ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಎಲ್ಲೆಡೆ ನಿರಾಳ ಭಾವ ಆವರಿಸುತ್ತಿದೆ. ಪುಷ್ಯ ಮಳೆ ಆರಂಭದಲ್ಲೇ ತುಸು ಶಾಂತವಾಗಿದ್ದಂತೆ ಕಂಡು ಬರುತ್ತಿದೆ. ಅಬ್ಬರದ ಪುನರ್ವಸು ಮಳೆ ತೆರೆಮರೆಗೆ ಸರಿದಿದೆ.
ಮಳೆ ಕಡಿಮೆಯಾಗಿದ್ದರೂ ಗಾಳಿಯ ಅಬ್ಬರ ಕಡಿಮೆಯಾಗಿಲ್ಲ. ಶುಕ್ರವಾರ ರಾತ್ರಿ ಇಡೀ ಗಾಳಿ ಅಬ್ಬರಿಸಿತು. ಶನಿವಾರವೂ ಬಿರುಸಿನ ಗಾಳಿ ಬೀಸಿತು. ಇದರೊಂದಿಗೆ ಶೀತಗಾಳಿಯೂ ಆರಂಭವಾಗಿದ್ದು, ಜನರು ನಡುಗುವಂತಾಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದ್ದರೂ ನೆರೆ ಇಳಿಕೆಯಾಗಿಲ್ಲ. ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಕೆಲವು ಮನೆಗಳ ಸುತ್ತ ನೀರು ಆವರಿಸಿದ್ದ ದೃಶ್ಯಗಳು ಶನಿವಾರ ಕಂಡು ಬಂತು. ಆದರೆ, ನದಿ ತೀರದಲ್ಲಿದ್ದ ಇನ್ನಿತರ ಮನೆಗಳ ಜನರು ನದಿ ನೀರು ಇಳಿಕೆಯಾಗುತ್ತಿರುವುದನ್ನು ಗಮನಿಸಿ ನಿರಾಳರಾದಂತೆ ಕಂಡು ಬಂತು.
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಇದ್ದಕ್ಕಿದ್ದಂತೆ ಕುಸಿದಿದೆ. ಶನಿವಾರ ಬೆಳಿಗ್ಗೆ 16,560 ಕ್ಯುಸೆಕ್ ಇದ್ದ ಒಳಹರಿವು ಸಂಜೆಯ ಹೊತ್ತಿಗೆ 8,944 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಸದ್ಯ, ಜಲಾಶಯದಿಂದ 4 ಸಾವಿರ ಕ್ಯುಸೆಕ್ ನೀರನಷ್ಟೇ ನದಿಗೆ ಬಿಡಲಾಗುತ್ತಿದೆ. ಇದರಿಂದ ಹಾರಂಗಿ ಮತ್ತು ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಿಳಿಯಾಗುತ್ತಿದೆ.
ಗಾಳಿಯ ಅಬ್ಬರ ಮುಂದುವರೆದಿರುವುದರಿಂದ ನೆಲಕ್ಕಚ್ಚುವ ವಿದ್ಯುತ್ ಕಂಬಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಒಟ್ಟು 84 ವಿದ್ಯುತ್ ಕಂಬಗಳು ಬಿದ್ದಿವೆ. 13 ಮನೆಗಳಿಗೆ ಹಾನಿಯಾಗಿವೆ. ಇನ್ನೂ 35 ಮಂದಿ ಜಿಲ್ಲೆಯ ವಿವಿಧೆಡೆ ಆರಂಭಿಸಿರುವ ಕಾಳಜಿ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ.
ಕುಶಾಲನಗರ: ಪ್ರವಾಹ ಪೀಡಿತ ನಿವಾಸಿಗಳು ನಿರಾಳ
ಕುಶಾಲನಗರ: ಕಾವೇರಿ ಹಾಗೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ಶನಿವಾರ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದು ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ನದಿಗಳ ಹೆಚ್ಚುವರಿ ನೀರು ತಗ್ಗು ಪ್ರದೇಶಗಳತ್ತ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ಇಲ್ಲಿನ ಸಾಯಿ ಬಡಾವಣೆ ಕುವೆಂಪು ಬಡಾವಣೆ ಹಾಗೂ ಇಂದಿರಾ ಬಡಾವಣೆಗಳಲ್ಲಿ ಜಲಾವೃತಗೊಂಡಿದ್ದ ಮನೆಗಳ ಸುತ್ತಮುತ್ತ ನೀರು ಇಳಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಡಾವಣೆಗಳ ನಿವಾಸಿಗಳು ಸ್ವಲ್ಪ ನಿರಾಳರಾಗಿದ್ದಾರೆ.
