸರ್ಕಾರ ಎಂದಿಂದಿಗೂ ರೈತರೊಂದಿಗೆ ಇರುತ್ತದೆ’ ಎಂದು ಭರವಸೆ ನೀಡಿದರು.
ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಮಾತನಾಡಿ, ‘ಸಮಸ್ಯೆ ಪರಿಹಾರಕ್ಕೆ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದೆಯೂ ಇದೇ ರೀತಿ ಒಮ್ಮನಸ್ಸಿನಿಂದ, ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.
ಕೆಲವು ಅಧಿಕಾರಿಗಳ ತಪ್ಪಿನಿಂದ ಈಗ ಸಮಸ್ಯೆ ಸೃಷ್ಟಿಯಾಗಿದೆ. ಇದಕ್ಕಾಗಿ ಒಗ್ಗಟ್ಟಿನಿಂದ ಹೋರಾಟದ ಅನಿವಾರ್ಯತೆ ಇದೆ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ‘ಸರ್ಕಾರ ರಚಿಸಿರುವ ಸಮಿತಿ ಸ್ವಾಗತಾರ್ಹ. ಆದರೆ, ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಸಮಿತಿಯ ಪುನರ್ ರಚನೆಯ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು.
ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಜಿ.ಮೇದಪ್ಪ, ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಹೋರಾಟಗಾರರಾದ ಮನು ಸೋಮಯ್ಯ, ಕೆ.ಎಂ ಲೋಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.