ADVERTISEMENT

ಕೇಂದ್ರ ಬಜೆಟ್‌ | ನಿರೀಕ್ಷೆಗಳ ಭಾರ: ದ.ಕೊಡಗಿಗೆ ಬೇಕಿದೆ ತಾಯಿ,ಮಕ್ಕಳ ಆಸ್ಪತ್ರೆ

ಕೆ.ಎಸ್.ಗಿರೀಶ್
Published 22 ಜನವರಿ 2026, 5:46 IST
Last Updated 22 ಜನವರಿ 2026, 5:46 IST
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   

ಮಡಿಕೇರಿ: ಕೊಡಗು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಆಗಬೇಕಿರುವುದು ಬೆಟ್ಟದಷ್ಟು ಇದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅದೆಷ್ಟು ಈಡೇರುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ.

ಮುಖ್ಯವಾಗಿ, ಜಿಲ್ಲೆಯ ಆರೋಗ್ಯ ಕ್ಷೇತ್ರವೇ ರೋಗಗ್ರಸ್ತವಾಗಿದೆ. ಇತರೆ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಸಮಾಧಾನ ತರುವಂತಹ ಕನಿಷ್ಠ ವ್ಯವಸ್ಥೆಯೂ ಇಲ್ಲ ಎಂಬುದು ನಾಲ್ಕಾರು ಜಿಲ್ಲೆಗಳನ್ನು ಸುತ್ತಾಡಿರುವ ಯಾರಿಗಾದರೂ ಅನ್ನಿಸದೇ ಇರದು. ಇಂತಹ ಜಿಲ್ಲೆಗೆ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಇತರೆಡೆಗಿಂತ ಹೆಚ್ಚಿನ ಒತ್ತು ನೀಡಬೇಕಿದೆ.

ಜಿಲ್ಲೆಯಲ್ಲಿ ಎಲ್ಲರೂ ಸುಂದರವಾದ, ಭವ್ಯವಾದ ಆಸ್ಪತ್ರೆಯ ಕಟ್ಟಡಗಳನ್ನು ಕಟ್ಟುವುದರ ಕಡೆಗೆ ಯೋಚಿಸುತ್ತಿದ್ದಾರೆಯೇ ವಿನಃ ಯಾವೊಬ್ಬ ಜನಪ್ರತಿನಿಧಿಗಳು ಈ ಕಟ್ಟಡದ ಒಳಗೆ ತಜ್ಞ ವೈದ್ಯರು ಇರುವಂತೆ ಮಾಡುವುದರ ಕಡೆಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ. ಹಿಂದಿನಿಂದಲೂ ಕೊಡಗು ಜಿಲ್ಲೆ ತಜ್ಞ ವೈದ್ಯರ ಕೊರತೆಯನ್ನೇ ಎದುರಿಸುತ್ತಿದೆ. ಅದು ಈಗಲೂ ಮುಂದುವರಿದಿದೆ.

ADVERTISEMENT

ಇಂತಹ ತಜ್ಞ ವೈದ್ಯರ ನೇಮಕಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಶ್ರಮಿಸಬೇಕಿದೆ. ಕೇಂದ್ರ ಸರ್ಕಾರದ ಯಾವುದಾದರೂ ಆರೋಗ್ಯ ಯೋಜನೆಯಡಿ ಕೊಡಗನ್ನೂ ಸೇರ್ಪಡೆ ಮಾಡಬೇಕಿದೆ. ಇಲ್ಲಿ ಕಾರ್ಯನಿರ್ವಹಿಸುವ ತಜ್ಞ ವೈದ್ಯರಿಗೆ ಬೇರೆ ಜಿಲ್ಲೆಗಳಿಗಿಂತ ಅಧಿಕ ವೇತನ, ಸವಲತ್ತುಗಳನ್ನು ನೀಡಬೇಕಿದೆ. ಆಗ ಮಾತ್ರವೇ ಇಲ್ಲಿ ತಜ್ಞ ವೈದ್ಯರು ಲಭ್ಯರಾಗಲು ಸಾಧ್ಯ.

