ADVERTISEMENT

ಯೋಧರ ನಾಡಿಗೆ ಸೈನಿಕ ಹುಳು ದಾಳಿ!

ಆರಂಭದಲ್ಲೇ ಮುಸುಕಿನ ಜೋಳಕ್ಕೆ ರೋಗಬಾಧೆ

ಅದಿತ್ಯ ಕೆ.ಎ.
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
ಸೈನಿಕ ಹುಳುಗಳು ಮೆಕ್ಕೆಜೋಳ ಬೆಳೆಯ ಎಲೆ ತಿಂದು ಹಾಕಿರುವ ದೃಶ್ಯ
ಸೈನಿಕ ಹುಳುಗಳು ಮೆಕ್ಕೆಜೋಳ ಬೆಳೆಯ ಎಲೆ ತಿಂದು ಹಾಕಿರುವ ದೃಶ್ಯ   

ಮಡಿಕೇರಿ: ಕೊಡಗಿನಲ್ಲಿ ಕಾಫಿ, ಕಾಳು ಮೆಣಸು, ಏಲಕ್ಕಿ, ಭತ್ತ ಪ್ರಧಾನ ಬೆಳೆಗಳು. ಜಿಲ್ಲೆಯ ಉತ್ತರ ಭಾಗದ ಬಯಲು ಪ್ರದೇಶದಲ್ಲಿ ಮುಸುಕಿನ ಜೋಳ, ಶುಂಠಿ, ಹಸಿರು ಮೆಣಸಿನ ಕಾಯಿ ಹಾಗೂ ಭತ್ತವನ್ನೂ ಪ್ರಧಾನವಾಗಿ ಬೆಳೆಯಲಾಗುತ್ತಿದೆ.

ಈ ಬಾರಿ ಮೇನಲ್ಲಿ ಸುರಿದಿದ್ದ ಮಳೆ ಹಾಗೂ ನೀರಾವರಿ ಸೌಲಭ್ಯವುಳ್ಳ ರೈತರು ಆಗಲೇ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಆರಂಭದಲ್ಲೇ ಸೈನಿಕ ಹುಳು ದಾಳಿ ಮಾಡಿದ್ದು ಕಂಗಾಲಾಗುವಂತೆ ಮಾಡಿದೆ.

ಕುಶಾಲನಗರದ ತೊರೆನೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ಚಿಕ್ಕಅಳುವಾರ, ಸಿದ್ದಲಿಂಗಪುರ, ಅತ್ತೂರು, ಶನಿವಾರಸಂತೆ, ಕೊಡ್ಲಿಪೇಟೆ ಸುತ್ತಮುತ್ತಲ ರೈತರು ಪ್ರತಿವರ್ಷ ಮುಸುಕಿನ ಜೋಳ ಬೆಳೆಯುತ್ತಾರೆ. ಕಳೆದ ವರ್ಷ ಭತ್ತದ ಬೆಳೆಗೆ ಕಟಾವಿನ ಹಂತದಲ್ಲಿ ಜಿಲ್ಲೆಯಾದ್ಯಂತ ಕಾಣಿಸಿಕೊಂಡಿದ್ದ ಸೈನಿಕ ಹುಳು ಬಾಧೆ ಈ ವರ್ಷ ಕೃಷಿ ಚಟುವಟಿಕೆ ಆರಂಭದಲ್ಲೇ ಮುಸುಕಿನ ಜೋಳ ಬೆಳೆಯಲ್ಲಿ ಕಾಣಿಸಿಕೊಂಡಿದೆ.

ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿಯ ಗುಡ್ಡೆಹೊಸೂರು ಹಾಗೂ ಅತ್ತೂರು ಗ್ರಾಮಗಳಲ್ಲಿ ಮುಸುಕಿನ ಜೋಳ ಬೆಳೆಯುವ ಹೊಲಗಳಲ್ಲಿ ಸೈನಿಕ ಹುಳು ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ತಂದಿದೆ.

ADVERTISEMENT

ಎಷ್ಟು ಬಿತ್ತನೆ: ಕೃಷಿ ಇಲಾಖೆಯು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಗುರಿ ಹೊಂದಿದೆ. ಅದರಲ್ಲಿ 1,000 ಹೆಕ್ಟೇರ್‌ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಬೆಳೆಯೂ ಮೇಲಕ್ಕೆ ಬಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲೆಗಳನ್ನು ಸೈನಿಕ ಹುಳುಗಳು ತಿನ್ನುತ್ತಿವೆ. ಇದರಿಂದ ಬೆಳವಣಿಗೆ ಕುಂಠಿತವಾಗಿದೆ. ಬೆಳೆ ಸಂಪೂರ್ಣ ಹಾಳಾಗಲಿದೆ ಎಂದು ಈ ಭಾಗದ ರೈತರು ನೋವು ತೋಡಿಕೊಂಡಿದ್ದಾರೆ.