ನದಿ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿನ ರೈತರ ಜಮೀನಿಗೆ ನುಗ್ಗಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿಯುವ ಮಳೆಗಳಿಂದ ಕುಶಾಲನಗರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು ಮಳೆಗಾಲ ಬಂತಿ ಎಂದರೆ ಇಲ್ಲಿನ ಜನರಿಗೆ ನಡುಕ ಉಂಟಾಗುತ್ತಿದೆ. ಮಳೆಗಾಲ ಬೇಗ ಮುಗಿಯಲಿ ಎಂದು ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ತಹಶೀಲ್ದಾರ್ ಕಿರಣ್ ಗೌರಯ್ಯ ಪುರಸಭೆ ಅಧಿಕಾರಿ ಕೃಷ್ಣಪ್ರಸಾದ್ ಪ್ರಸಾದ್ ಹಾಗೂ ಟಾಸ್ಕ್ ಪೋರ್ಸ್ ತಂಡ ಮುಂಜಾಗ್ರತಾದೊಂದಿಗೆ ಕಾರ್ಯಪ್ರವೃತವಾಗಿದೆ.
ಸೋಮವಾರಪೇಟೆ: ಮಳೆ ಕಡಿಮೆಯಾದರೂ ನಿಲ್ಲದ ಹಾನಿ
ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದ್ದು ಗಾಳಿ ಮಳೆಗೆ 33 ಕೆವಿ ವಿದ್ಯುತ್ ಮಾರ್ಗದ ಮೇಲೆ ಹಳ್ಳದಿಣ್ಣೆ ಗ್ರಾಮದ ನೀರಿನ ಹರಿವು ಇರುವ ಸ್ಥಳದಲ್ಲಿ ಬೃಹತ್ ಮರವೊಂದು ಬಿದ್ದ ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಬೆಳಿಗ್ಗೆಯಿಂದಲೇ ‘ಸೆಸ್ಕ್’ ಸಿಬ್ಬಂದಿ ಕಾಯೋನ್ಮುಖರಾಗಿ ವಿದ್ಯುತ್ ನೀಡಲು ಯಶಸ್ವಿಯಾದರು.
‘ಒಟ್ಟು ತಾಲ್ಲೂಕಿನಲ್ಲಿ 257 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಇನ್ನೂ 30 ಕಂಬಗಳನ್ನು ನೆಡಲು ಬಾಕಿ ಉಳಿದಿವೆ. ಈಗಾಗಲೇ 11ಕೆ.ವಿ. ವಿದ್ಯುತ್ ಮಾರ್ಗಳಲ್ಲಿ ವಿದ್ಯುತ್ ನೀಡಲಾಗುತ್ತಿದ್ದು ಗ್ರಾಮೀಣ ಭಾಗಗಳಲ್ಲಿನ ಒಂದೆರಡು ಮನೆಗಳಿರುವ ಸ್ಥಳಕ್ಕೆ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುವುದು’ ಎಂದು ಸೆಸ್ಕ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ರವಿ ತಿಳಿಸಿದರು.
ಶಾಂತಳ್ಳಿ ಹೋಬಳಿಯಾದ್ಯಂತ ಭಾರಿ ಮಳೆಯಾಗುತ್ತಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದ ನಿವಾಸಿ ಚಾಮೆರ ಲಕ್ಷಣ ಎಂಬುವವರ ಕೊಟ್ಟಿಗೆಯೊಂದು ಬಿದ್ದು ಹೋರಿಯೊಂದು ಮೃತಪಟ್ಟಿದ್ದು ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಡಾ. ಕೆ. ನಾಗರಾಜು ತೆರಳಿ ಪರಿಶೀಲಿಸಿದರು.
ಮುಕ್ಕೋಡ್ಲು ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಆವರಣ ಬಾರಿ ಮಳೆಗೆ ನೀರಿನಿಂದ ಆವೃತ್ತವಾಗಿದೆ. ಗ್ರಾಮ ಸಂಪರ್ಕ ರಸ್ತೆಯೊಂದರ ಮೇಲೆ ನೀರು ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತು. ಸಮೀಪದ ಕಲ್ಕಂದೂರು ಗ್ರಾಮದ ಹಸೈನಾರ್ ಎಂಬುವವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ದುಂಡಳ್ಳಿ ಗ್ರಾಮದ ಜಯಪ್ಪ ಎಂಬುವವರ ದನದ ಕೊಟ್ಟಿಗೆಗೆ ಹಾನಿಯಾಗಿದೆ.
ಹುಲುಸೆ ಗ್ರಾಮದ ಲಕ್ಷ್ಮಣ ಎಂಬುವವರ ವಾಸದ ಮನೆಗೆ ಹಾನಿಯಾಗಿದೆ. ಶಾಂತಳ್ಳಿ ಹೋಬಳಿಯ ತೋಳೂರುಶೆಟ್ಟಳ್ಳಿ ಗ್ರಾಮದ ವಿ.ಕೆ. ಇಂದಿರಾ ಅವರ ವಾಸದ ಮನೆಗೆ ಹಾನಿಯಾಗಿದೆ. ಹರಗ ಗ್ರಾಮದ ಅಚಿಜನ್ ಎಂಬುವವರ ವಾಸದ ಮನೆಯ ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿದೆ. ಶುಂಟಿ ಮಂಗಳೂರು ಗ್ರಾಮದ ಇಂದ್ರಮ್ಮ ವಾಸದ ಮನೆಗೆ ಹಾನಿಯಾಗಿದೆ.
Cut-off box -
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.