ಮತ್ತೊಂದೆಡೆ ದಕ್ಷಿಣ ಕೊಡಗಿನ ಗರ್ಭಿಣಿಯರು ಮತ್ತು ಬಾಣಂತಿಯರ ನೆರವಿಗೆ ಕೇಂದ್ರದ ನೆರವಿನ ಅಗತ್ಯವಿದೆ. ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲೇ ತಿಂಗಳಿಗೆ 100ರಿಂದ 120 ಹೆರಿಗೆಗಳು ನಡೆಯುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ವಲಸೆ ಕಾರ್ಮಿಕರು, ಆದಿವಾಸಿಗಳು ಇದೇ ಭಾಗದಲ್ಲಿರುವುದರಿಂದ ಇಲ್ಲಿಗೆ ಸುಸ‌ಜ್ಜಿತವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬೇಕಿದೆ.

ಕೇರಳ ಗಡಿಭಾಗದ ಹೆಚ್ಚಿನವರು ಚಿಕಿತ್ಸೆಗಾಗಿ ಮಾನಂದವಾಡಿಯ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹಾಗಾಗಿ, ದಕ್ಷಿಣ ಕೊಡಗಿನಲ್ಲಿ ಉತ್ತಮ ಆಸ್ಪತ್ರೆಯ ಅಗತ್ಯ ಇದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಆಸ್ಪತ್ರೆ ನಿರ್ಮಿಸಲು ಅವಕಾಶವೂ ಇದೆ. ಇದರಡಿ ಕೇಂದ್ರ ಸರ್ಕಾರ ಆಸ್ಪತ್ರೆಯೊಂದನ್ನು ಮಂಜೂರು ಮಾಡಿಕೊಡಲಿ ಎಂದು ಜನರು ಒತ್ತಾಯವಾಗಿದೆ.

ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಈ ಕುರಿತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಾಗಿ ಪ್ರಸ್ತಾವವೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಇದನ್ನು ಸಲ್ಲಿಸಿ ಒಂದು ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಾದರೂ ಇದಕ್ಕೆ ಸ್ಥಾನ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರ
ಡಾ.ಕೆ.ಎಂ.ಸತೀಶ್‌ಕುಮಾರ್
ಗೋಣಿಕೊಪ್ಪಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಾಗಿ ಪ್ರಸ್ತಾವವೊಂದನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.
ಡಾ.ಕೆ.ಎಂ.ಸತೀಶ್‌ಕುಮಾರ್ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ
ಡಾ.ಲೋಕೇಶ್‌ 
ಕೆಲವೊಂದು ರೊಬೊಟಿಕ್ ಶಸ್ತ್ರಚಿಕಿತ್ಸೆ ಕ್ಯಾನ್ಸರ್ ಥೆರಪಿ ಸೇರಿದಂತೆ ಹಲವು ಬೇಡಿಕೆಗಳು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಪ್ರಸ್ತಾವ ಸಲ್ಲಿಸಲು ಪರಿಶೀಲನಾ ಹಂತದಲ್ಲಿವೆ
ಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ
ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೂ ಭರಪೂರ ಬೇಡಿಕೆ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೂ ಕೇಂದ್ರ ಬಜೆಟ್‌ ಮೇಲೆ ಸಾಲು ಸಾಲು ನಿರೀಕ್ಷೆಗಳಿವೆ. ಮುಖ್ಯವಾಗಿ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಸದ್ಯ 150 ಸೀಟುಗಳಿವೆ. ಇವುಗಳನ್ನು 200ಕ್ಕೆ ಏರಿಕೆ ಮಾಡಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ 100 ಇದ್ದು ಅವುಗಳನ್ನೂ ಏರಿಕೆ ಮಾಡಬೇಕಿದೆ. ಈಗ ಬಿಎಸ್‌ಸಿ ನರ್ಸಿಂಗ್ ಕಾಲೇಜನ್ನು ಸಂಸ್ಥೆ ತನ್ನ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸುತ್ತಿದೆ. ಇಲ್ಲಿ 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜಿಗೆ ಸ್ವಂತ ಕಟ್ಟಡ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಬೋಧನಾ ಹುದ್ದೆಗಳ ಮಂಜೂರಾತಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಗೂ ಉಪಕರಣಗಳನ್ನು ನೀಡಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕು ಎನ್ನುವುದು ಇಲ್ಲಿನ ಬಹುಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.