ನಾಪೋಕ್ಲು (ಕೊಡಗು): ಎರಡು ದಿನಗಳಿಂದ ಗಾಳಿ–ಮಳೆ ಬಿರುಸುಗೊಂಡಿದ್ದು ಕಾಫಿ ಗಿಡಗಳಲ್ಲಿ ಕೊಳೆರೋಗ ಹೆಚ್ಚಾಗುತ್ತಿದ್ದು ಫಸಲು ಮಣ್ಣು ಪಾಲಾಗುತ್ತಿದೆ. ನಾಲ್ಕು ನಾಡು ವ್ಯಾಪ್ತಿಯಲ್ಲಿ ಕೊಳೆರೋಗ ವ್ಯಾಪಕವಾಗಿದೆ.
ಕಾಫಿ ಗಿಡದ ಎಲೆಗಳು ಕೊಳೆತು ಬೀಳುತ್ತಿವೆ. ಗೊಂಚಲುಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಕಾಫಿ ಮಿಡಿಗಳು ದಪ್ಪವಾಗುವ ಈ ಹಂತದಲ್ಲಿ ಉದುರುವಿಕೆ ಹೆಚ್ಚಾಗಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಆತಂಕಕ್ಕೆ ಒಳಗಾಗುವಂತಾಗಿದೆ.
‘ಕಾಫಿಗೆ ಈಚಿನ ದಿನಗಳಲ್ಲಿ ಉತ್ತಮ ಧಾರಣೆ ಇದೆ. ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ಬೇಸಿಗೆ ಅವಧಿಯಲ್ಲಿ ತೋಟಗಳಿಗೆ ತುಂತುರು ನೀರಾವರಿ ಮೂಲಕ ಕೆರೆಗಳಿಂದ ನೀರು ಹಾಯಿಸಿದ್ದೆವು. ನಿರಂತರ ಮಳೆಯಿಂದಾಗಿ ಫಸಲಿಗೆ ಹಾನಿಯಾಗುತ್ತಿದೆ. ಕೊಳೆರೋಗವೂ ವ್ಯಾಪಿಸಿದೆ. ತೋಟದಲ್ಲಿ ಮುರಿದುಬಿದ್ದ ಮರದ ರೆಂಬೆಗಳನ್ನು ಕತ್ತರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕೃಷಿಕ ರವೀಂದ್ರ ತಿಳಿಸಿದರು.
‘ಇದು ಕಾಫಿ ತೋಟಗಳಲ್ಲಿ ಕಳೆ ನಿರ್ಮೂಲನೆಯ ಸಮಯ. ಕಾಫಿ ಗಿಡಗಳಲ್ಲಿ ಇರುವ ಚಿಗುರು ತೆಗೆಯಬೇಕು. ಆದರೆ, ಈ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ’ ಎಂದು ಬಲಮುರಿ ಗ್ರಾಮದ ಕುಶಾಲಪ್ಪ ಹೇಳಿದರು.
‘ಕಳೆದ ವರ್ಷ ಕಾಳು ಮೆಣಸಿನ ಇಳುವರಿ ಕುಂಠಿತಗೊಂಡಿತ್ತು. ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವು. ಇದೇ ರೀತಿ ಮಳೆ ಮುಂದುವರಿದರೆ ಕಾಫಿಯೊಂದಿಗೆ ಕಾಳು ಮೆಣಸಿನ ಫಸಲೂ ಕೈತಪ್ಪುವ ಸಾಧ್ಯತೆ ಇದೆ’ ಎಂಬುದು ನಾಲ್ಕುನಾಡಿನ ಬೆಳೆಗಾರರ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.