‘ಸದ್ಯಕ್ಕೆ ಎರಡು ಗ್ರಾಮಗಳಲ್ಲಿ ಮಾತ್ರ ಹುಳು ಬಾಧೆ ಕಾಣಿಸಿಕೊಂಡಿದೆ. ಇದೇ ರೀತಿ ಮಳೆಯು ಕಣ್ಣಾಮುಚ್ಚಾಲೆ ಆಡಿದರೆ ಸೈನಿಕ ಹುಳುಗಳು ನಮ್ಮ ಭಾಗಕ್ಕೂ ದಾಳಿ ನಡೆಸುವ ಆತಂಕವಿದೆ. ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಈ ಬಾರಿ ಸಾಧಾರಣ ಮಳೆ ಸುರಿದಿದೆ. ಪ್ರತಿ ವರ್ಷ ಒಂದಲ್ಲಾ ಒಂದು ಕಾರಣಕ್ಕೆ ರೈತರು ಸಮಸ್ಯೆಗೆ ಸಿಲುಕುವಂತೆ ಆಗಿದೆ’ ಎಂದು ತೊರೆನೂರು ಭಾಗದ ರೈತರು ಹೇಳುತ್ತಾರೆ.

ಮುನ್ನೆಚ್ಚರಿಕಾ ಕ್ರಮಗಳು: ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯು ಕೀಟದ ಹತೋಟಿಗೆ ಮುನ್ನೆಚ್ಚರಿಕಾ ಕ್ರಮಗಳ ತಿಳಿಸಿದ್ದು ಅದನ್ನು ‍ಪಾಲಿಸುವಂತೆ ರೈತರದಲ್ಲಿ ಕೋರಿದೆ.

ಈ ಕೀಟಬಾಧೆ ಕಾಣಿಸಿಕೊಂಡರೆ ಕ್ಲೋರೊಪೈರಫಾಸ್‌ ಹಾಗೂ ಸೈಪರ್‌ಮೆತ್ರಿನ್‌ ಎಂಬ ಕೀಟನಾಶಕವನ್ನು ಸಿಂಪಡಿಸಿ ರೋಗಬಾಧೆ ನಿಯಂತ್ರಣಕ್ಕೆ ತರಬಹುದು. ಜತೆಗೆ, ರೈತರೇ ಮಿಶ್ರಣ ತಯಾರಿಸಿಯೂ ಸೈನಿಕ ಹುಳುಗಳನ್ನು ನಿಯಂತ್ರಣಕ್ಕೆ ತರಬಹುದು ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ರೈತರೇ ಮಾಡುವ ಮಿಶ್ರಣ: 50 ಕೆ.ಜಿ ಭತ್ತದ ತೌಡು, 5 ಕೆ.ಜಿ. ಬೆಲ್ಲ, 10 ಲೀಟರ್‌ ನೀರನ್ನು ಸಂಗ್ರಹಿಸಿಕೊಳ್ಳಬೇಕು. ಮೂರನ್ನು ಮಿಶ್ರಣ ಮಾಡಿ ಪಾಕ ತಯಾರಿಸಿಕೊಳ್ಳಬೇಕು. ನಂತರ, ಅದಕ್ಕೆ 10 ಲೀಟರ್ ನೀರಿನೊಡನೆ ಮಿಶ್ರಣ ಮಾಡಿ 12 ಗಂಟೆಗಳ ಕಾಲ ಇಡಬೇಕು. ಅದಕ್ಕೆ ಮೋನೋಕ್ರೋಟೊಫಾಸ್ ಎಂಬ ಕೀಟನಾಶಕ ಸೇರಿಸಿ ಮಿಶ್ರಣ ಮಾಡಿದ ಪುಡಿಯನ್ನು ಸಂಜೆ ವೇಳೆಯಲ್ಲಿ ಬೆಳೆಗೆ ಸಿಂಪಡಣೆ ಮಾಡಬೇಕು. ವಿಷಮಿಶ್ರಿತ ಅಹಾರಕ್ಕೆ ಆಕರ್ಷಣೆಗೊಂಡು ಅದನ್ನು ತಿಂದು ಹುಳು ಸಾಯುತ್ತವೆ ಎಂದು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.